ಚಿಕ್ಕೋಡಿ: ವಿಧಿವಶರಾದ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗಾವಿಗೆ ಏರ್‌ಲಿಫ್ಟ್ ಮಾಡಲಾಗುತ್ತಿದ್ದು, ಹುಟ್ಟೂರಾದ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮಕ್ಕೆ ತರಲಾಗುತ್ತಿದೆ.
ಬೆಳಗ್ಗೆ 7ಕ್ಕೆ ಬೆಂಗಳೂರಿಂದ ಬೆಳಗಾವಿಗೆ ಏರ್ ಆ್ಯಂಬುಲೆನ್ಸ್ ಮೂಲಕ ಉಮೇಶ ಕತ್ತಿ ಪಾರ್ಥಿವ ಶರೀರ ರವಾನೆ ಮಾಡಲಾಗುವುದು ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣ ತಲುಪಿ, ನಂತರ ರಸ್ತೆ ಮಾರ್ಗವಾಗಿ ಸಂಕೇಶ್ವರ ಪಟ್ಟಣಕ್ಕೆ ಪಾರ್ಥಿವ ಶರೀರ ರವಾನೆ ನಡೆಯಲಿದೆ.
ಸಂಕೇಶ್ವರ ಪಟ್ಟಣದ ಹೀರಾ ಶುಗರ್ಸ್‌ನಲ್ಲಿ ಮಧ್ಯಾಹ್ನ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಉಮೇಶ ಕತ್ತಿ ತವರೂರಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. ಬೆಲ್ಲದ ಬಾಗೇವಾಡಿಯಲ್ಲಿ ಕತ್ತಿ ಅವರ ಒಡೆತನದ ವಿಶ್ವರಾಜ್ ಶುಗರ್ಸ್‌ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ನಂತರ ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿಯವರ ಹೊಲದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಸಂಜೆ 5ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. ಉಮೇಶ್ ಕತ್ತಿಯವರ ತಂದೆ ತಾಯಿ ಸಮಾಧಿ ಬಳಿಯೇ ಅವರ ಅಂತ್ಯಸಂಸ್ಕಾರವನ್ನೂ ನಡೆಸಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.
ಬೆಳಗಾವಿಯಿಂದ ಸ್ವಗ್ರಾಮ ಬೆಲ್ಲದ ಬಾಗೇವಾಡಿಗೆ ಕತ್ತಿ ಕುಟುಂಬಸ್ಥರು ಆಗಮಿಸಿದ್ದಾರೆ. ಸಚಿವರ ಸೊಸೆ, ಮೊಮ್ಮಗಳು, ಕುಟುಂಬಸ್ಥರು, ಆತ್ಮೀಯರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಉಮೇಶ್ ಕತ್ತಿ ನಿವಾಸಕ್ಕೆ ಆಗಮಿಸಿದ್ದು, ಪಾರ್ಥಿವ ಶರೀರದ ಆಗಮನಕ್ಕೆ ಕಾಯುತ್ತಿದ್ದಾರೆ.
ಈ ನಡುವೆ ಸಚಿವರ ಗೌರವಾರ್ಥ ಬೆಳಗಾವಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆಯನ್ನು ಸಿಎಂ ಘೋಷಿಸಿದ್ದಾರೆ. ಶಾಂತರೀತಿಯ ಅಂತ್ಯಕ್ರಿಯೆಗೆ ಸಹಕರಿಸುವಂತೆ ಸಿಎಂ ಮನವಿ ಮಾಡಿದ್ದಾರೆ.
ಇದನ್ನೂ ಓದಿ | 8 ಬಾರಿ ಶಾಸಕ ಉಮೇಶ್ ಕತ್ತಿ ಇನ್ನು 8 ತಿಂಗಳು ಇದ್ದಿದ್ದರೆ ಧರ್ಮ ಸಿಂಗ್ ದಾಖಲೆ ಮುರಿಯುತ್ತಿದ್ದರು !