ಬೆಳಗಾವಿ: ಮಾಜಿ ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ಕಂಗಾಲಾಗಿರುವ ಅವರ ತಮ್ಮ ರಮೇಶ್ ಕತ್ತಿ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗಿನ ಏರುಪೇರು ಕಂಡುಬಂದಿದೆ. ಕೂಡಲೇ ಅವರ ಹೃದಯ ತಪಾಸಣೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್ ನಲ್ಲಿ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ರಮೇಶ್ ಕತ್ತಿ ಅವರ ಆರೋಗ್ಯದಲ್ಲೇ ಏರುಪೇರಾಗಿದೆ.
ಉಮೇಶ್ ಕತ್ತಿ ಅವರು ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಮಂಗಳವಾರ ರಾತ್ರಿಯೇ ರಮೇಶ್ ಕತ್ತಿ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಧಾವಿಸಿದ್ದರು. ಮತ್ತು ರಾತ್ರಿ ನಿಧನದ ಸುದ್ದಿ ತಿಳಿಯುತ್ತಲೇ ತುಂಬ ನೋವು ಅನುಭವಿಸಿದ್ದರು. ರಾತ್ರಿ ಇಡೀ ನಿದ್ದೆ ಮಾಡದೆ ಅಣ್ಣನ ಜತೆಗಿದ್ದ ರಮೇಶ್ ಕತ್ತಿ ಅವರು ಮಧ್ಯಾಹ್ನ ಪಾರ್ಥಿವ ಶರೀರದೊಂದಿಗೆ ಬೆಳಗಾವಿಗೆ ಮರಳಿದ್ದರು.
ಅದಾದ ಬಳಿಕ ವಿಶ್ವರಾಜ್ ಶುಗರ್ಸ್ ನಲ್ಲಿ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರದ ದರ್ಶನ ನಡೆಯುತ್ತಿದ್ದಾಗ ಅಲ್ಲೇ ಇದ್ದರು. ಈ ಹೊತ್ತಲ್ಲಿ ಅವರಲ್ಲಿ ಸಣ್ಣ ಮಟ್ಟದ ಅಸ್ವಸ್ಥತೆ ಕಾಣಿಸಿಕೊಂಡಿತು. ಹೀಗಾಗಿ ಹೊರಗಡೆ ಅಣ್ಣನ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯುತ್ತಿದ್ದಾಗಲೇ ಒಳಗೆ ರಮೇಶ್ ಕತ್ತಿ ಅವರ ಆರೋಗ್ಯ ತಪಾಸಣೆ ನಡೆಯಿತು. ಅಲ್ಲೇ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಅವರ ಹೃದಯದ ಇಸಿಜಿ ಮಾಡಲಾಗಿದೆ. ಈಗ ಅವರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ ಎಂದು ತಿಳಿದುಬಂದಿದೆ.
ರಮೇಶ್ ಕತ್ತಿ ಅವರು ಈ ಹಿಂದೆ ಸಂಸದರಾಗಿದ್ದು, ಪ್ರಸಕ್ತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ| Umesh Katti | ಬೆಲ್ಲದ ಬಾಗೇವಾಡಿಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ: ಸಿಎಂ, ಮಾಜಿ ಸಿಎಂ ಆಗಮನ