ಬೆಳಗಾವಿ: ಉಮೇಶ್ ಕತ್ತಿ ಅವರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ತುಂಬ ದೊಡ್ಡ ಮಟ್ಟದಲ್ಲಿತ್ತು. ಅಗೇ ಆಗುತ್ತೇನೆ ಎನ್ನುವ ಭರವಸೆಯೂ ಇದ್ದಂತಿತ್ತು. ಅದನ್ನು ಅವರು ಮುಚ್ಚುಮರೆ ಇಲ್ಲದೆ ಹೇಳಿಕೊಂಡೇ ಬಂದಿದ್ದರು. ನನಗೆ ಮುಖ್ಯಮಂತ್ರಿ ಆಗಲೂ ಇನ್ನೂ ೧೫ ವರ್ಷ ಕಾಲಾವಕಾಶ ಇದೆ ಅಂತಿದ್ದ ಅವರಿಗೆ ಕಾಲವೇ ಸಮಯ ಕೊಡಲಿಲ್ಲ.
ಈ ಹೊತ್ತಿನಲ್ಲಿ ಅವರು ಹಿಂದೊಮ್ಮೆ ವಿಜಯಪುರದಲ್ಲಿ ಪತ್ರಕರ್ತರ ಜತೆ ಲೋಕಾಭಿರಾಮವಾಗಿ ಮಾತನಾಡಿದ ಒಂದು ವಿಡಿಯೊ ವೈರಲ್ ಆಗಿದೆ.
ಏನು ಹೇಳಿದ್ದರು ಕತ್ತಿ?
ಇದರಲ್ಲಿ ಅವರು ʻʻನನಗೀಗ 60 ವರ್ಷ. ಮುಖ್ಯಮಂತ್ರಿಯಾಗಲು ನನಗೆ ಇನ್ನೂ 15 ವರ್ಷ ಟೈಂ ಇದೆʼ ಎಂದು ಹೇಳಿದ್ದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ʻʻನನಗೆ ಸಿಎಂ ಆಗಲು ಅವಕಾಶ ಸಿಕ್ಕೇ ಸಿಗುತ್ತದೆ. ನಾನು 9 ಬಾರಿ ಎಂಎಲ್‌ಎ. ಈ ಅವಧಿಗೆ ನಾನೇನು ಬೇಡಿಕೆ ಇಟ್ಟಿಲ್ಲʼʼ ಎಂದಿದ್ದರು.
ಹೈಕಮಾಂಡ್‌ನವರು ಏನಾದರೂ ಹೇಳಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಕತ್ತಿ ಅವರ ಉತ್ತರ ಸ್ಪಷ್ಟವಿತ್ತು. ʻʻನಮ್ಮವರೇ ಮುಖ್ಯಮಂತ್ರಿ ಇದ್ದಾರೆ. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿದ್ದಾರೆ. ಹಾಗಾಗಿ ನಾನು ಮುಖ್ಯಮಂತ್ರಿ ಆಶೆ ಉಳ್ಳವನಲ್ಲ. ನನಗೆ ಇನ್ನೂ ೧೫ ವರ್ಷ ಟೈಮಿದೆ. ಯಾವಾಗಲಾದರೂ ಮುಖ್ಯಮಂತ್ರಿ ಸ್ಥಾನ ಸಿಗಬಹುದು ನೋಡೋಣʼʼ ಎಂದರು.
ಬೊಮ್ಮಾಯಿ ಅವರ ಬದಲಿಗೆ ನಿಮಗೆ ಅವಕಾಶ ಸಿಕ್ಕರೆ ಎಂಬ ಪ್ರಶ್ನೆಗೆ ʻನಿಮಗೆ ಬಂದು ಹೇಳುತ್ತೇನೆʼʼ ಎಂದು ನಗೆ ಚಟಾಕಿ ಹಾರಿಸಿದ್ದರು ಕತ್ತಿ. ʻʻನಾನು ಸಿಎಂ ಆದರೆ ನಿನಗೆ ಮಂತ್ರಿ ಮಾಡ್ತೇನೆʼʼ ಎಂದೂ ಪ್ರಶ್ನೆ ಕೇಳಿದ ಪತ್ರಕರ್ತರ ಜತೆ ನಗೆ ಚಟಾಕಿ ಹಾರಿಸಿದ್ದರು.
ಹಿಂದೆಯೂ ಹೇಳಿದ್ದರು ಕತ್ತಿ
ಆಗಾಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವ ಕತ್ತಿ ಅವರು ಕಳೆದ ಜೂನ್‌ನಲ್ಲಿ ಇದೇ ಮಾದರಿಯ ಇನ್ನೊಂದು ಹೇಳಿಕೆ ನೀಡಿದ್ದರು. ʻʻಈಗ ಎರಡೂ ಭಾಗಕ್ಕೆ ಅನ್ಯಾಯವಾಗದೆ ಕೆಲಸ ಆಗುತ್ತಿದೆ. ಈಗ ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ, ಐಕ್ಯತೆಯಿಂದ ಇದ್ದೇನೆ. ಕರ್ನಾಟಕ ವಿಭಜನೆ ಹೋರಾಟ ಕೈಬಿಟ್ಟಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಪ್ರತ್ಯೇಕ ಕೂಗು ಇರುತ್ತದೆ. ನಾನು ಸೀನಿಯರ್ ಎಂಎಲ್ಎ. 10 ಎಲೆಕ್ಷನ್ ಮಾಡಿದ್ದೇನೆ. 9 ಬಾರಿ ಗೆದ್ದು ಎಂಟು ಅವಧಿಗೆ ಅಧಿಕಾರ ಮಾಡಿದ್ದೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟಿಲ್ಲ ಅದಾಗಿ ಬಂದರೆ ನೋಡೋಣʼʼ ಎಂದಿದ್ದರು.
ʻʻರಾಜ್ಯ ಬಿಜೆಪಿಯಲ್ಲಿ ಹೊಸತನದ ವಿಚಾರ ಮೂಡುತ್ತಿದೆ. ಹಲವಾರು ಜನ ಯುವಕರಿದ್ದಾರೆ, ನಾನು ಕೂಡ ಯುವಕ. ನನಗೆ ಕೇವಲ 61 ವರ್ಷ. ಎಂಎಲ್ಎ ಆದಾಗ ಕೇವಲ 24 ವರ್ಷ. ನಾನು 75 ವರ್ಷದ ತನಕ ಯುವಕನೇ. ಮುಖ್ಯಮಂತ್ರಿ ಆಗುವ ಅವಕಾಶ ಇದೆ, ದೇವರ ದಯೆ ಇದೆ, ರಾಜ್ಯದ ಜನರ, ಎಲ್ಲರ ಆಶೀರ್ವಾದ ಇದ್ದರೆ ನಾನು ಒಂದು ದಿನ ಸಿಎಂ ಆಗುತ್ತೇನೆ. ನಾನು ಸಿಎಂ ಆಗುವ ಅವಸರದಲ್ಲಿ ಇಲ್ಲ. ನಾನು ಮುಖ್ಯಮಂತ್ರಿ ಬೇಕೇ ಬೇಕು ಅಂತ ಕೇಳಲ್ಲ. ಸಿಎಂ ಆಗಿ ರಾಜ್ಯ ನಿಭಾಯಿಸುವ ಕೆಪ್ಯಾಸಿಟಿ ನನಗೆ ಇದೆʼʼ ಎಂದು ಹೇಳಿಕೊಂಡಿದ್ದರು ಕತ್ತಿ.
ಇದನ್ನೂ ಓದಿ | 8 ಬಾರಿ ಶಾಸಕ ಉಮೇಶ್ ಕತ್ತಿ ಇನ್ನು 8 ತಿಂಗಳು ಇದ್ದಿದ್ದರೆ ಧರ್ಮ ಸಿಂಗ್ ದಾಖಲೆ ಮುರಿಯುತ್ತಿದ್ದರು !