ಉಮೇಶ್ ಕತ್ತಿ
Umesh Katti | ನಂಗಿನ್ನೂ 15 ವರ್ಷ ಟೈಮಿದೆ, ಸಿಎಂ ಆಗೇ ಆಗ್ತೀನಿ ಅಂದಿದ್ದ ವಿಡಿಯೊ ಈಗ ಮತ್ತೆ ವೈರಲ್
Umesh Katti ಅವರಿಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇತ್ತು. ಇದನ್ನು ಆವರು ತಮಾಷೆ ಎಂಬಂತೆ ಆಗಾಗ ಹೇಳುತ್ತಲೇ ಇದ್ದರು. ಹಾಗೆ ಹೇಳಿಕೊಂಡ ಒಂದು ತಮಾಷೆಯ ವಿಡಿಯೊ ಈಗ ವೈರಲ್ ಆಗುತ್ತಿದೆ.
ಬೆಳಗಾವಿ: ಉಮೇಶ್ ಕತ್ತಿ ಅವರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ತುಂಬ ದೊಡ್ಡ ಮಟ್ಟದಲ್ಲಿತ್ತು. ಅಗೇ ಆಗುತ್ತೇನೆ ಎನ್ನುವ ಭರವಸೆಯೂ ಇದ್ದಂತಿತ್ತು. ಅದನ್ನು ಅವರು ಮುಚ್ಚುಮರೆ ಇಲ್ಲದೆ ಹೇಳಿಕೊಂಡೇ ಬಂದಿದ್ದರು. ನನಗೆ ಮುಖ್ಯಮಂತ್ರಿ ಆಗಲೂ ಇನ್ನೂ ೧೫ ವರ್ಷ ಕಾಲಾವಕಾಶ ಇದೆ ಅಂತಿದ್ದ ಅವರಿಗೆ ಕಾಲವೇ ಸಮಯ ಕೊಡಲಿಲ್ಲ.
ಈ ಹೊತ್ತಿನಲ್ಲಿ ಅವರು ಹಿಂದೊಮ್ಮೆ ವಿಜಯಪುರದಲ್ಲಿ ಪತ್ರಕರ್ತರ ಜತೆ ಲೋಕಾಭಿರಾಮವಾಗಿ ಮಾತನಾಡಿದ ಒಂದು ವಿಡಿಯೊ ವೈರಲ್ ಆಗಿದೆ.
ಏನು ಹೇಳಿದ್ದರು ಕತ್ತಿ?
ಇದರಲ್ಲಿ ಅವರು ʻʻನನಗೀಗ 60 ವರ್ಷ. ಮುಖ್ಯಮಂತ್ರಿಯಾಗಲು ನನಗೆ ಇನ್ನೂ 15 ವರ್ಷ ಟೈಂ ಇದೆʼ ಎಂದು ಹೇಳಿದ್ದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ʻʻನನಗೆ ಸಿಎಂ ಆಗಲು ಅವಕಾಶ ಸಿಕ್ಕೇ ಸಿಗುತ್ತದೆ. ನಾನು 9 ಬಾರಿ ಎಂಎಲ್‌ಎ. ಈ ಅವಧಿಗೆ ನಾನೇನು ಬೇಡಿಕೆ ಇಟ್ಟಿಲ್ಲʼʼ ಎಂದಿದ್ದರು.
ಹೈಕಮಾಂಡ್‌ನವರು ಏನಾದರೂ ಹೇಳಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಕತ್ತಿ ಅವರ ಉತ್ತರ ಸ್ಪಷ್ಟವಿತ್ತು. ʻʻನಮ್ಮವರೇ ಮುಖ್ಯಮಂತ್ರಿ ಇದ್ದಾರೆ. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿದ್ದಾರೆ. ಹಾಗಾಗಿ ನಾನು ಮುಖ್ಯಮಂತ್ರಿ ಆಶೆ ಉಳ್ಳವನಲ್ಲ. ನನಗೆ ಇನ್ನೂ ೧೫ ವರ್ಷ ಟೈಮಿದೆ. ಯಾವಾಗಲಾದರೂ ಮುಖ್ಯಮಂತ್ರಿ ಸ್ಥಾನ ಸಿಗಬಹುದು ನೋಡೋಣʼʼ ಎಂದರು.
ಬೊಮ್ಮಾಯಿ ಅವರ ಬದಲಿಗೆ ನಿಮಗೆ ಅವಕಾಶ ಸಿಕ್ಕರೆ ಎಂಬ ಪ್ರಶ್ನೆಗೆ ʻನಿಮಗೆ ಬಂದು ಹೇಳುತ್ತೇನೆʼʼ ಎಂದು ನಗೆ ಚಟಾಕಿ ಹಾರಿಸಿದ್ದರು ಕತ್ತಿ. ʻʻನಾನು ಸಿಎಂ ಆದರೆ ನಿನಗೆ ಮಂತ್ರಿ ಮಾಡ್ತೇನೆʼʼ ಎಂದೂ ಪ್ರಶ್ನೆ ಕೇಳಿದ ಪತ್ರಕರ್ತರ ಜತೆ ನಗೆ ಚಟಾಕಿ ಹಾರಿಸಿದ್ದರು.
ಹಿಂದೆಯೂ ಹೇಳಿದ್ದರು ಕತ್ತಿ
ಆಗಾಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವ ಕತ್ತಿ ಅವರು ಕಳೆದ ಜೂನ್‌ನಲ್ಲಿ ಇದೇ ಮಾದರಿಯ ಇನ್ನೊಂದು ಹೇಳಿಕೆ ನೀಡಿದ್ದರು. ʻʻಈಗ ಎರಡೂ ಭಾಗಕ್ಕೆ ಅನ್ಯಾಯವಾಗದೆ ಕೆಲಸ ಆಗುತ್ತಿದೆ. ಈಗ ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ, ಐಕ್ಯತೆಯಿಂದ ಇದ್ದೇನೆ. ಕರ್ನಾಟಕ ವಿಭಜನೆ ಹೋರಾಟ ಕೈಬಿಟ್ಟಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಪ್ರತ್ಯೇಕ ಕೂಗು ಇರುತ್ತದೆ. ನಾನು ಸೀನಿಯರ್ ಎಂಎಲ್ಎ. 10 ಎಲೆಕ್ಷನ್ ಮಾಡಿದ್ದೇನೆ. 9 ಬಾರಿ ಗೆದ್ದು ಎಂಟು ಅವಧಿಗೆ ಅಧಿಕಾರ ಮಾಡಿದ್ದೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟಿಲ್ಲ ಅದಾಗಿ ಬಂದರೆ ನೋಡೋಣʼʼ ಎಂದಿದ್ದರು.
ʻʻರಾಜ್ಯ ಬಿಜೆಪಿಯಲ್ಲಿ ಹೊಸತನದ ವಿಚಾರ ಮೂಡುತ್ತಿದೆ. ಹಲವಾರು ಜನ ಯುವಕರಿದ್ದಾರೆ, ನಾನು ಕೂಡ ಯುವಕ. ನನಗೆ ಕೇವಲ 61 ವರ್ಷ. ಎಂಎಲ್ಎ ಆದಾಗ ಕೇವಲ 24 ವರ್ಷ. ನಾನು 75 ವರ್ಷದ ತನಕ ಯುವಕನೇ. ಮುಖ್ಯಮಂತ್ರಿ ಆಗುವ ಅವಕಾಶ ಇದೆ, ದೇವರ ದಯೆ ಇದೆ, ರಾಜ್ಯದ ಜನರ, ಎಲ್ಲರ ಆಶೀರ್ವಾದ ಇದ್ದರೆ ನಾನು ಒಂದು ದಿನ ಸಿಎಂ ಆಗುತ್ತೇನೆ. ನಾನು ಸಿಎಂ ಆಗುವ ಅವಸರದಲ್ಲಿ ಇಲ್ಲ. ನಾನು ಮುಖ್ಯಮಂತ್ರಿ ಬೇಕೇ ಬೇಕು ಅಂತ ಕೇಳಲ್ಲ. ಸಿಎಂ ಆಗಿ ರಾಜ್ಯ ನಿಭಾಯಿಸುವ ಕೆಪ್ಯಾಸಿಟಿ ನನಗೆ ಇದೆʼʼ ಎಂದು ಹೇಳಿಕೊಂಡಿದ್ದರು ಕತ್ತಿ.
ಇದನ್ನೂ ಓದಿ | 8 ಬಾರಿ ಶಾಸಕ ಉಮೇಶ್ ಕತ್ತಿ ಇನ್ನು 8 ತಿಂಗಳು ಇದ್ದಿದ್ದರೆ ಧರ್ಮ ಸಿಂಗ್ ದಾಖಲೆ ಮುರಿಯುತ್ತಿದ್ದರು !
ಉಮೇಶ್ ಕತ್ತಿ
ಅಧಿವೇಶನ | ಕತ್ತಿ ಅಜಾತಶತ್ರು, ಬೆಳಗಾವಿಗೆ ಹೋದಾಗ ಜತೆಗೇ ಊಟ ಕೂಡಾ ಮಾಡ್ತಾ ಇದ್ವಿ ಎಂದ ಸಿದ್ದರಾಮಯ್ಯ
ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಿದ್ದರಾಮಯ್ಯ ಅವರು ಉಮೇಶ್ ಕತ್ತಿ ಅವರ ಬಗ್ಗೆ ಮಾತನಾಡಿದರು.
ಬೆಂಗಳೂರು: ವಿಧಾನ ಮಂಡಲದ ಮಳೆಗಾಲದ ಅಧಿವೇಶನದ ಮೊದಲ ದಿನ ನಮ್ಮನ್ನು ಅಗಲಿದ ಮಾಜಿ ಸಚಿವರಾದ ಉಮೇಶ್ ಕತ್ತಿ, ಪ್ರಭಾಕರ ರಾಣೆ ಸೇರಿದಂತೆ ಹಲವು ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂತಾಪ ಸೂಚಿಸಿ ಮಾತನಾಡಿದ ಮಾಜಿ ಸಿಎಂ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಉಮೇಶ್ ಕತ್ತಿ ನನಗೂ ಬಹಳ ಆತ್ಮೀಯ. ಲೋಕೋಪಯೋಗಿ ಸಚಿವನಾಗಿದ್ದಾಗ ನನ್ನ ಬಳಿ ಯಾವಾಗಲೂ ಬರುತ್ತಿದ್ದರು. ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಾನು ಬೆಳಗಾವಿಗೆ ಹೋಗಿದ್ದಾಗ ಊಟಕ್ಕೆ ಕರೆದಿದ್ದರು. ತುಂಬ ಹೊತ್ತು ರಾಜಕೀಯವಾಗಿ ಚರ್ಚೆ ಮಾಡಿದೆವುʼʼ ಎಂದು ನೆನಪಿಸಿಕೊಂಡರು.
ʻʻಬೆಳಗಾವಿ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಬೆಳೆಸಿಕೊಂಡಿದ್ದ ಉಮೇಶ್ ಕತ್ತಿ ವರ್ಣರಂಜಿತ ರಾಜಕಾರಣಿ. ಆಡಳಿತ ಮತ್ತು ವಿಪಕ್ಷ ಶಾಸಕರ ಜತೆ ಸ್ನೇಹ ಜೀವಿಯಾಗಿ ಇದ್ದ ಅವರು ಅಜಾತಶತ್ರುʼʼ ಎಂದರು ಸಿದ್ದರಾಮಯ್ಯ. ಅವರು ಕಾಲಿಟ್ಟ ಎಲ್ಲ ರಂಗಗಳಲ್ಲೂ ಯಶಸ್ವಿ ಆಗಿದ್ದರು ಎಂದು ನೆನಪು ಮಾಡಿಕೊಂಡರು.
ʻʻಕತ್ತಿಗೆ ಪ್ರತ್ಯೇಕ ರಾಜ್ಯದ ಬೇಡಿಕೆ ಇಡಬೇಡ ಅಂತ ವೈಯಕ್ತಿಕ ಸಲಹೆ ಕೊಟ್ಟಿದ್ದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಬೇಡಿಕೆ ಇಡು, ಅಭಿವೃದ್ಧಿ ಬಗ್ಗೆ ಮಾತಾಡು, ಪ್ರತ್ಯೇಕತೆ ಮಾತು ಬೇಡ ಅಂದಿದ್ದೆʼʼ ಎಂದು ಸಿದ್ದರಾಮಯ್ಯ ಹೇಳಿದರು.
ಸಲೀಂ ಅಹ್ಮದ್ ಸಂತಾಪ
ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರೂ ಆಗಿರುವ ಎಂಎಲ್‌ಸಿ ಸಲೀಂ ಅಹಮದ್ ಅವರು ವಿಧಾನಪರಿಷತ್‌ನಲ್ಲಿ ಮಾತನಾಡಿದರು. ʻʻಉಮೇಶ್ ಕತ್ತಿ ಅವರು ಅಪರೂಪದ ರಾಜಕಾರಣಿ, ಮೊನ್ನೆ ಸೆಪ್ಟೆಂಬರ್ ೧ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಿಗೆ ಸಿಕ್ಕರು. ಎರಡು ಗಂಟೆಯಲ್ಲಿ ಅನೇಕ ವಿಚಾರಗಳು ಚರ್ಚೆ ಮಾಡಿದೆವು. ಅವರು ತುಂಬಾ ಜನರಿಗೆ ಉದ್ಯೋಗ ಕೊಟ್ಟರು. ಅವರ ನಿಧನವನ್ನು ಅರಗಿಸಿಕೊಳ್ಳಲಾಗುತ್ತಿಲ್ಲʼʼ ಎಂದರು.
ಉಮೇಶ್ ಕತ್ತಿ
ಅಧಿವೇಶನ | ಎಲ್ಲ ಪಕ್ಷಗಳ ಬಿ ಫಾರಂ ನನ್ನ ಕಿಸೆಯಲ್ಲಿದೆ ಅಂತಿದ್ದರು ಕತ್ತಿ, ನೆನಪು ಮಾಡಿಕೊಂಡ ಬೊಮ್ಮಾಯಿ
ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿದ್ದ ಉಮೇಶ್ ಕತ್ತಿ ಸೇರಿದಂತೆ ಈ ಅವಧಿಯಲ್ಲಿ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಬೆಂಗಳೂರು: ಉಮೇಶ್ ಕತ್ತಿ ಅವರು ತುಂಬಾ ಆತ್ಮೀಯ ನಡವಳಿಕೆಯ ವ್ಯಕ್ತಿ. ಕ್ಷೇತ್ರದ ಜನರಿಗೆ ಬಹಳ ಪ್ರೀತಿ ಪಾತ್ರರಾಗಿದ್ದರಲ್ಲದೆ, ಎಲ್ಲ ರಾಜಕೀಯ ನಾಯಕರ ಜತೆಗೂ ತುಂಬ ಒಳ್ಳೆಯ ಸಂಬಂಧ ಹೊಂದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸೋಮವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದ ಆರಂಭದ ದಿನ ಉಮೇಶ್ ಕತ್ತಿ ಸೇರಿದಂತೆ ಹಲವು ನಾಯಕರು, ಗಣ್ಯರ ನಿಧನಕ್ಕೆ ಸಂತಾಪ ಸೂಚಿಸಿ ಅವರು ಮಾತನಾಡಿದರು.
ʻʻಎಲ್ಲವೂ ಸರಿ ಇದ್ದಿದ್ದರೆ ಇಂದು ಉಮೇಶ್ ಕತ್ತಿ ನಮ್ಮ ಜತೆ ಇರಬೇಕಿತ್ತು. ಮೊದಲ ಸಾಲಿನಲ್ಲಿ ಅವರು ಕೂರಬೇಕಿತ್ತುʼʼ ಎಂದು ಹೇಳಿದ ಬೊಮ್ಮಾಯಿ ಅವರು, ಉಮೇಶ್ ಕತ್ತಿ ಅವರು ಎಲ್ಲ ಪಾರ್ಟಿಗಳ ಬಿ ಫಾರಂ ನನ್ನ ಕಿಸೆಯಲ್ಲಿದೆ ಎಂದು ಹೇಳ್ತಿದ್ದರುʼʼ ಎಂದರು. ೧೯೮೫ರಲ್ಲಿ ಮೊದಲ ಬಾರಿ ಶಾಸಕರಾದ ಕತ್ತಿ ಅವರು ಬಳಿಕ ಆರು ಪಕ್ಷಗಳಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಎಂಟು ಬಾರಿ ಗೆದ್ದು ಶಾಸಕರಾಗಿದ್ದಾರೆ. ೧೯೮೫ರಲ್ಲಿ ಜನತಾ ಪಕ್ಷದಿಂದ, ೧೯೮೯, ೧೯೯೪ರಲ್ಲಿ ಜನತಾ ದಳದಿಂದ, ೧೯೯೯ರಲ್ಲಿ ಸಂಯುಕ್ತ ಜನತಾದಳದಿಂದ, ೨೦೦೪ರಲ್ಲಿ ಕಾಂಗ್ರೆಸ್‌ನಿಂದ (ಆಗ ಸೋತಿದ್ದರು) ಸ್ಪರ್ಧಿಸಿದ್ದರು. ೨೦೦೪ರಲ್ಲಿ ಮತ್ತೆ ಜೆಡಿಎಸ್‌ಗೆ ಬಂದರಾದರೂ ಗೆದ್ದ ಬಳಿಕ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದರು. ಅಲ್ಲಿಂದ ಬಳಿಕ ಅವರು ಬಿಜೆಪಿಯಲ್ಲೇ ಇದ್ದಾರೆ.
ಸಹಕಾರಿ ಸಕ್ಕರೆ ಕಾರ್ಖಾನೆ ಜನಕ
ʻʻಬೆಳಗಾವಿ ಜಿಲ್ಲೆಯಲ್ಲಿ ಇಷ್ಟೊಂದು ಸಕ್ಕರೆ ಕಾರ್ಖಾನೆಗಳು ಬೆಳೆಯಲು, ಈ ಮಟ್ಟಕ್ಕೆ ಅಭಿವೃದ್ಧಿ ಕಾಣಲು ಉಮೇಶ್ ಕತ್ತಿ ಅವರೇ ಕಾರಣ. ಅದರಲ್ಲೂ ಸಹಕಾರಿ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಇವರೇ ಮೂಲ ಪುರುಷರುʼʼ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.
ಕತ್ತಿ ಅವರು ಜನರ ಜತೆ ಸೇರಿ ಬೆಳೆದ ರಾಜಕಾರಣಿ ಎಂದು ಹೇಳಿದ ಬೊಮ್ಮಾಯಿ ಅವರು ಹುಕ್ಕೇರಿ ಕ್ಷೇತ್ರವನ್ನು ದಾಟಿ ಹೋಗುವಾಗ ಬೆಲ್ಲದ ಚಹ ಕುಡಿದು ಸ್ನೇಹಯುತವಾಗಿ ಮಾತನಾಡಿಸಿಕೊಂಡೇ ಹೋಗಬೇಕಾಗಿತ್ತು ಎಂದು ನೆನಪು ಮಾಡಿಕೊಂಡರು.
ʻʻದೇವೇಗೌಡರು ಮೊದಲ ಬಾರಿ ಸಂಪುಟ ರಚನೆ ಮಾಡಿದಾಗ ಅವಕಾಶ ಕೊಡಲಿಲ್ಲ ಸಹಜವಾಗಿ ಬೇಸರ ವ್ಯಕ್ತಪಡಿಸಿದರು. ನಂತರ ನಡೆದ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ತಮ್ಮ ಟೀಮನ್ನು ಪ್ರತ್ಯೇಕವಾಗಿ ಗೆಲ್ಲಿಸಿಕೊಂಡುಬಂದರು. ಜೈಲು ಖಾತೆ ಕೊಟ್ಟಾಗ ಕಾಯಂ ಆಗಿ ನನ್ನನ್ನು ಜೈಲಿಗೆ ಹಾಕುವ ಯೋಚನೆ ಮಾಡಿದ್ದೀರಾ ಎಂದು ಹಾಸ್ಯ ಮಾಡಿದರು. ಖಾತೆಯನ್ನು ಚೆನ್ನಾಗಿ ನಿಭಾಯಿಸಿದರುʼʼ ಎಂದರು ಬೊಮ್ಮಾಯಿ.
ರಾಗಿ, ಜೋಳ, ಸಿರಿಧಾನ್ಯದ ಮೂಲಕ ಪಡಿತರ ಕ್ರಾಂತಿ
ʻʻಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾದ ಬಳಿಕ ಪಡಿತರಕ್ಕೆ ರಾಗಿ ಮತ್ತು ಜೋಳ ಸೇರಿಸಬೇಕು ಎಂಬ ಪ್ರಸ್ತಾವನೆಯನ್ನು ಮುಂದಿಟ್ಟರು. ಇವತ್ತು ರಾಜ್ಯದ ಪಡಿತರ ವ್ಯವಸ್ಥೆಯಲ್ಲಿ ರಾಗಿ ಮತ್ತು ಜೋಳ ಇದ್ದರೆ, ಸಿರಿಧಾನ್ಯ ಇದ್ದರೆ ಅದಕ್ಕೆ ಕಾರಣ ಉಮೇಶ್ ಕತ್ತಿʼʼ ಎಂದು ಶ್ಲಾಘಿಸಿದರು ಬೊಮ್ಮಾಯಿ.
ರಾಜ್ಯ ವಿಭಾಗ ಆಗಬೇಕು ಅನ್ನೋ ನಿಲುವಲ್ಲ ಅವರದು
ಕತ್ತಿ ಅಂದ ಕೂಡಲೇ ಪ್ರತ್ಯೇಕ ರಾಜ್ಯ ಕೇಳುವವರು ಎಂಬ ಪ್ರತೀತಿ ಇದೆ. ಆದರೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದಕ್ಕೆ ಬೇರೆ ಆಯಾಮ ನೀಡಿದರು.
ʻʻಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಆಗಬೇಕು ಅನ್ನೋ ಆಸೆ ಅವರಿಗೆ ಇತ್ತು. ಹೀಗಾಗಿಯೇ ಅವರು ಕೆಲವು ಸಲ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದರು. ಆದರೆ, ಮೂಲತಃ ಅವರಿಗೆ ರಾಜ್ಯ ಎರಡಾಗಬೇಕು ಎನ್ನುವ ಯಾವುದೇ ಅಭಿಪ್ರಾಯ ಇರಲಿಲ್ಲ. ಅಭಿವೃದ್ಧಿಯ ಸಲುವಾಗಿ ನಿರಂತರ ಒತ್ತಡ ಇರಬೇಕು ಎಂದು ಭಾವಿಸಿದ್ದರುʼʼ ಎಂದು ಹೇಳಿದರು.
ʻʻಆನೆಗಳು ಊರಿನ ಒಳಗೆ ಬರುತ್ತಿವೆ ಏನು ಮಾಡಬೇಕುʼʼ ಎಂದು ಕೇಳಿದಾಗ ʻʻಜನ ಅರಣ್ಯಕ್ಕೆ ಹೋಗವುದನ್ನು ಬಿಡಲಿ. ಆನೆ ನಾಡಿಗೆ ಬರಲ್ಲʼʼ ಎಂದು ನೇರವಾಗಿ ಹೇಳುವಷ್ಟು ಖಡಕ್‌ತನ ಅವರಲ್ಲಿತ್ತು ಎಂದರು ಬೊಮ್ಮಾಯಿ.
ಉಮೇಶ್ ಕತ್ತಿ
Umesh Katti | ಕತ್ತಿ ನಿವಾಸಕ್ಕೆ ಅರುಣ್ ಸಿಂಗ್ ಸೇರಿ ಬಿಜೆಪಿ ನಾಯಕರ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಜೆ.ಸಿ.ಮಾಧುಸ್ವಾಮಿ ಉಮೇಶ್ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ದಿ. ಸಚಿವ ಉಮೇಶ್ ಕತ್ತಿ (Umesh Katti) ಅವರ ನಿವಾಸಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಜೆ.ಸಿ.ಮಾಧುಸ್ವಾಮಿ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿದರು.
ಉಮೇಶ್ ಕತ್ತಿ ಪತ್ನಿ ಶೀಲಾ, ಸಹೋದರ ರಮೇಶ್ ಕತ್ತಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮುಖಂಡರು, ಕತ್ತಿ ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಉಮೇಶ್ ಕತ್ತಿ ನನ್ನ ಆತ್ಮೀಯ ಮಿತ್ರ. ಬೆಳಗಾವಿ, ಬೆಂಗಳೂರು, ದೆಹಲಿಯಲ್ಲಿ ಭೇಟಿಯಾದಾಗ ರಾಜ್ಯದ ಅಭಿವೃದ್ಧಿ, ಪಕ್ಷ ಸಂಘಟನೆ ಬಗ್ಗೆ ಹಲವು ಸಲಹೆ ನೀಡುತ್ತಿದ್ದರು. ಉಮೇಶ್ ಕತ್ತಿ ಬಿಂದಾಸ್ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಪಕ್ಷ, ರಾಜ್ಯಕ್ಕೆ ಅಪಾರ ನಷ್ಟವಾಗಿದೆ ಎಂದರು.
ಇದನ್ನೂ ಓದಿ | Rain News | ವಿಜಯನಗರ ಜಿಲ್ಲೆಯಲ್ಲಿ ವಿವಿಧೆಡೆ ಮನೆಗಳಿಗೆ ಹಾನಿ, ಅಪಾರ ಪ್ರಮಾಣದ ಬೆಳೆ ನಷ್ಟ
ಒಬ್ಬ ರಾಜಕೀಯ ನಾಯಕ 40 ವರ್ಷಗಳ ಶಾಸಕನಾಗಿ ಮಾಡಿದ ಕೆಲಸ, ದೂರದೃಷ್ಟಿ, ಆಲೋಚನೆಗಳು ಎಲ್ಲರಿಗೂ ಗೊತ್ತಾಗಬೇಕಿದೆ. ಕತ್ತಿ ಅವರ ರಾಜಕೀಯ ಜೀವನವು ಪುಸ್ತಕದ ರೂಪದಲ್ಲಿ ಹೊರ ಬರಬೇಕು ಎಂದರು.
ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, ಉಮೇಶ್ ಕತ್ತಿ ಅಕಾಲಿಕ ನಿಧನದಿಂದ ರಾಜ್ಯಕ್ಕೆ ನಷ್ಟವಾಗಿದೆ. ಕತ್ತಿ ಆಸ್ಪತ್ರೆಗೆ ದಾಖಲಾದಾಗ ನನಗೆ ಗೊತ್ತಾಯಿತು. ವೈದ್ಯರನ್ನು ಕರೆಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಯಿತು. ಆದರೆ ವಿಧಿ ಆಟದ ಮುಂದೆ ನಮ್ಮ ಪ್ರಯತ್ನ ಫಲಿಸಲಿಲ್ಲ ಎಂದರು.
ಅದೇ ರೀತಿ ಬೆಲ್ಲದ ಬಾಗೇವಾಡಿಯ ಉಮೇಶ್ ಕತ್ತಿ ನಿವಾಸಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಭೇಟಿ ನೀಡಿ ಕತ್ತಿ ಪತ್ನಿ, ಮಕ್ಕಳಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಪ್ರಲ್ಹಾದ್ ಜೋಶಿ, ಉಮೇಶ್ ಕತ್ತಿ ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಭೇಟಿಯಾಗಿದ್ದರು. ಅವರ ಅಕಾಲಿಕ ಸಾವು ನೋವು ತಂದಿದೆ ಎಂದರು.
ಬಾಲಚಂದ್ರ ಜಾರಕಿಹೊಳಿ ಭೇಟಿ
ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡ ಉಮೇಶ್ ಕತ್ತಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಬಾಲಚಂದ್ರ ಜಾರಕಿಹೊಳಿ ಜತೆ ಅಣ್ಣನ ಇತ್ತೀಚಿನ ಸ್ವಾರಸ್ಯಕರ ಸಂಗತಿಗಳ ಬಗ್ಗೆ ರಮೇಶ್ ಕತ್ತಿ ಮಾಹಿತಿ ಹಂಚಿಕೊಂಡರು.
“ಒಂದು ತಿಂಗಳ ಅವಧಿಯಲ್ಲಿ ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಅಣ್ಣ ಉಮೇಶ್ ಕತ್ತಿ ಸಂಚಾರ ಮಾಡಿದ್ದಾರೆ. ಅಲ್ಲಿ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಪ್ರತಿ ಹಳ್ಳಿ ಸುತ್ತಿ ಕುಡಿಯುವ ನೀರು, ಕೃಷಿಗೆ ನೀರಾವರಿ, ಸಮುದಾಯ ಭವನ ಸೌಲಭ್ಯವನ್ನು ಕಲ್ಪಿಸಿರುವೆ. ಇನ್ನೂ ಏನಾದರೂ ಕಡಿಮೆ ಆಗಿದ್ದರೆ ಹೇಳಿ” ಎಂದು ಜನರ ಬಳಿಯೇ ಕೇಳುತ್ತಿದ್ದರು ಎಂದು ರಮೇಶ್ ಕತ್ತಿ ಸ್ಮರಿಸಿದ್ದಾರೆ.
ಬಳಿಕ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೂಡ ಆಗಮಿಸಿ ಉಮೇಶ್ ಕತ್ತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಕತ್ತಿ ನಿವಾಸದತ್ತ ಅಭಿಮಾನಿಗಳ ದಂಡು
ಉಮೇಶ್ ಕತ್ತಿ ಕುಟುಂಬವರಿಗೆ ಸಾಂತ್ವನ ಹೇಳಲು ಬೆಲ್ಲದ ಬಾಗೇವಾಡಿಯತ್ತ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಧಾವಿಸಿದ್ದು, ಕತ್ತಿ ಕುಟಂಬದ ನೋವಿನಲ್ಲಿ ಭಾಗಿಯಾಗಿದ್ದಾರೆ. ಅಣ್ಣ ಅಗಲಿದ ನೋವಲ್ಲಿ ಕಣ್ಣೀರು ಹಾಕುತ್ತಿರುವ ರಮೇಶ್ ಕತ್ತಿಯನ್ನು ಅಭಿಮಾನಿಗಳು ತಬ್ಬಿಕೊಂಡು ಸಮಾಧಾನ ಪಡಿಸಿದ್ದಾರೆ.
ಇದನ್ನೂ ಓದಿ | Bharath jodo| ಭಾರತ್ ಜೋಡೋ ಒಳ್ಳೆಯ ಕಾರ್ಯಕ್ರಮ: ಪಾಕಿಸ್ತಾನ, ಬಾಂಗ್ಲಾವನ್ನೂ ಜೋಡಿಸಲಿ ಎಂದ ಈಶ್ವರಪ್ಪ
ಉಮೇಶ್ ಕತ್ತಿ
Umesh katti ತಮ್ಮ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು, ಹೃದಯ ತಪಾಸಣೆ
ಮಂಗಳವಾರ ರಾತ್ರಿ ನಿಧನರಾದ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ಅವರ ತಮ್ಮ ರಮೇಶ್ ಕತ್ತಿ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ.
ಬೆಳಗಾವಿ: ಮಾಜಿ ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ಕಂಗಾಲಾಗಿರುವ ಅವರ ತಮ್ಮ ರಮೇಶ್ ಕತ್ತಿ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗಿನ ಏರುಪೇರು ಕಂಡುಬಂದಿದೆ. ಕೂಡಲೇ ಅವರ ಹೃದಯ ತಪಾಸಣೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್ ನಲ್ಲಿ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ರಮೇಶ್ ಕತ್ತಿ ಅವರ ಆರೋಗ್ಯದಲ್ಲೇ ಏರುಪೇರಾಗಿದೆ.
ಉಮೇಶ್ ಕತ್ತಿ ಅವರು ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಮಂಗಳವಾರ ರಾತ್ರಿಯೇ ರಮೇಶ್ ಕತ್ತಿ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಧಾವಿಸಿದ್ದರು. ಮತ್ತು ರಾತ್ರಿ ನಿಧನದ ಸುದ್ದಿ ತಿಳಿಯುತ್ತಲೇ ತುಂಬ ನೋವು ಅನುಭವಿಸಿದ್ದರು. ರಾತ್ರಿ ಇಡೀ ನಿದ್ದೆ ಮಾಡದೆ ಅಣ್ಣನ ಜತೆಗಿದ್ದ ರಮೇಶ್ ಕತ್ತಿ ಅವರು ಮಧ್ಯಾಹ್ನ ಪಾರ್ಥಿವ ಶರೀರದೊಂದಿಗೆ ಬೆಳಗಾವಿಗೆ ಮರಳಿದ್ದರು.
ಅದಾದ ಬಳಿಕ ವಿಶ್ವರಾಜ್ ಶುಗರ್ಸ್ ನಲ್ಲಿ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರದ ದರ್ಶನ ನಡೆಯುತ್ತಿದ್ದಾಗ ಅಲ್ಲೇ ಇದ್ದರು. ಈ ಹೊತ್ತಲ್ಲಿ ಅವರಲ್ಲಿ ಸಣ್ಣ ಮಟ್ಟದ ಅಸ್ವಸ್ಥತೆ ಕಾಣಿಸಿಕೊಂಡಿತು. ಹೀಗಾಗಿ ಹೊರಗಡೆ ಅಣ್ಣನ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯುತ್ತಿದ್ದಾಗಲೇ ಒಳಗೆ ರಮೇಶ್ ಕತ್ತಿ ಅವರ ಆರೋಗ್ಯ ತಪಾಸಣೆ ನಡೆಯಿತು. ಅಲ್ಲೇ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಅವರ ಹೃದಯದ ಇಸಿಜಿ ಮಾಡಲಾಗಿದೆ. ಈಗ ಅವರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ ಎಂದು ತಿಳಿದುಬಂದಿದೆ.
ರಮೇಶ್ ಕತ್ತಿ ಅವರು ಈ ಹಿಂದೆ ಸಂಸದರಾಗಿದ್ದು, ಪ್ರಸಕ್ತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ| Umesh Katti | ಬೆಲ್ಲದ ಬಾಗೇವಾಡಿಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ: ಸಿಎಂ, ಮಾಜಿ ಸಿಎಂ ಆಗಮನ
-
ಕರ್ನಾಟಕ18 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ15 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ9 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ಕರ್ನಾಟಕ13 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ದೇಶ14 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ17 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ9 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ
-
ಕರ್ನಾಟಕ15 hours ago
ಕಲಬುರಗಿಯಲ್ಲಿ ಚಂಡಿಕಾ ಹೋಮದ ಬೆಂಕಿಯಲ್ಲಿ ಕಾಣಿಸಿಕೊಂಡ ದುರ್ಗಾ ದೇವಿ!; ಇಲ್ಲಿದೆ ನೋಡಿ ಫೋಟೊ