Site icon Vistara News

8 ಬಾರಿ ಶಾಸಕ ಉಮೇಶ್‌ ಕತ್ತಿ ಇನ್ನು 8 ತಿಂಗಳು ಇದ್ದಿದ್ದರೆ ಧರ್ಮ ಸಿಂಗ್‌ ದಾಖಲೆ ಮುರಿಯುತ್ತಿದ್ದರು !

Umesh Katti

ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅರಣ್ಯ ಖಾತೆ ಸಚಿವ ಉಮೇಶ್‌ ಕತ್ತಿ ನಿಧನರಾಗಿದ್ದಾರೆ. ಉಮೇಶ್‌ ಕತ್ತಿ ಎಂದ ಕೂಡಲೆ ಇತ್ತೀಚಿನ ದಿನಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ ನೆನಪಾಗುವುದು ಅವರ ಮಾತು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು, ನಾನು ಸಿಎಂ ಆಗುತ್ತೇನೆ ಎನ್ನುವ ಮಾತುಗಳು ವಿವಾದದ ಕಿಡಿಯನ್ನು ಹೊತ್ತಿಸುತ್ತಿದ್ದವು.

ಸರ್ಕಾರದ ಹಿರಿಯ ಸಚಿವರು ಎಂದು ಅವರನ್ನು ಹೇಳುವುದು ಅವರ ವಯಸ್ಸಿನ ಕಾರಣಕ್ಕಲ್ಲ, ಸುದೀರ್ಘ ಅವಧಿಯ ಚುನಾವಣೆ ಗೆಲುವಿನ ಕಾರಣಕ್ಕೆ. ಅವರಿಗೆ ಈಗ 61 ವರ್ಷ. ರಾಜಕಾರಣದಲ್ಲಿ 61 ಎನ್ನುವುದು ಹೆಚ್ಚಿನ ವಯಸ್ಸಲ್ಲ. ಬಿಜೆಪಿಯ ಅಘೋಷಿತ ನಿವೃತ್ತಿ ವಯೋಮಾನದ ಪ್ರಕಾರವೇ ಇನ್ನೂ ಒಂದೂವರೆ ದಶಕ ಅವರು ಸಕ್ರಿಯ ರಾಜಕಾರಣದಲ್ಲಿರಬಹುದಿತ್ತು.

ಹಿರಿತನ ಹಾಗೂ ೩೭ ವರ್ಷಗಳ ರಾಜಕೀಯ ಅನುಭವ ಹೊಂದಿದ್ದ ಅವರು ೧೯೮೫ರಲ್ಲಿ ಜನತಾ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದುಕೊಂಡಿದ್ದರು. ಬಳಿಕ ಜೆಡಿಎಸ್‌, ಕಾಂಗ್ರೆಸ್‌ ಸೇರ್ಪಡೆಗೊಂಡು ಅಂತಿಮವಾಗಿ ಬಿಜೆಪಿ ಮೂಲಕ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಿದ್ದರು. ಒಟ್ಟಾರೆಯಾಗಿ ಅವರು ರಾಜ್ಯ ಕಂಡ ಅತ್ಯಂತ ಮುತ್ಸದ್ದಿ ನಾಯಕ ಎನಿಸಿಕೊಂಡಿದ್ದರು.

ಒಟ್ಟು ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗುವ ದಾಖಲೆ ಬರೆದಿದ್ದರು. ಕರ್ನಾಟಕದಲ್ಲಿ ಈ ದಾಖಲೆಯನ್ನು ಇಬ್ಬರು ಬರೆದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಒಂಭತ್ತು ಬಾರಿ ಜಯಿಸಿದ್ದರೆ ಮಾಜಿ ಸಿಎಂ ದಿವಂಗತ ಎನ್‌. ಧರ್ಮ ಸಿಂಗ್‌ ಅವರು ಎಂಟು ಬಾರಿ ಶಾಸಕರಾಗಿದ್ದರು. ಹುಕ್ಕೇರಿ ಕ್ಷೇತ್ರವನ್ನು ಎಂಟು ಬಾರಿ ಪ್ರತಿನಿಧಿಸಿದ್ದ ಉಮೇಶ್‌ ಕತ್ತಿ ಅವರೇ ಹೇಳಿಕೊಂಡಂತೆ ಇನ್ನೂ 15 ವರ್ಷ ಅವರು ಶಾಸಕರಾಗಿರುತ್ತಿದ್ದರು. 2023ರಲ್ಲಿ ಜಯಿಸಿದ್ದರೆ ಧರ್ಮ ಸಿಂಗ್‌ ಅವರ ದಾಖಲೆಯನ್ನು ಮುರಿದು ಮಲ್ಲಿಕಾರ್ಜುನ ಖರ್ಗೆ ಅವರ ಸರಿಸಾಟಿಯಾಗಿ ನಿಲ್ಲುತ್ತಿದ್ದರು.

ಆಗಸ್ಟ್‌ ಮೊದಲ ವಾರದಲ್ಲಿ ವಿಜಯಪುರದಲ್ಲಿ ಮಾತನಾಡಿದ್ದ ಕತ್ತಿ, ಈಗಲೂ ಹೇಳ್ತೀನಿ, ನಾನು ಸಿಎಂ ಆಕಾಂಕ್ಷಿ. 75 ವರ್ಷಕ್ಕೂ ನಾನು ಆಕಾಂಕ್ಷಿ. ನಸೀಬು ಇದ್ರೆ ನಾಳೆನೇ ಸಿಎಂ ಆಗಬಹುದು.. 15 ವರ್ಷ ಆದ್ಮೇಲೆಯೂ ಸಿಎಂ ಸೀಟ್ ಬರಬಹುದು..ʼʼ ಎಂದರು ಕತ್ತಿ. ಆದರೆ, ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯನ್ನು ಕಿತ್ತು ಹಾಕಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳುವವ ನಾನಲ್ಲ ಎಂದರು. ʻʻನನಗೆ ಇನ್ನೂ ೧೫ ವರ್ಷದ ಅವಕಾಶವಿದೆ. ಹಾಗಾಗಿ ಅವಸರವೇನೂ ಇಲ್ಲʼʼ ಎಂದಿದ್ದರು.

ಪ್ರತ್ಯೇಕ ರಾಜ್ಯಕ್ಕೆ ಲಾಜಿಕ್‌ !

ಉಮೇಶ್‌ ಕತ್ತಿ ಪ್ರತ್ಯೇಕ ರಾಜ್ಯದ ಮಾತನ್ನು ಆಡಿದ ಕೂಡಲೆ ವಿವಾದ ಭುಗಿಲೇಳುತ್ತಿತ್ತು. ಆದರೆ ಕತ್ತಿ ಎಂದಿಗೂ ಅದಕ್ಕೆ ನಗುನಗುತ್ತಲೇ ಉತ್ತರಿಸುತ್ತಿದ್ದರು. ಕತ್ತಿ ಅವರ ಸ್ನೇಹಿತರೂ ಆದ ಹಿರಿಯ ಸಚಿವ ಗೋವಿಂದ ಕಾರಜೋಳ ಅವರು ಹೇಳಿವಂತೆ, ಪ್ರತ್ಯೇಕ ರಾಜ್ಯದ ಬೇಡಿಕೆ ಎನ್ನುವುದನ್ನು ಗಂಭೀರವಾಗಿ ಹೇಳುತ್ತಿರಲಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿಯಬಾರದು ಎನ್ನುವುದು ಅವರ ಮನದಾಳದ ಇಂಗಿತವಾಗಿತ್ತು. ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳೀದಿರುವುದಕ್ಕೆ ಪ್ರತ್ಯೇಕ ರಾಜ್ಯದ ಬೇಡಿಕೆ ಎನ್ನುತ್ತಿದ್ದ ಉಮೇಶ್‌ ಕತ್ತಿ ಇತ್ತೀಚೆಗೆ ಹೊಸ ಲಾಜಿಕ್‌ ಮುಂದಿಡುತ್ತಿದ್ದರು.

ಜೂನ್‌ನಲ್ಲಿ ಈ ಬಗ್ಗೆ ಮಾತನಾಡಿದ್ದ ಕತ್ತಿ, ದೇಶದಲ್ಲಿ 30 ರಾಜ್ಯಗಳಿವೆ. ಈ ಪೈಕಿ 50 ರಾಜ್ಯಗಳನ್ನಾಗಿ ಮಾಡಬೇಕು ಎನ್ನುವ ಚರ್ಚೆ ಆಗ್ತಿದೆ. ಉತ್ತರ ಪ್ರದೇಶದಲ್ಲಿ 21 ಕೋಟಿ ಜನಸಂಖ್ಯೆ ಇದ್ದು 4 ರಾಜ್ಯವಾಗಬೇಕು. ಮಹಾರಾಷ್ಟ್ರದಲ್ಲಿ 11 ಕೋಟಿ ಜನಸಂಖ್ಯೆ ಇದ್ದು ಅದನ್ನು 3 ರಾಜ್ಯ ಮಾಡಬೇಕು. ಅದರಂತೆ ಕರ್ನಾಟಕ ಆರೂವರೆ ಕೋಟಿ ಜನಸಂಖ್ಯೆ ಇದೆ. ಈ ಹಿನ್ನೆಲೆ ಎರಡು ರಾಜ್ಯಗಳಾಗಿ ವಿಂಗಡಣೆ ಆಗಬೇಕು ಎಂದಿದ್ದರು.

ನಾನು 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯವಾಗಬೇಕು. ಮುಂದೆಯೂ ಬಿಜೆಪಿಯಲ್ಲಿಯೇ ಇರುತ್ತೇನೆ. ಬಿಜೆಪಿಯಲ್ಲಿದ್ದು ಮುಖ್ಯಮಂತ್ರಿ ಆಗುವ ಅರ್ಹತೆ ನನಗಿದೆ. ಪ್ರತ್ಯೇಕ ರಾಜ್ಯವಾದರೂ ನಾವು ಕನ್ನಡಿಗರೇ. ಕರ್ನಾಟಕ ಎರಡು ಭಾಗ ಆಗಬೇಕು, ನಾವು ಕೂಡಾ ಕನ್ನಡ ಭಾಷೆಯನ್ನೇ ಮಾತನಾಡುತ್ತೇವೆ. ನಾವು ಅಚಲ ಕನ್ನಡಿಗರು ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದರು.

ಅಪ್ಪನಂಥ ಕಾರ್ಯಕ್ರಮ ಮಾಡಲೇ ಇಲ್ಲ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತು ಆಗಾಗ್ಗೆ ಕಟುವಾಗಿ ಮಾತನಾಡುತ್ತಿದ್ದ ಉಮೇಶ್‌ ಕತ್ತಿ, ಆಗಸ್ಟ್‌ನಲ್ಲಿ ಮಾತನಾಡುವಾಗ ಸಿದ್ದರಾಮೋತ್ಸವದ ಕುರಿತು ಪ್ರತಿಕ್ರಿಯಿಸಿದ್ದರು. ʻʻಸಿದ್ದರಾಮೋತ್ಸವದಿಂದ ನಮಗ್ಯಾಕ್ರಿ ನಡುಕ ಹುಟ್ಟತದರೀ.. ಸಿದ್ದರಾಮಯ್ಯನ ಅಪ್ಪನಂತ ಕಾರ್ಯಕ್ರಮ ಹಿಂದೆಯೂ ಮಾಡಿದ್ದೇವೆ.. ಮುಂದೆಯೂ ಮಾಡ್ತೇವೆ.. ಕಾರ್ಯಕ್ರಮ ರೂಪಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಲಿದೆ. ಪಕ್ಷದ ಅಧ್ಯಕ್ಷರಿದ್ದಾರೆ.. ಅವರು ಚಿಂತನೆ ಮಾಡ್ತಾರೆ. ಅವರು ಏನು ಮಾರ್ಗದರ್ಶ ಮಾಡ್ತಾರೋ ಹಾಗೆ ನಾವು ಮಾಡ್ತೇವೆʼʼ ಎಂದಿದ್ದರು.

ಆದರೆ ಬಿಜೆಪಿಯಿಂದ ಬೃಹತ್‌ ಕಾರ್ಯಕ್ರಮಗಳ ಸರಣಿಯಲ್ಲಿ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಸೆಪ್ಟೆಂಬರ್‌ 8ರಂದು ನಡೆಯಬೇಕಿರುವ ಎರಡು ದಿನ ಮೊದಲು ಉಮೇಶ್‌ ಕತ್ತಿ ಇಹಲೋಕ ತ್ಯಜಿಸಿದ್ದಾರೆ. ಇನ್ನುಮುಂದೆ ಉಮೇಶ್‌ ಕತ್ತಿ ಅವರ ವಿಶೇಷ ಶೈಲಿಯ ʼಕತ್ತಿʼ ವರಸೆಯ ಹೇಳಿಕೆಗಳನ್ನು, ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತ ನಿಜವಾದ ಕಾಳಜಿಯುಳ್ಳ ವ್ಯಕ್ತಿಯನ್ನು ಕರ್ನಾಟಕ ಮಿಸ್‌ ಮಾಡಿಕೊಳ್ಳಲಿದೆ.

ಇದನ್ನೂ ಓದಿ | Umesh Katti | ಬುಧವಾರ ಸಚಿವ ಉಮೇಶ್‌ ಕತ್ತಿ ಅವರ ಅಂತ್ಯಕ್ರಿಯೆ

Exit mobile version