ಬೆಳಗಾವಿ: ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ (Umesh katti) ಅವರ ನಿಧನದ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಒಂದು ದಿನದ ಶೋಕಾಚರಣೆಯನ್ನು ಮೂರು ದಿನಕ್ಕೆ ವಿಸ್ತರಿಸಲಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.
ʻʻಉಮೇಶ್ ಕತ್ತಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ರಾಜ್ಯ ಸರ್ಕಾರದಿಂದಲೇ ನಡೆಯಲಿದೆ. ಮೂರು ದಿನ ಶೋಕಾಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆಯುವುದಿಲ್ಲ. ತುರ್ತಾಗಿ ಪ್ರವಾಹ ನಿರ್ವಹಣೆ ಬಿಟ್ಟರೆ ಸರ್ಕಾರಿ ಕಾರ್ಯಕ್ರಮ ಇರುವುದಿಲ್ಲ. ದೊಡ್ಡ ಬಳ್ಳಾಪುರದ ಜನೋತ್ಸವ ಕಾರ್ಯಕ್ರಮವನ್ನು ಕೂಡಾ ಸೆ.೮ರ ಬದಲಾಗಿದೆ ಸೆ. 11ಕ್ಕೆ ಮುಂದೆ ಹಾಕಿದ್ದೇವೆʼʼ ಎಂದು ಅಂತ್ಯಕ್ರಿಯೆಗೆ ಹೋಗುವ ವೇಳೆ ಹೇಳಿದರು.
ಒಂದೇ ದಿನ ಎಂದು ಹೇಳಲಾಗಿತ್ತು
ಸಾಮಾನ್ಯವಾಗಿ ಮಂತ್ರಿಗಳು ಸೇರಿದಂತೆ ಗಣ್ಯರು ಮೃತಪಟ್ಟಾಗ ರಾಜ್ಯ ಸರಕಾರದ ವತಿಯಿಂದ ಮೂರು ದಿನಗಳ ಶೋಕಾಚರಣೆ ನಡೆಯುತ್ತದೆ. ಆದರೆ, ಬುಧವಾರ ಮುಂಜಾನೆ ಹೊರಡಿಸಲಾದ ಸರಕಾರಿ ಪ್ರಕಟಣೆಯಲ್ಲಿ ಕೇವಲ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸೆಪ್ಟೆಂಬರ್ ೮ರಂದು ದೊಡ್ಡಬಳ್ಳಾಪುರದಲ್ಲಿ ನಿಗದಿಯಾಗಿರುವ ಬಿಜೆಪಿ ಸರಕಾರದ ಜನೋತ್ಸವ ಕಾರ್ಯಕ್ರಮವನ್ನು ಹೇಗಾದರೂ ಮಾಡಿ ನಡೆಸಿಯೇ ತೀರಬೇಕು ಎಂಬ ಕಾರಣಕ್ಕಾಗಿ ಶೋಕಾಚರಣೆಯನ್ನೇ ಒಂದು ದಿನಕ್ಕೆ ಇಳಿಸಿದೆ ಎಂದೆಲ್ಲ ಚರ್ಚೆಗಳಾಗಿದ್ದವು.
ಈ ನಡುವೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಮೂರು ದಿನಗಳ ಶೋಕಾಚರಣೆ ಮಾಡಿದ್ದರೆ ಒಳ್ಳೆಯದಿತ್ತು ಎಂದು ಹೇಳಿದ್ದರು. ಇದು ಒಂದು ಕಡೆಯಲ್ಲಿ ಸರಕಾರದ ಇದುವರೆಗಿನ ನಿಯಮಾವಳಿಯನ್ನು ಬಿಡಬೇಡಿ ಎಂಬ ಕಳಕಳಿ ಇದ್ದರೆ ಇನ್ನೊಂದು ಕಡೆಯಲ್ಲಿ ಸೆ. ೮ರ ಜನೋತ್ಸವ ಮುಂದಕ್ಕೆ ಹೋಗಲಿ ಎಂಬ ಚಿಂತನೆಯೂ ಇತ್ತೆಂಬ ಬಗ್ಗೆ ಚರ್ಚೆ ನಡೆಯಿತು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಹಲವು ನಾಯಕರು ಕೂಡಾ ಮೂರು ದಿನದ ಶೋಕಾಚರಣೆ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಲ್ಲೂ ಬೆಳಗಾವಿ ಭಾಗದ ನಾಯಕರು ಯಾಕೆ ಒಂದೇ ದಿನ ಎಂಬ ಪ್ರಶ್ನೆ ಎತ್ತಿದ್ದರು.
ಇದೆಲ್ಲವನ್ನೂ ಗಮನಿಸಿಕೊಂಡು ಮುಖ್ಯಮಂತ್ರಿಗಳು ತಮ್ಮ ಪೂರ್ವ ನಿರ್ಧಾರವನ್ನು ಬದಲಿಸಿದ್ದಾರೆ. ಮೂರು ದಿನ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಈ ಮೂರೂ ದಿನಗಳಲ್ಲಿ ಯಾವುದೇ ಸರಕಾರಿ ಕಾರ್ಯಕ್ರಮಗಳು ನಡೆಯುವುದಿಲ್ಲ. ಖಾಸಗಿಯವರು ಕೂಡಾ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ
ಮುಖ್ಯಮಂತ್ರಿ ಪ್ರವಾಸ ರದ್ದು
ಉಮೇಶ್ ಕತ್ತಿ ಅವರ ನಿಧನ ಮತ್ತು ಶೋಕಾಚರಣೆ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಹೀಗಾಗಿ ಸೆ.೯ರಂದು ನಿಗದಿಯಾಗಿದ್ದ ಬಳ್ಳಾರಿ, ವಿಜಯ ನಗರ, ವಿಜಯಪುರ, ಧಾರವಾಡ ಜಿಲ್ಲಾ ಪ್ರವಾಸವನ್ನು ಸಿಎಂ ಮುಂದೂಡಿದ್ದಾರೆ ಎಂದು ಸಿಎಂ ವಿಶೇಷ ಕರ್ತವ್ಯಾಧಿಕಾರಿ ಬಿಪಿ ಚನ್ನಬಸವೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 9ರಂದು ವಿಜಯಪುರ ಜಿಲ್ಲೆಯಲ್ಲಿ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಬಾಗಿನ ಅರ್ಪಣೆ, ವಿಜಯಪುರ ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು.
ಇದನ್ನೂ ಓದಿ| ಉಮೇಶ್ ಕತ್ತಿ ನಿಧನ ಹಿನ್ನೆಲೆ: ನಾಳೆ ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಸೆ.11ಕ್ಕೆ ಮುಂದೂಡಿಕೆ