ಬೆಂಗಳೂರು: ಬೆಂಗಳೂರು ಅಂದವನ್ನು ಹಾಳು ಮಾಡುವ ಫ್ಲೆಕ್ಸ್ (BBMP Flex) ಹೋರ್ಡಿಂಗ್ಸ್, ಕಟೌಟ್‌ಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಲು ರಾಜ್ಯ ಸರ್ಕಾರ (State Government of Karnataka) ನಿರ್ಧಾರ ಮಾಡಿತ್ತು. ಸಿಎಂ, ಡಿಸಿಎಂ ಸೇರಿದಂತೆ ಯಾರ ಹೋರ್ಡಿಂಗ್ ಅನ್ನು ಕೂಡಾ ಇನ್ನು ಅನುಮತಿ ಇಲ್ಲದೇ ಹಾಕುವಂತಿಲ್ಲ ಎಂದು ಸ್ವತಃ ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಮತ್ತು ಉಸ್ತುವಾರಿ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ (KPCC president DK Shivakumar) ಆದೇಶವನ್ನು ಹೊರಡಿಸಿದ್ದರು. ಇದರ ಬೆನ್ನಲೇ ಈಗ ಕೆಪಿಸಿಸಿ ಕಚೇರಿಯಲ್ಲಿ (KPCC Office) ಅನಧಿಕೃತವಾಗಿ ಬೃಹತ್ ಫ್ಲೆಕ್ಸ್ ಅಳವಡಿಕೆ ಮಾಡಿರುವ ಸಂಬಂಧ ಡಿ.ಕೆ. ಶಿವಕುಮಾರ್‌ಗೆ 50 ಸಾವಿರ ರೂಪಾಯಿ ದಂಡ ವಿಧಿಸಿ ಬಿಬಿಎಂಪಿ ಆದೇಶಿಸಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಬಿಬಿಎಂಪಿಯಿಂದ ದಂಡ ಬಿದ್ದಿದೆ. ರಾಜೀವ್ ಗಾಂಧಿ ಜನ್ಮದಿನಾಚರಣೆ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ಬೃಹತ್ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ಆದರೆ, ಇದಕ್ಕೆ ಯಾವುದೇ ಅನುಮತಿಯನ್ನು ಪಡೆಯಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಇದನ್ನೂ ಓದಿ: Education Policy : ರಾಜ್ಯದಲ್ಲಿ NEP ರದ್ದು; ಹೊಸ ರಾಜ್ಯ ಶಿಕ್ಷಣ ನೀತಿ CBSE, ICSEಗೆ ಅನ್ವಯ ಆಗುತ್ತಾ?
ಡಿಕೆಶಿ ನೀಡಿದ್ದ ಆದೇಶ; ಈಗ ಅವರಿಗೇ ದಂಡ!
ಬೆಂಗಳೂರಿನಲ್ಲಿ ಇನ್ನು ಮುಂದೆ ಹೋರ್ಡಿಂಗ್ಸ್, ಕಟೌಟ್‌ಗಳನ್ನು ಅನುಮತಿ ಇಲ್ಲದೆ ಬಳಸುವಂತೆ ಇಲ್ಲ. ನಿರ್ದಾಕ್ಷಿಣ್ಯವಾಗಿ ಇದನ್ನು ಕಿತ್ತು ಹಾಕಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಇದೇ ಆಗಸ್ಟ್ 8ರಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದರು. ಈ ಸಂಬಂಧ ಆದೇಶವನ್ನು ಹೊರಡಿಸಿರುವುದಾಗಿಯೂ ತಿಳಿಸಿದ್ದರು.
ಈಗ ಹಾಕಿರುವ ಹೋರ್ಡಿಂಗ್ ಹಾಗೂ ಹೋರ್ಡಿಂಗ್ ಸ್ಟ್ರಕ್ಚರ್‌ಗಳನ್ನು ಸಹ ತೆಗೆದುಹಾಕಬೇಕು. ಆಡಳಿತ ಪಕ್ಷದ ಶಾಸಕರನ್ನು ಕರೆದು ಈಗಾಗಲೇ ಹೇಳಿದ್ದೇನೆ. ಹುಟ್ಟುಹಬ್ಬದ ಶುಭಾಶಯ, ಸಾವಿಗೆ ಶ್ರದ್ಧಾಂಜಲಿ ಸೇರಿದಂತೆ ಯಾವುದೇ ರೀತಿಯ ಶುಭಾಶಯ ಕೋರುವ ಫ್ಲೆಕ್ಸ್ ಅನ್ನು ಯಾರೂ ಕೂಡ ಹಾಕಬಾರದು ಎಂದು ಮನವಿ ಮಾಡುತ್ತೇನೆ. ಹೀಗೆ ಮಾಡಿದರೆ ಕಾರ್ಪೊರೇಷನ್ ಅವರು ಎಫ್‌ಐಆರ್ (FIR) ದಾಖಲಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದರು.
40 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲು
ಧಾರ್ಮಿಕ, ರಾಜಕೀಯ, ಸಾಮಾಜಿಕ ಯಾವುದೇ ವಿಚಾರಕ್ಕೂ ಹೋರ್ಡಿಂಗ್ಸ್ ಹಾಕಲು ಅನುಮತಿ ಇಲ್ಲ. ನಾನು ಮಂತ್ರಿಯಾದ ಕೂಡಲೇ ಇದನ್ನು ಘೋಷಣೆ ಮಾಡಬೇಕಿತ್ತು. ಆದರೆ, ಕೆಲವು ಸಮಸ್ಯೆ ಇತ್ತು. ಹಾಗಾಗಿ ಈಗ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈಗಾಗಲೇ 58 ಸಾವಿರ ಅಕ್ರಮ ಫ್ಲೆಕ್ಸ್ ತೆರವು ಮಾಡಲಾಗಿದೆ. ಈ ಸಂಬಂಧ 134 ದೂರುಗಳು ಬಂದಿದ್ದು, ಅದರಲ್ಲಿ 40 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದರು.
ಇದನ್ನೂ ಓದಿ: Education Policy : ರಾಜ್ಯದಲ್ಲಿ NEP ರದ್ದು; ಹೊಸ ರಾಜ್ಯ ಶಿಕ್ಷಣ ನೀತಿ CBSE, ICSEಗೆ ಅನ್ವಯ ಆಗುತ್ತಾ?
ಆದರೆ, ಈಗ ಕೆಪಿಸಿಸಿ ಕಚೇರಿ ಮುಂದೆ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಕೆ ಮಾಡಿದ್ದರಿಂದ 50 ಸಾವಿರ ರೂಪಾಯಿ ದಂಡವನ್ನು ಮಾತ್ರ ವಿಧಿಸಲಾಗಿದೆಯೇ? ಅಥವಾ ಎಫ್‌ಐಆರ್ ಅನ್ನು ಸಹ ದಾಖಲಿಸಲಾಗಿದೆಯೇ ಎಂಬ ವಿಚಾರ ಮಾತ್ರ ತಿಳಿದುಬಂದಿಲ್ಲ.