ಮಂಡ್ಯ/ ಬೆಂಗಳೂರು: ಎರಡು ಪತ್ಯೇಕ ಪ್ರಕರಣಗಳಲ್ಲಿ ಒಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವುದು ನಡೆದಿದೆ. ನಾಗಮಂಗಲದಲ್ಲಿ ಜಮೀನು ವಿವಾದ ಕೊಲೆಯಲ್ಲಿ ಮುಕ್ತಾಯವಾಗಿದ್ದು, ಬೆಂಗಳೂರಿನಲ್ಲಿ ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳು ಮಚ್ಚು ಬೀಸಿದ್ದರಿಂದ ಮೂವರು ಗಾಯಗೊಂಡಿದ್ದಾರೆ.
ಸ್ವಂತ ಅಣ್ಣನ ಮಗನನ್ನೇ ಕೊಂದ ಚಿಕ್ಕಪ್ಪ
ಮಂಡ್ಯ: ಜಮೀನು ವಿಚಾರದಲ್ಲಿ ಸ್ವಂತ ಅಣ್ಣನ ಮಗನನ್ನೇ ಚಿಕ್ಕಪ್ಪ ಗುಂಡಿಟ್ಟು ಕೊಂದಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ತಂದೆಯ ಎದುರೇ ಶೂಟ್ ಮಾಡಿ ಮಗನ ಹತ್ಯೆ ಮಾಡಲಾಗಿದೆ.
ಜಯಪಾಲ್ (19) ಮೃತ ಯುವಕ. ಜಯಪಾಲ್ ಚಿಕ್ಕಪ್ಪ ಸೀಮೆಎಣ್ಣೆ ಕುಮಾರ್ ಆರೋಪಿ. ಜಮೀನಿನ ವಿವಾದ ಇತ್ಯರ್ಥ ಮಾಡಲು ಜಮೀನಿಗೆ ಜಯಪಾಲ್ ಹಾಗೂ ಆತನ ತಂದೆ ವಾಸು ಅವರನ್ನು ಕುಮಾರ್ ಕರೆಸಿಕೊಂಡಿದ್ದ. ಗಲಾಟೆ ತಾರಕಕ್ಕೇರಿದಾಗ ಜಯಪಾಲ್ಗೆ ಗುಂಡು ಹಾರಿಸಿ ಕುಮಾರ್ ಕೊಲೆಗೈದಿದ್ದಾನೆ. ಎದೆ, ತೋಳು, ಮುಗದ ಭಾಗಕ್ಕೆ ಗುಂಡು ಹಾರಿಸಿದ್ದರಿಂದ ಸ್ಥಳದಲ್ಲಿಯೇ ಜಯಪಾಲ್ ಯುವಕ ಮೃತಪಟ್ಟಿದ್ದಾನೆ.
ಇದನ್ನೂ ಓದಿ | ಹಾವೇರಿಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದ ಕಟುಕ; ಮಾಡಿದ ತಪ್ಪಾದರೂ ಏನು?
ಮೃತ ಜಯಪಾಲ್ ಮೃತದೇಹವನ್ನು ನಾಗಮಂಗಲ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಗೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮೀನು ವಿವಾದದ ಬಗ್ಗೆ ಮಾತನಾಡಲು ಕರೆದಾಗ, ಈ ಹಿಂದೆಯು ಹಲವು ಬಾರಿ ಕೊಲೆ ಬೆದರಿಕೆ ಹಾಕಿದ್ದ. ಪೊಲೀಸರು ನನ್ನ ಪರ ಇದ್ದಾರೆ ಹೆದರಿಸುತ್ತಿದ್ದ. ಹೀಗೆ ಕೊಲೆ ಮಾಡ್ತಾನೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಜಯಪಾಲ್ ತಂದೆ ವಾಸು ಕಣ್ಣೀರು ಹಾಕಿದ್ದಾರೆ.
ಲಾಂಗ್ನಿಂದ ಹಲ್ಲೆ, ಮೂವರಿಗೆ ಗಂಭೀರ ಗಾಯ
ಬೆಂಗಳೂರು: ಕುಡಿದ ಅಮಲಿನಲ್ಲಿ ಕಿಡಿಗೇಡಿಗಳು ಲಾಂಗ್ನಿಂದ ಹಲ್ಲೆ ಮಾಡಿದ್ದರಿಂದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಆಡುಗೋಡಿ ಬಳಿಯ ಎಲ್.ಆರ್.ನಗರದಲ್ಲಿ ನಡೆದಿದೆ.
ಜಾನ್ಸನ್, ಆತನ ತಂದೆ, ಸಹೋದರ ಗಾಯಾಳುಗಳು. ಐಸಾಕ್ ಹಾಗೂ ಪವನ್ ಆರೋಪಿಗಳು. ಜಾನ್ಸನ್ ಹಾಗೂ ಆರೋಪಿ ಐಸಾಕ್ ಒಂದೇ ಏರಿಯಾದ ಯುವಕರಾಗಿದ್ದಾರೆ. ಶುಕ್ರವಾರ ರಾತ್ರಿ ಕುಡಿದ ಅಮಲಿನಲ್ಲಿ ಐಸಾಕ್ ಗಲಾಟೆ ಮಾಡಿ, ಹಣ ಕೊಡುವಂತೆ ಕೇಳಿದ್ದಾನೆ. ಜಾನ್ಸನ್ ಹಣ ಕೊಡದಿದ್ದಾಗ ಆತನ ಜೇಬಿಗೆ ಕೈ ಹಾಕಿದ್ದರಿಂದ, ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಜಾನ್ಸನ್ ಮೇಲೆ ಐಸಾಕ್ ಲಾಂಗ್ನಿಂದ ಹಲ್ಲೆ ನಡೆಸಿದ್ದಾನೆ. ಬಿಡಿಸಲು ಬಂದ ಜಾನ್ಸನ್ ತಂದೆ, ಸಹೋದರನಿಗೂ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ | Murder Case : ವಿವಾಹಿತೆ ಹಿಂದೆ ಬಿದ್ದು ಬರ್ಬರವಾಗಿ ಕೊಲೆಯಾದ ಯುವಕ!
ಮೂವರು ಗಾಯಾಳುಗಳನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ 307 ಅಡಿ ಕೇಸ್ ಆಡುಗೋಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಆಡುಗೋಡಿ ಪೊಲೀಸರಿಂದ ಆರೋಪಿಗಳಾದ ಐಸಾಕ್ ಹಾಗೂ ಪವನ್ನನ್ನು ಬಂಧಿಸಲಾಗಿದೆ.