ಬೆಂಗಳೂರು: ಕೇಂದ್ರ ಸರ್ಕಾರ ಹೊಲಸು ರಾಜಕಾರಣ (Dirty Politics) ಮಾಡಿದ್ದರಿಂದಾಗಿ ಈಗ ಅನ್ನ ಭಾಗ್ಯ (Anna Bhagya) ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ 170 ರೂ.ನಂತೆ ನೇರ ನಗದು ವರ್ಗಾವಣೆ ಆರಂಭದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಲಾರ, ಮೈಸೂರು ಜಿಲ್ಲೆಗಳಿಗೆ ನಗದು ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಾಯಿತು. ಧಾರವಾಡ, ರಾಮನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಗಳಿಗೆ ನೇರ ವರ್ಗಾವಣೆ ಆಗಲಿದೆ. ಹಂತಹಂತವಾಗಿ ಎಲ್ಲ ಜಿಲ್ಲೆಗಳಿಗೆ ಹಣ ವರ್ಗಾವಣೆ ಆಗಲಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ, ಕೆಲಸದ ಹಕ್ಕು ಕಾಯ್ದೆ, ಆಹಾರದ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆಗಳನ್ನು ಜಾರಿ ಮಾಡಿತು. ಅದರ ಆಧಾರದಲ್ಲಿ 1.28 ಕೋಟಿ ಕುಟುಂಬಗಳಿಗೆ ಈಗ ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗುತ್ತಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ 4.42 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ಇದರಿಂದ ಸಿಗುತ್ತದೆ.
ಕೋವಿಡ್ ನಂತರದಲ್ಲಿ ತಲಾ 3 ರೂ. ಕೆ.ಜಿ.ಯಂತೆ ನೀಡುತ್ತಿದ್ದ ಅಕ್ಕಿಯನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ಫ್ರೀಯಾಗಿ ಕೊಟ್ಟವರು ಯಾರು? ಎಂದು ಅನೇಕರು ಕೇಳುತ್ತಿದ್ದರು. ಈ ಹಿಂದೆ ಏಳು ಕೆ.ಜಿ. ಕೊಡುತ್ತಿದ್ದರು, ಈಗ ಐದು ಕೆ.ಜಿ. ಕೊಡುತ್ತಿದ್ದಾರೆ ಎಂದು ಹೇಳುತ್ತಿದ್ದರು. ಏಳು ಕೆ.ಜಿ. ಯಾಕೆ? ಹತ್ತು ಕೆ.ಜಿ. ಕೊಡುತ್ತೇವೆ ಎಂದು ಹೇಳಿದ್ದೆವು. ನಾವೇ ಹತ್ತು ಕೆ.ಜಿ. ಕೊಡುತ್ತೇವೆ ಎಂದು ಹೇಳಿರಲಿಲ್ಲ. ಈಗಾಗಲೆ ಐದು ಕೆ.ಜಿ. ಕೊಡುತ್ತಿದ್ದಾರೆ, ಹೆಚ್ಚುವರಿಯಾಗಿ ಐದು ಕೆ.ಜಿ. ಕೊಡುತ್ತೇವೆ ಎಂದು ತಿಳಿಸಿದ್ದೆವು, ಅದರಂತೆ ನಡೆದುಕೊಂಡಿದ್ದೇವೆ.
ಅಕ್ಕಿ ಕೊಡುತ್ತೇವೆ ಎಂದು ಕೇಂದ್ರ ಸರ್ಕಾರದ ಎಫ್‌ಸಿಐ ಹೇಳಿತ್ತು. ಆದರೆ ನಂತರ ಕೇಂದ್ರ ಸರ್ಕಾರ ಇದನ್ನು ತಡೆಯಿತು. ಇದು ಕೇಂದ್ರ ಸರ್ಕಾರದ Dirty Politics ಅಲ್ಲವೇ? ಇದನ್ನು ರಾಜಕೀಯ ಧ್ವೇಷ ಎಂದು ಕರೆಯಬೇಕ? ಬಡವರ ವಿರೋಧಿ ಕ್ರಮ ಎಂದು ಕರೆಯಬೇಕ? ಏನೆಂದು ಕರೆಯಬೇಕು? ನಮಗೆ ಅಕ್ಕಿ ಕೊಡುವುದಿಲ್ಲ ಎಂದು ಹೇಳಿ ಸಾರ್ವಜನಿಕ ಹರಾಜಿಗೆ ಹೋದರು. ಆದರೆ ಅಲ್ಲಿ ಟೆಂಡರ್‌ನಲ್ಲಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.
ಅಕ್ಕಿ ಇಟ್ಟುಕೊಂಡು, ನಮಗೆ 34 ರೂ.ಗೆ ಕೊಡಲು ಒಪ್ಪಿದ್ದರು. ನಾವೇನು ಫ್ರೀಯಾಗಿ ಕೇಳಿಲ್ಲ. ಆದರೂ ಕೊಡಲಿಲ್ಲ. ಬಡವರಿಗೆ ದ್ರೋಹ ಮಾಡುವ ರಾಜಕಾರಣ ಇದು. ಅಕ್ಕಿ ಕೊಡುವುದಿಲ್ಲ ಎಂದು ಎಫ್‌ಸಿಐ ಹೇಳಿದ ಮೇಲೆ ಛತ್ತೀಸ್‌ಗಢ, ಪಂಜಾಬ್, ತೆಲಂಗಾಣ, ಆಂಧ್ರ ಪ್ರದೇಶದ ಸಿಎಂಗಳ ಜತೆಗೆ ಮಾತನಾಡಿದೆವು. ಆದರೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ ಎಂದು ಯಾರೂ ಹೇಳಲಿಲ್ಲ. ನಂತರದಲ್ಲಿ ತಲಾ 170 ರೂ. ಕೊಡಲು ಅನಿವಾರ್ಯವಾಗಿ ತೀರ್ಮಾನ ಮಾಡಿದ್ದೇವೆ. ಈಗ ಅಕ್ಕಿ ಖರೀದಿಗೆ ಟೆಂಡರ್ ಕರೆದಿದ್ದೇವೆ ಎಂದರು.
ಫಲಾನುಭವಿಗಳು ಈ ಹಣ ಬಳಸಿಕೊಂಡು ಅಕ್ಕಿ ಕೊಂಡುಕೊಳ್ಳಿ. ಹೊಟ್ಟೆತುಂಬ ಊಟ ಮಾಡಿ, ನೆಮ್ಮದಿಯಾಗಿರಿ. ನಮ್ಮನ್ನು ಟೀಕೆ ಮಾಡುವವರಿಗೆ ಸೊಪ್ಪು ಹಾಕುವುದಿಲ್ಲ. ನಮ್ಮ ಕರ್ತವ್ಯ ಇದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ: Anna Bhagya: ಅನ್ನ ಭಾಗ್ಯ ಹಣ ವರ್ಗಾವಣೆಗೆ ಚಾಲನೆ: ಎರಡು ಜಿಲ್ಲೆ ಫಲಾನುಭವಿಗಳ ಖಾತೆಗೆ ತಲಾ 170 ರೂ. ರವಾನೆ
ಇದಕ್ಕೂ ಮೊದಲು ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದರಿಂದಾಗಿ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ ಎನ್ನುವುದನ್ನು ಬಿಜೆಪಿ ಸ್ನೇಹಿತರು ಮರೆಯಬಾರದು. ಕೇಂದ್ರ ಸರ್ಕಾರ ಹೃದಯ ವೈಶಾಲ್ಯ ತೋರಿದ್ದರೆ ಈ ಯೋಜನೆಗೆ ಸಹಕಾರ ನೀಡಬಹುದಾಗಿತ್ತು. ಆದರೆ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಈಗಾಗಲೆ ಕೇಂದ್ರ ಸರ್ಕಾರ ನೀಡುತ್ತಿರುವ ತಲಾ ಐದು ಕೆ.ಜಿ. ಅಕ್ಕಿ ಜತೆಗೆ ಮತ್ತೆ ಐದು ಕೆ.ಜಿ. ಸೇರಿಸಿ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಭರವಸೆ ನೀಡಿತ್ತು. ಅದರಂತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಮೊದಲ ಸಂಪುಟ ಸಭೆಯಲ್ಲೇ ಎಲ್ಲ ಐದು ಗ್ಯಾರಂಟಿಗಳನ್ನೂ ಈಡೇರಿಸುವುದಾಗಿ ತಿಳಿಸಿತ್ತು.ಆದರೆ ಅನ್ನ ಭಾಗ್ಯ ಯೋಜನೆಗೆ 2.3 ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದರಿಂದ ಕೇಂದ್ರ ಸರ್ಕಾರದ ಅಧೀನದ ಭಾರತೀಯ ಆಹಾರ ನಿಗಮವನ್ನು (ಎಫ್‌ಸಿಐ) ರಾಜ್ಯ ಸರ್ಕಾರ ಸಂಪರ್ಕಿಸಿತ್ತು. ಮೊದಲಿಗೆ ಅಕ್ಕಿಯನ್ನು ತಲಾ 34 ರೂ.ನಂತೆ ನೀಡುವುದಾಗಿ ಎಫ್‌ಸಿಐ ಒಪ್ಪಿತ್ತು. ಆದರೆ ದೇಶದಲ್ಲಿ ಅಕ್ಕಿ ದರ ನಿಯಂತ್ರಿಸುವ ಸಲುವಾಗಿ ರಾಜ್ಯಗಳಿಗೆ ಅಕ್ಕಿ ನೀಡದಂತೆ ಕೇಂದ್ರ ಸರ್ಕಾರ ಎಫ್‌ಸಿಐಗೆ ಪತ್ರ ಬರೆದಿತ್ತು.
ಇದನ್ನೂ ಓದಿ: Congress Guarantee: ಅಕ್ಕಿಗಾಗಿ ಮತ್ತೆ ಕೇಂದ್ರಕ್ಕೆ ಮೊರೆಯಿಟ್ಟ ಕರ್ನಾಟಕ: ಫಲಿತಾಂಶ ಜೀರೊ ಎಂದ ಸಚಿವ ಮುನಿಯಪ್ಪ
ಇದರ ನಂತರ ರಾಜಕೀಯ ಹಗ್ಗಜಗ್ಗಾಟ ನಡೆದಿದೆ. ಕೇಂದ್ರ ಸರ್ಕಾರವು ಕಾಂಗ್ರೆಸ್ ಪಕ್ಷದ ಯೋಜನೆಯ ಸಫಲತೆಯನ್ನು ತಡೆಯಲು ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಸೇರಿ ಅನೇಕರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ಜಾರಿ ಮಾಡಲಾಗದೆ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ.
ಇದೆಲ್ಲದರ ನಡುವೆ, ಅಕ್ಕಿ ದೊರೆಯುವವರೆಗೂ ಪ್ರತಿ ಫಲಾನುಭವಿಗೆ ತಲಾ ಕೆ.ಜಿ. ಅಕ್ಕಿಗೆ ತಗಲುತ್ತಿದ್ದ 34 ರೂ.ನಂತೆ 5 ಕೆ.ಜಿ. ಅಕ್ಕಿಗೆ 170 ರೂ.ನಂತೆ ಕುಟುಂಬದ ಮುಖ್ಯಸ್ಥರ ಪಡಿತರ ಚೀಟಿಯೊಂದಿಗೆ ಸಂಪರ್ಕ ಹೊಂದಿರುವ ಖಾತೆಗೆ ಜಮಾ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.