Site icon Vistara News

Cow slaughter| ಮಂಗಳೂರಿನಲ್ಲಿ ಗೋ ಹಂತಕರ ವಿರುದ್ಧ ಯೋಗಿ ಅಸ್ತ್ರ ಪ್ರಯೋಗ, ಆಸ್ತಿ ಮುಟ್ಟುಗೋಲು

cow slaughter

ಮಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಗೋಹತ್ಯೆ, ಗೋಸಾಗಣೆ ಪ್ರಕರಣಗಳು ವರದಿಯಾಗುತ್ತಿರುವ ಮತ್ತು ಈ ಸಂಬಂಧ ಗಲಭೆಗಳೂ ನಡೆದಿರುವ ಮಂಗಳೂರಿನಲ್ಲಿ ಗೋಹಂತಕರ ವಿರುದ್ಧ ಉತ್ತರ ಪ್ರದೇಶದ ಯೋಗಿ ಮಾದರಿ ಅಸ್ತ್ರ ಪ್ರಯೋಗಕ್ಕೆ ಸರಕಾರ ಮುಂದಾಗಿದೆ.

ಬಜಪೆ ಠಾಣಾ ವ್ಯಾಪ್ತಿಯ ಗಂಜಿ ಮಠ, ಸುರತ್ಕಲ್ ಠಾಣೆ ವ್ಯಾಪ್ತಿಯ ಕಾಟಿಪಳ್ಳ ಮತ್ತು ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಅರ್ಕುಳದಲ್ಲಿರುವ ಅಕ್ರಮ ಕಸಾಯಿಖಾನೆ ಆಸ್ತಿಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ. ಇವೆಲ್ಲವೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಪ್ರದೇಶಗಳಾಗಿದ್ದು, ಬಿಜೆಪಿಯ ಭರತ್‌ ಶೆಟ್ಟಿ ಇಲ್ಲಿ ಶಾಸಕರಾಗಿದ್ದಾರೆ.

ಗಂಜಿಮಠದ ಯೂಸೂಫ್, ಅರ್ಕುಳದ ಬಾತೀಶ್, ಕಾಟಿಪಳ್ಳದ ಹಕೀಂ ಜಾಗವನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಾಂ 8 (4) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅನಧಿಕೃತವಾಗಿ, ಅಕ್ರಮವಾಗಿ ಕಸಾಯಿ ಖಾನೆಗಳನ್ನು ನಡೆಸುತ್ತಿದ್ದ ಈ ಜಾಗಗಳು ಈಗ ಅಧಿಕೃತವಾಗಿ ಸರಕಾರದ ವಶಕ್ಕೆ ಬಂದಂತಾಗಿದೆ.

ಕಾನೂನು ಪ್ರಕಾರವೇ ಕಾಯಿದೆ ಜಾರಿ ‌ಮಾಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಜಾಗವನ್ನು ಮೂವರು ಅಧಿಕೃತರ ಹೆಸರಿನಿಂದ ಸರ್ಕಾರದ ಹೆಸರಲ್ಲಿ ಆರ್.ಟಿ.ಸಿ ನೋಂದಣಿ ಕೂಡಾ ಮಾಡಲಾಗಿದೆ.

ಕಸಾಯಿ ಖಾನೆ ನಡೆಯುತ್ತಿದ್ದ ಮನೆಯ ಪರಿಸರ

ಜಾಗ ಮಾರಾಟ, ಬಾಡಿಗೆ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ಕಂದಾಯ ‌ಇಲಾಖೆಯಿಂದ ಸೂಚನೆ ನೀಡಲಾಗಿದೆ.

ಉತ್ತರ ಪ್ರದೇಶದಲ್ಲಿ ಕಾನೂನುಬಾಹಿರ ಮತ್ತು ಸಮಾಜದ್ರೋಹಿ ಕೆಲಸ ಮಾಡಿದವರ ವಿರುದ್ಧ ಬುಲ್ಡೋಜರ್‌ ಅಸ್ತ್ರ ಪ್ರಯೋಗ ಮಾಡಲಾಗುತ್ತದೆ. ಇಲ್ಲಿ ಆ ಮಟ್ಟಕ್ಕೆ ಹೋಗದಿದ್ದರೂ ಅದೇ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ.

ಸಾಮಾನ್ಯವಾಗಿ ಅಕ್ರಮ ಕಸಾಯಿ ಖಾನೆಗಳು ಕಂಡುಬಂದಾಗ ಅವುಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ, ಕೆಲವರನ್ನು ಬಂಧಿಸಲಾಗುತ್ತದೆ. ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿ ಬಂದು ಮತ್ತದೇ ಹಳೆ ಕಾರ್ಯಾಚರಣೆ ಮುಂದುವರಿಸುತ್ತಾರೆ. ಆದರೆ ಸರಕಾರವೇ ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಈಗ ಅಕ್ರಮ ಚಟುವಟಿಕೆ ನಡೆಸುವವರು ಭೂಮಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಮತ್ತೆ ಹಳೆ ಚಾಳಿ ಮುಂದುವರಿಸುವ ಸಾಧ್ಯತೆಗಳು ಕಡಿಮೆ ಆಗುತ್ತವೆ.

ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಇದೇ ರೀತಿ ಅಕ್ರಮವಾಗಿ ಕಸಾಯಿ ಖಾನೆ ನಡೆಯುತ್ತಿದ್ದ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಇದನ್ನೂ ಓದಿ | ಅಕ್ರಮ ಗೋ ಹತ್ಯೆ | ರಾಜ್ಯದಲ್ಲೇ ಮೊದಲ ಬಾರಿಗೆ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು, ಖಾದರ್‌ ಆಕ್ರೋಶ

Exit mobile version