Site icon Vistara News

ಸೆಲ್ಫಿ ಅಪ್‌ಲೋಡ್‌ ಮಾಡಿ, ಕ್ಯೂನಲ್ಲಿ ನಿಲ್ಲದೆ ನೇರವಾಗಿ ಹೋಗಿ ಮತ ಹಾಕಿ; ಏನಿದು ಫೇಷಿಯಲ್‌ ರೆಕಗ್ನಿಷನ್‌ ತಂತ್ರಜ್ಞಾನ?

Karnataka Election

Karnataka Election

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಅಬ್ಬರದ ಪ್ರಚಾರ, ರೋಡ್‌ ಶೋ ಕೈಗೊಂಡ ಅಭ್ಯರ್ಥಿಗಳು ಈಗ ಮನೆ ಮನೆ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಜನರು ಕೂಡ ಅಭ್ಯರ್ಥಿಗಳು, ಪಕ್ಷಗಳನ್ನು ಅಳೆದು-ತೂಗಿ ಮತ ಹಾಕಲು ಸಿದ್ಧರಾಗುತ್ತಿದ್ದಾರೆ. ಇದರ ಬೆನ್ನಲ್ಲೇ, ಚುನಾವಣೆ ಆಯೋಗವು ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆ ಚುನಾವಣೆಯ ವೇಳೆ ಫೇಸ್‌ ರೆಕಗ್ನಿಷನ್‌ ತಂತ್ರಜ್ಞಾನದ ಅಳವಡಿಕೆಗೆ ಮುಂದಾಗಿದೆ.

ಹೌದು, ಚುನಾವಣೆ ಆಯೋಗವು ಪ್ಯಾಲೇಸ್‌ ರೋಡ್‌ನಲ್ಲಿರುವ ಸರ್ಕಾರಿ ರಾಮನಾರಾಯಣ ಚೆಲ್ಲರಮ್‌ ಕಾಲೇಜ್‌ನ ರೂಮ್‌ ನಂ. 2ರಲ್ಲಿ ಪೋಲಿಂಗ್‌ ಸ್ಟೇಷನ್‌ ಇದೆ. ಅಲ್ಲಿ ಆರಂಭಿಕ ಹಂತದಲ್ಲಿ ಫೇಸ್‌ ರೆಕಗ್ನಿಷನ್‌ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗುತ್ತಿದೆ. ಸಾಮಾಜಿಕ ಹೋರಾಟಗಾರರು ಖಾಸಗಿತನಕ್ಕೆ ಧಕ್ಕೆ ಬರುವ ಕುರಿತು ಭೀತಿ ವ್ಯಕ್ತಪಡಿಸಿದ ಮಧ್ಯೆಯೇ ಆಯೋಗವು ಪ್ರಯೋಗಕ್ಕೆ ಮುಂದಾಗಿದೆ.

ಮತದಾರರು ಏನು ಮಾಡಬೇಕು?

ಮತದಾರರು ಮೊದಲು ಚುನಾವಣೆ ಆಯೋಗದ ‘ಚುನಾವಣಾ’ ಮೊಬೈಲ್‌ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಮತದಾರರ ಫೋಟೊ ಗುರುತಿನ ಚೀಟಿ (EPIC) ನಂಬರ್‌ ಹಾಗೂ ಮೊಬೈಲ್‌ ನಂಬರ್‌ ಹಾಕಬೇಕು. ಇದಾದ ನಂತರ ಮೊಬೈಲ್‌ಗೆ ಬರುವ ಒನ್‌ ಟೈಮ್‌ ಪಾಸ್‌ವರ್ಡ್‌ (OTP) ನಮೂದಿಸಬೇಕು. ಹಾಗೆಯೇ, ಸೆಲ್ಫಿ ಅಪ್‌ಲೋಡ್‌ ಮಾಡಬೇಕು. ಇದಾದ ನಂತರ ಫೇಷಿಯಲ್‌ ರೆಕಗ್ನಿಷನ್‌ ವೇರಿಫಿಕೇಷನ್‌ ಆಗುತ್ತದೆ.

ಇದರಿಂದ ಹೇಗೆ ಅನುಕೂಲ?

ಒಂದು ಸಲ ಫೇಷಿಯಲ್‌ ರೆಕಗ್ನಿಷನ್‌ ಪರಿಶೀಲನೆ ಮುಗಿದರೆ, ನೀವು ಮತಗಟ್ಟೆಗಳಿಗೆ ಹೋದಾಗ ಸಾಲಿನಲ್ಲಿ ಕಾಯುವ ಅವಶ್ಯಕತೆ ಇರುವುದಿಲ್ಲ. ಚುನಾವಣೆ ಆಯೋಗದ ಡೇಟಾಬೇಸ್‌ಗೆ ನಿಮ್ಮ ಫೋಟೊ ಮ್ಯಾಚ್‌ ಆದರೆ, ಅಧಿಕಾರಿಗಳಿಗೆ ನೀವು ಯಾವುದೇ ದಾಖಲೆ ನೀಡುವ ಪ್ರಮೇಯವೇ ಇರುವುದಿಲ್ಲ. ಇದರಿಂದ ಜನರ ಸಮಯ ಉಳಿಯುವ ಜತೆಗೆ ನಕಲಿ ಮತದಾನವನ್ನೂ ತಡೆಯಬಹುದು ಎಂದು ಚುನಾವಣೆ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯವೊಂದರ ವಿಧಾನಸಭೆ ಚುನಾವಣೆಯಲ್ಲಿ ಫೇಷಿಯಲ್‌ ರೆಕಗ್ನಿಷನ್‌ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದಕ್ಕಾಗಿ ಶಿವಾಜಿ ನಗರದಲ್ಲಿರುವ 300 ಮತದಾರರನ್ನು ಗುರುತಿಸಿ, ಅವರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ತಂತ್ರಜ್ಞಾನದ ಬಳಕೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದು ಮತದಾರರಿಗೆ ಕಡ್ಡಾಯವಾಗದಿದ್ದರೂ, ಭವಿಷ್ಯದ ಬಳಕೆ, ಈಗ ಪ್ರಯೋಗದ ದಿಸೆಯಿಂದ ಅಧಿಕಾರಿಗಳು ಮನೆಮನೆಗೆ ತೆರಳಿ ತಂತ್ರಜ್ಞಾನದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಈ ಪ್ರಯೋಗವು ಯಶಸ್ವಿಯಾದರೆ, ಸುರಕ್ಷಿತ ಎನಿಸಿದರೆ ದೇಶಾದ್ಯಂತ ಜಾರಿಗೊಳಿಸುವ ಚಿಂತನೆ ಇದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Election: ಮತದಾನದ 48 ಗಂಟೆ ಮುನ್ನ ಚುನಾವಣಾ ಚರ್ಚೆ, ಸಂವಾದ, ಸಮೀಕ್ಷೆಗಳಿಗೆ ನಿರ್ಬಂಧ

Exit mobile version