ಮಂಡ್ಯ: ಟಿಪ್ಪುವನ್ನು ಕೊಂದ ವೀರ ಒಕ್ಕಲಿಗ ಕಲಿಗಳೆಂದು ಬಿಜೆಪಿ ನಾಯಕರಿಂದ ಮುನ್ನೆಲೆಗೆ ಬಂದಿದ್ದ ವಿವಾದಿತ ವ್ಯಕ್ತಿಗಳಾದ ಉರಿಗೌಡ, ನಂಜೇಗೌಡ ಹೆಸರು ರಾಜ್ಯದೆಲ್ಲೆಡೆ ಈ ಹಿಂದೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕಳೆದ ಕೆಲ ದಿನಗಳಿಂದ ಎಲ್ಲಿಯೂ ಕೇಳಿಬರದಿದ್ದ ಈ ಪಾತ್ರಗಳು, ಈಗ ವಿಧಾನಸಭಾ ಚುನಾವಣೆ (Karnataka Election) ದಿನಾಂಕ ಸಮೀಪಿಸುತ್ತಿದ್ದಂತೆ ಮತ್ತೆ ಎಂಟ್ರಿ ಪಡೆದಿವೆ. ಜಿಲ್ಲೆಯಲ್ಲಿ ಪ್ರಚಾರದ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಬಾಯಲ್ಲೂ ಉರೀಗೌಡ, ನಂಜೇಗೌಡ ಹೆಸರು ಹರಿದಾಡಿದೆ.
ಜಿಲ್ಲೆಯ ಶ್ರೀರಂಗಪಟ್ಟಣದ ಕ್ಷೇತ್ರದ ಕೊತ್ತತ್ತಿಯಲ್ಲಿ ಶನಿವಾರ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಉರೀಗೌಡ, ನಂಜೇಗೌಡ ಹೆಸರನ್ನು ಕೇಂದ್ರ ಸಚಿವರು ಉಚ್ಚರಿಸಿದ್ದಾರೆ. ಮಂಡ್ಯ ಜಿಲ್ಲೆಯ ಪರಿಚಯ ಮಾಡುವಾಗ ರಾಜನಾಥ್ ಸಿಂಗ್ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ, ಉರೀಗೌಡ, ನಂಜೇಗೌಡ, ಅಂಬರೀಶ್ ಹುಟ್ಟಿದ ಪುಣ್ಯಭೂಮಿ ಎಂದು ಹೇಳಿರುವುದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರು “ಟಿಪ್ಪುವನ್ನು ಉರಿಗೌಡ, ನಂಜೇಗೌಡ ಹೇಗೆ ಹೊಡೆದು ಹಾಕಿದರೋ ಅದೇ ರೀತಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹೊಡೆದು ಹಾಕಿ” ಎಂಬ ಹೇಳಿಕೆ ನೀಡಿದ್ದರು. ನಂತರ ಇದು ವಿವಾದದ ಸ್ವರೂಪ ಪಡೆದಿತ್ತು. ಟಿಪ್ಪುವನ್ನು ಕೊಂದ ವೀರ ಒಕ್ಕಲಿಗ ಕಲಿಗಳೆಂದು ಬಿಜೆಪಿ ನಾಯಕರಿಂದ ಮುನ್ನೆಲೆಗೆ ಬಂದಿರುವ ಉರಿಗೌಡ, ನಂಜೇಗೌಡ ಹೆಸರು ರಾಜ್ಯದೆಲ್ಲೆಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಕಳೆದ ಕೆಲದಿನಗಳಿಂದ ಎಲ್ಲಿಯೂ ಕೇಳಿಬರದಿದ್ದ ಈ ಹೆಸರುಗಳು, ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ.
ಇದನ್ನೂ ಓದಿ | PM in Karnataka: ಬಿಜೆಪಿ ಅಭ್ಯರ್ಥಿಗಳದು ಮೊದಲ ಚುನಾವಣೆ, ಅವರದು ಕೊನೆ ಚುನಾವಣೆ; ಸಿದ್ದುಗೇ ಹೇಳಿದ್ರಾ ಮೋದಿ?
ಅತಂತ್ರ ಸರ್ಕಾರಕ್ಕೆ ಅವಕಾಶ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ
ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು, ಈ ಭೂಮಿ ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ, ಉರೀಗೌಡ, ನಂಜೇಗೌಡ ಹಾಗೂ ಅಂಬರೀಶ್ ಹುಟ್ಟಿದ ನಾಡು. ಈ ಬಾರಿ 2013 ಮತ್ತು 2018ರ ರೀತಿ ಅತಂತ್ರ ಸರ್ಕಾರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಡಿ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ನೋಡಿ ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ನೀಡಬೇಕು ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಮನವಿ ಮಾಡಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನೇಕ ಭ್ರಷ್ಟಾಚಾರ ಹಗರಣಗಳು ನಡೆದಿದ್ದವು. ಆದರೆ, ಈಗಿನ ನಮ್ಮ ಸರ್ಕಾರದ ಮೇಲೆ ಯಾವುದೇ ಆರೋಪಗಳಿಲ್ಲ. ಭ್ರಷ್ಟಾಚಾರ ರಹಿತ ಸರ್ಕಾರ ನೋಡಿದ್ದೀರಿ, ಅಭಿವೃದ್ಧಿ ನೋಡಿದ್ದೀರಿ. ಈ ಬಾರಿ ಪೂರ್ಣ ಬಹುಮತದ ಸರ್ಕಾರ ಕೊಡಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ. ಭ್ರಷ್ಟಾಚಾರ ಮಾಡಿದ ಮಂತ್ರಿಗಳನ್ನು ಬಿಡದೆ ಜೈಲಿಗೆ ಹಾಕುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಬಿಡುಗಡೆಯಾದ ಹಣದಲ್ಲಿ ಶೇ.15 ಮಾತ್ರ ರೈತನ ಕೈಗೆ ಸೇರುತ್ತಿತ್ತು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಲ್ಲ ಅನುದಾನದ ಪೂರ್ಣ ಪ್ರಮಾಣದ ಹಣ ಸಾಮಾನ್ಯ ರೈತನ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತಿದೆ. ಕಾಂಗ್ರೆಸ್‌ನವರಿಗೆ ಈಗಾಗಲೇ ಅಧಿಕಾರ ಸಿಗಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಅವರು ಈಗ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಆರೋಪಿಸಿದರು.
ನಾವು ಸಂವಿಧಾನವನ್ನು ರಕ್ಷಣೆ ಮಾಡುತ್ತಾ, ಅದರ ಆಶಯಗಳನ್ನು ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದರೆ, ಕಾಂಗ್ರೆಸ್‌ನವರು ಬೇರ್ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಕಿಡಿಕಾರಿದರು.
ಇದನ್ನೂ ಓದಿ | Modi in Karnataka : ನೀವು ಮತ ಹಾಕುವುದು ಸರ್ಕಾರ ರಚನೆಗಲ್ಲ, ರಾಜ್ಯವನ್ನು ದೇಶದಲ್ಲೇ ನಂ. 1 ಮಾಡಲು; ಮೋದಿ ಹೊಸ ವ್ಯಾಖ್ಯಾನ
ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ರಾ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ?
ಈ ಬಹಿರಂಗ ಸಭೆಯಲ್ಲಿ ಶ್ರೀರಂಗಪಟ್ಟಣ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ವಿವಾದಾತ್ಮಕ ಹೇಳಿಕೆ ನೀಡಿರುವುದು ಕಂಡುಬಂದಿದೆ. ಶ್ರೀರಂಗಪಟ್ಟಣದಲ್ಲಿ ಮತಾಂಧ ಟಿಪ್ಪು, ಮೂಡಲ ಆಂಜನೇಯ ದೇಗುಲ ಕಿತ್ತು, ದೇವರನ್ನು ನದಿಗೆ ಎಸೆದು ಮಸೀದಿಯನ್ನಾಗಿ ಮಾಡಿದ್ದಾನೆ. ರಾಜನಾಥ್ ಸಿಂಗ್ ಅವರೇ ದಯಮಾಡಿ ಉತ್ತರ ಪ್ರದೇಶದಲ್ಲಿ ರಾಮನಿಗೆ ಮುಕ್ತಿ ಕೊಟ್ಟಿರುವ ಹಾಗೆ ಹನುಮನ ಜನ್ಮ ಭೂಮಿಯಾದ ರಾಜ್ಯದ ನಮ್ಮ ಕ್ಷೇತ್ರದಲ್ಲಿ ಆ ಮಸೀದಿಯನ್ನು (ಜಾಮಿಯಾ ಮಸೀದಿ) ಮೂಡಲ ಆಂಜನೇಯಸ್ವಾಮಿ ದೇವಾಲಯವನ್ನಾಗಿ ಪುನರ್ ಪ್ರತಿಷ್ಠಾಪಿಸಲು ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದಿದ್ದಾರೆ. ಇವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿದೆ.