ಹುಬ್ಬಳ್ಳಿ: ವಿಮಾನ ಪ್ರಯಾಣದ ವೇಳೆ ಕುಡಿtದ ಮತ್ತಿನಲ್ಲಿ ಬೇರೆಯವರ ಮೇಲೆ ಮೂತ್ರ ಮಾಡುವ ಪ್ರಕರಣಗಳು (Urination Case) ಹೆಚ್ಚುತ್ತಿರುವ ನಡುವೆಯೇ ಈ ಚಾಳಿ ಈಗ ಬಸ್‌ಗಳ ಹಂತಕ್ಕೂ ಬಂದಿದೆ!
ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿಯ ನಾನ್ ಎಸಿ ಸ್ಲೀಪರ್ ಬಸ್‌ನಲ್ಲಿ ವ್ಯಕ್ತಿಯೊಬ್ಬ ಕುಡಿತದ ಮತ್ತಿನಲ್ಲಿ ಮಹಿಳೆಯೊಬ್ಬರ ಸೀಟಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ!
ಹುಬ್ಬಳ್ಳಿ ತಾಲೂಕಿನ ಕಿರೇಸೂರ್ ಧಾಬಾ ಬಳಿ ಘಟನೆ ನಡೆದಿದೆ. ಮಂಗಳೂರು-2ನೇ ಘಟಕಕ್ಕೆ ಸೇರಿದ್ದ ನಾನ್ ಎಸಿ ಸ್ಲೀಪರ್ ಬಸ್ ವಿಜಯಪುರದಿಂದ ಹೊರಟು ಹುಬ್ಬಳ್ಳಿಗೆ ಬಂದಿತ್ತು. ಈ ವೇಳೆ ಪ್ರಯಾಣಿಕರ ಊಟ, ತಿಂಡಿಗಾಗಿ ಧಾಬಾ ಬಳಿ ಬಸ್ಸನ್ನು ನಿಲ್ಲಿಸಲಾಗಿತ್ತು. ಆಗ ಬಹುತೇಕ ಎಲ್ಲ ಪ್ರಯಾಣಿಕರು ಇಳಿದಿದ್ದರು. ಈ ವೇಳೆ 30 ವರ್ಷದ ವ್ಯಕ್ತಿಯೊಬ್ಬ ತನ್ನದಲ್ಲದ ಬೇರೆ ಸೀಟಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ.
ವಿಜಯಪುರದಿಂದ ಮಂಗಳೂರಿಗೆ ಟಿಕೆಟ್ ಮಾಡಿ ಹೊರಟಿದ್ದ ವ್ಯಕ್ತಿ ಕುಡಿದ ಮತ್ತಿನಲ್ಲಿ ತಾನು ಟಾಯ್ಲೆಟ್‌ನಲ್ಲಿದ್ದೇನೆ ಎಂದು ಭ್ರಮಿಸಿ ಸೀಟ್ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾನೆಂದು ಹೇಳಲಾಗಿದೆ.
ಈ ನಡುವೆ, ಊಟ ಮಾಡಿ ಮರಳಿ ತನ್ನ ಸೀಟಿಗೆ ಬಂದ ಸುಮಾರು 20 ವರ್ಷದ ಯುವತಿಗೆ ಅಚ್ಚರಿ, ಅಸಹ್ಯ ಕಾದಿತ್ತು. ಈ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿರುವುದನ್ನು ಗಮನಿಸಿದ ಯುವತಿ ಕೂಡಲೇ ಚಾಲಕ ಮತ್ತು ನಿರ್ವಾಹಕರಿಗೆ ಮಾಹಿತಿ ನೀಡಿದರು. ತಕ್ಷಣ ಓಡಿ ಬಂದ ನಿರ್ವಾಹಕ ಮತ್ತು ಚಾಲಕರು ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕನನ್ನು ಬಸ್ಸಿನಿಂದ ಕೆಳಗಿಳಿಸಿದರು. ಸಹ ಪ್ರಯಾಣಿಕರು ಆತನನ್ನು ಬೈದು ತರಾಟೆಗೆ ತೆಗೆದುಕೊಂಡರು.
ಆತ ಮೂತ್ರ ವಿಸರ್ಜನೆ ಮಾಡಿದ ಸೀಟನ್ನು ಚಾಲಕ ಮತ್ತು ನಿರ್ವಾಹಕರೇ ಸ್ವಚ್ಛಗೊಳಿಸಿದ ಬಳಿಕ ಬಸ್ ಹುಬ್ಬಳ್ಳಿಗೆ ಸಾಗಿತು. ಯುವತಿ ಹುಬ್ಬಳ್ಳಿಯಲ್ಲಿ ಬಸ್‌ನಿಂದ ಇಳಿದರು. ಆಕೆ ದೂರು ನೀಡಲು ಮುಂದಾಗಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಮೂತ್ರ ವಿಸರ್ಜನೆ ಮಾಡಿದಾತನ ಮಾಹಿತಿ ತಿಳಿದು ಬಂದಿಲ್ಲ.
ಏನಿದು ಶಂಕರ್ ಮಿಶ್ರಾ ಪ್ರಕರಣ?
ತಿಂಗಳ ಹಿಂದೆ ಶಂಕರ್ ಮಿಶ್ರಾ ಎಂಬಾತ ಅಮೆರಿಕದ ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ಶಂಕರ್ ಮಿಶ್ರಾ ದಿಲ್ಲಿಯಿಂದ ಬೆಂಗಳೂರಿಗೆ ಬಂದಿದ್ದ ವೇಳೆ ಆತನನ್ನು ಬಂಧಿಸಲಾಗಿತ್ತು. “ನಾಗರಿಕ ಪ್ರಜ್ಞೆ ಇಲ್ಲದೆ ಹೀಗೆ ವರ್ತಿಸಿರುವುದು ನಾಚಿಕೆಗೇಡು” ಎಂದು ಜರಿರಿದ್ದ ಕೋರ್ಟ್ ಮೊದಲು ಜಾಮೀನು ನಿರಾಕರಿಸಿತ್ತು. ಪ್ರಕರಣದಲ್ಲಿ ಏರ್ ಇಂಡಿಯಾಗೆ ಡಿಜಿಸಿಎ 30 ಲಕ್ಷ ರೂ. ದಂಡವನ್ನೂ ವಿಧಿಸಿದೆ.
ಇದನ್ನೂ ಓದಿ : Air India Urination Case | ನಾನು ಮೂತ್ರ ಮಾಡಿಲ್ಲ, ಮಹಿಳೆಯೇ ಮಾಡಿರಬಹುದು, ಶಂಕರ್ ಮಿಶ್ರಾ ಹೊಸ ವರಸೆ