ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಶತಾಯಗತಾಯ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಪ್ರಯತ್ನ ಮಾಡುತ್ತಿದೆ. ಈ ಮಧ್ಯೆ ಕೇಂದ್ರ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ನಿತಿನ್ ಗಡ್ಕರಿ ಸೇರಿದಂತೆ ಇನ್ನಿತರ ನಾಯಕರು ರಾಜ್ಯಕ್ಕೆ ಆಗಾಗ ಭೇಟಿ ನೀಡಿ ಸಮಾವೇಶಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ, ಈ ಮಧ್ಯೆ ರಾಜ್ಯ ರಾಜಕೀಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸಹಕಾರ ಹಾಗೂ ಪ್ರಭಾವಳಿ ಅನಿವಾರ್ಯ ಎಂಬ ಕೂಗು ರಾಜ್ಯ ನಾಯಕರಿಂದ ಕೇಳಿಬಂದಿದೆ. 2023ರಲ್ಲಿ ಬಿಜೆಪಿ ಗೆಲ್ಲಬೇಕಾದರೆ ಯಡಿಯೂರಪ್ಪ ಅವರನ್ನು ಕಡೆಗಣಿಸಬೇಡಿ ಎಂಬ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಪ್ರಬಲ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಅನಿವಾರ್ಯತೆ ಬಗ್ಗೆ ಈ ಪಕ್ಷದ ೩೫ಕ್ಕೂ ಹೆಚ್ಚು ಶಾಸಕರು ವರಿಷ್ಠರಿಗೆ ಪತ್ರ ಬರೆದು ತಿಳಿಸಿದ್ದಾರೆ ಎಂಬ ಮಾಹಿತಿ ವಿಸ್ತಾರ ನ್ಯೂಸ್‌ಗೆ ಸಿಕ್ಕಿದೆ. ಇದರ ನಡುವೆ ಹಲವು ಶಾಸಕರು ಯಡಿಯೂರಪ್ಪ ಅವರನ್ನು ಭೇಟಿಯಾಗಿ, ನೀವು ಬೆಂಗಳೂರು ಬಿಟ್ಟು ನಮ್ಮ ಕ್ಷೇತ್ರಕ್ಕೆ ಬನ್ನಿ, ಪ್ರಚಾರ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Siddeshwara Swamiji: ಶಾಲಾ ವಿದ್ಯಾರ್ಥಿಗಳಿಂದ ಸಿದ್ದೇಶ್ವರ ಶ್ರೀಗಳ ಮರುಸೃಷ್ಟಿ; ದೃಶ್ಯ ರೂಪಕ ವೈರಲ್
ಪತ್ರದಲ್ಲೇನಿದೆ?
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಈ ಬಾರಿಯ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಬೇಕು. ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಬಿಜೆಪಿಗೆ ಹಿನ್ನಡೆಯಾಗಲಿದೆ. ಇಂದಿಗೂ ಯಡಿಯೂರಪ್ಪ ಅವರೇ ಬಿಜೆಪಿಗೆ ಮತ ತಂದು ಕೊಡುವ ನಾಯಕರಾಗಿದ್ದಾರೆ. ಹೀಗಾಗಿ ಅವರನ್ನು ಕಡೆಗಣಿಸಬೇಡಿ. ಅವರನ್ನು ಜತೆಯಲ್ಲಿ ಸೇರಿಸಿಕೊಂಡು ರಾಜ್ಯಕ್ಕೆ ಹೆಚ್ಚು ಹೆಚ್ಚು ಬಾರಿ ನೀವೂ ಭೇಟಿ ನೀಡಿ ಎಂದು ವರಿಷ್ಠರಿಗೆ ೩೫ಕ್ಕೂ ಹೆಚ್ಚು ಶಾಸಕರು ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.