Site icon Vistara News

Mass Murder: ಭಟ್ಕಳದ ನಾಲ್ವರ ಕೊಲೆ ಆರೋಪಿ ಇನ್ನೂ ನಾಪತ್ತೆ, ಆಸ್ತಿಗಾಗಿ ಕೊಲೆಗೆ ಕುಮ್ಮಕ್ಕು ನೀಡಿದ ಸೊಸೆ

mass murder

ಕಾರವಾರ: ಭಟ್ಕಳದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ (mass murder) ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆಸ್ತಿ ಕಲಹದಿಂದ ಈ ಕೊಲೆಗಳು ನಡೆದಿವೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿತ್ತು. ಶಂಭು ಭಟ್(70), ಅವರ ಪತ್ನಿ ಮಾದೇವಿ ಭಟ್(60), ಮಗ ರಾಘವೇಂದ್ರ ಭಟ್(40) ಹಾಗೂ ಸೊಸೆ ಕುಸುಮಾ ಭಟ್(30) ಕೊಲೆಯಾಗಿದ್ದ ದುರ್ದೈವಿಗಳು.

ಆರೋಪಿ ವಿದ್ಯಾ ಭಟ್

7 ತಿಂಗಳ ಹಿಂದೆ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದರು. ಶ್ರೀಧರ ಭಟ್ ಮರಣದ ನಂತರ ಮೂರ್ನಾಲ್ಕು ತಿಂಗಳಲ್ಲೇ ಅವರ ಪತ್ನಿ ವಿದ್ಯಾ ಭಟ್ ಕುಟುಂಬದ ಆಸ್ತಿಯಲ್ಲಿ ಪಾಲು ಕೇಳಿದ್ದಳು. ಜೀವನಾಂಶ ಹಾಗೂ ಶಂಭು ಭಟ್‌ಗೆ ಸೇರಿದ್ದ 6 ಎಕರೆ ಜಮೀನಿನಲ್ಲಿ ಪಾಲು ಕೇಳಿದ್ದಳು. ಸಾಕಷ್ಟು ಬಾರಿ ಜಗಳವಾದ ಬಳಿಕ 1 ಎಕರೆ 9 ಗುಂಟೆ ಜಮೀನನ್ನು ಶಂಭು ಭಟ್ ನೀಡಿದ್ದರು. ಇನ್ನಷ್ಟು ಆಸ್ತಿಪಾಲು ಕೇಳಿದ್ದ ಹಿನ್ನೆಲೆಯಲ್ಲಿ ಗಲಾಟೆ ತಾರಕಕ್ಕೇರಿತ್ತು.

ಇದನ್ನೂ ಓದಿ: Mass Murder: ಭಟ್ಕಳದ ಒಂದೇ ಕುಟುಂಬದ ನಾಲ್ವರ ಹತ್ಯಾಕಾಂಡದ ಕಾರಣ ಬಯಲು; ಆರೋಪಿಗಾಗಿ ಪೊಲೀಸರ ತೀವ್ರ ಶೋಧ

ವಿದ್ಯಾ ಭಟ್‌ ಪಡೆದಿದ್ದ ಆಸ್ತಿಯನ್ನು ವಿದ್ಯಾಳ ಸಹೋದರ, ಹಲ್ಯಾಣಿ ಗ್ರಾಮದ ನಿವಾಸಿ ವಿನಯ ಭಟ್ ನೋಡಿಕೊಳ್ಳುತ್ತಿದ್ದ. ಶುಕ್ರವಾರ ಆಸ್ತಿ ವಿಚಾರವಾಗಿ ಮತ್ತೆ ಮಾತಿಗೆ ಮಾತು ಬೆಳೆದಿದ್ದು ಗಲಾಟೆ ತಾರಕಕ್ಕೇರಿ ವಿನಯ ಭಟ್‌ ನಾಲ್ವರನ್ನೂ ಕತ್ತಿಯಿಂದ ಕಡಿದು ಕೊಂದಿದ್ದಾನೆ. ಈತನಿಗೆ ವಿದ್ಯಾ ಭಟ್ ಕುಮ್ಮಕ್ಕು ನೀಡಿದ್ದಾಳೆ. ಕೃತ್ಯ ನಡೆದಾಗ ಮನೆಯ 10 ವರ್ಷದ ಬಾಲಕ ಪಕ್ಕದ ಮನೆಯಲ್ಲಿದ್ದರೆ, 4 ವರ್ಷದ ಇನ್ನೊಂದು ಹೆಣ್ಣು ಮಗು ಮನೆಯಲ್ಲೇ ಮಲಗಿದ್ದುದರಿಂದ ಇವರಿಬ್ಬರೂ ಬದುಕುಳಿದಿದ್ದಾರೆ.

ಮೃತ ಶಂಭು ಭಟ್ ಅವರ ಪುತ್ರಿ ಜಯಾ ಅಡಿಗ ನೀಡಿದ ದೂರಿನನ್ವಯ ಪೊಲೀಸರು ಆರೋಪಿಗಳಾದ ವಿದ್ಯಾ ಭಟ್ ಹಾಗೂ ಆಕೆಯ ತಂದೆ ಶ್ರೀಧರ್ ಭಟ್‌ರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕೊಲೆ ಎಸಗಿದ ವಿನಯ ಭಟ್‌ ಪರಾರಿಯಾಗಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ. ಭಟ್ಕಳ ಡಿವೈಎಸ್ಪಿ, ಸಿಪಿಐ ನೇತೃತ್ವದಲ್ಲಿ 2 ತಂಡ ರಚಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Mass murder : ಭಟ್ಕಳದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ; ಕತ್ತಿಯಿಂದ ಕಡಿದು ಕೊಂದ ದುಷ್ಕರ್ಮಿ, ಏನು ಕಾರಣ?

Exit mobile version