Site icon Vistara News

ಬಿಜೆಪಿ ತೊರೆಯಲಿದ್ದಾರೆ ವಿ.ಎಸ್‌. ಪಾಟೀಲ್‌: ಯಲ್ಲಾಪುರದಲ್ಲಿ ಅದೇ ಅಭ್ಯರ್ಥಿಗಳು, ಪಕ್ಷ ಮಾತ್ರ ಬದಲು!

vs patil set to join congress party thurseday

ಶಿರಸಿ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ವಿವಿಧ ಕ್ಷೇತ್ರಗಳಲ್ಲಿ ಪಕ್ಷ ಬದಲಾವಣೆ, ಅಭ್ಯರ್ಥಿಗಳ ಗುರುತಿಸುವಿಕೆ ಮುಂದುವರಿದಿದೆ. ಯಲ್ಲಾಪುರ ಕ್ಷೇತ್ರದಲ್ಲಿ ಮಾಜಿ ಶಾಸಕ ವಿ.ಎಸ್‌. ಪಾಟೀಲ ಬಿಜೆಪಿ ತೊರೆಯಲು ಸಿದ್ಧರಾಗಿದ್ದಾರೆ.

ಬಿಜೆಪಿಯಿಂದ ಮಾನಸಿಕವಾಗಿ ದೂರವಾಗಿದ್ದ ಪಾಟೀಲರನ್ನು ರಾಜ್ಯ ಸರ್ಕಾರ ನೇಮಿಸಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NWKRTC) ಅಧ್ಯಕ್ಷ ಸ್ಥಾನದಿಂದ ಬುಧವಾರವಷ್ಟೆ ವಜಾ ಮಾಡಲಾಗಿದೆ. ಈ ಮೂಲಕ, ಕಾಂಗ್ರೆಸ್‌ ಸೇರ್ಪಡೆ ಹಾದಿಯನ್ನು ಪಕ್ಷವೇ ಸುಗಮಗೊಳಿಸಿಕೊಂಡಿದೆ.

2008ರಲ್ಲಿ ಯಲ್ಲಾಪುರ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್‌ನ ಶಿವರಾಮ್‌ ಹೆಬ್ಬಾರ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಜಯ ಗಳಿಸಿದ್ದ ಪಾಟೀಲ್‌, ನಂತರ ಎರಡು ಚುನಾವಣೆಯಲ್ಲೂ ಹೆಬ್ಬಾರ್‌ ಅವರ ವಿರುದ್ಧವೇ ಸ್ಪರ್ಧಿಸಿದ್ದರು. ಆದರೆ ಜಯಗಳಿಸಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಹೆಬ್ಬಾರ್‌ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪೂರಕವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಆಗಮಿಸಿದ ಶಾಸಕರ ಪೈಕಿ ಶಿವರಾಮ ಹೆಬ್ಬಾರ್‌ ಸಹ ಒಬ್ಬರು.

ಇದನ್ನೂ ಓದಿ | ಎಲೆಕ್ಷನ್‌ ಹವಾ | ಕಲಘಟಗಿ‌ | ಸಂತೋಷ್ ಲಾಡ್ ಯಾವ ಪಾರ್ಟಿ ಟಿಕೆಟ್ ತರುತ್ತಾರೆ ಎನ್ನುವುದೇ ಚರ್ಚೆ

ಈ ಸಮಯದಲ್ಲೆ ಮುನಿಸಿಕೊಂಡಿದ್ದ ವಿ.ಎಸ್‌. ಪಾಟೀಲ್‌ ಅವರನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ೨೦೧೯ರಲ್ಲಿ ನೇಮಕ ಮಾಡಲಾಗಿತ್ತು. ಕಾಂಗ್ರೆಸ್‌ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಲಭಿಸುತ್ತಿದ್ದಂತೆಯೇ ಬಿಜೆಪಿ ಸರ್ಕಾರದ ವತಿಯಿಂದ ನೇಮಿಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ರದ್ದುಪಡಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಟೀಲ್‌, ಬಿಜೆಪಿ ತೊರೆಯುವುದನ್ನು ಖಚಿತಪಡಿಸಿದ್ದಾರೆ. ಪಕ್ಷದಲ್ಲಿ ಕೆಲವರ ನಡೆ ಕುರಿತು ನನಗೆ ಅಸಮಾಧಾನವಾಗಿದೆ. ಹೀಗಾಗಿ ಪಕ್ಷ ಬಿಡುವ ನಿರ್ಧಾರ ಮಾಡಿದ್ದೇನೆ. ಈಗಾಗಲೇ ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಂಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಮತ್ತೊಮ್ಮೆ ಭೇಟಿಯಾಗಿ ಚರ್ಚೆ ಮಾಡಿ ಪಕ್ಷ ಸೇರ್ಪಡೆ ಆಗಬೇಕು ಎಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಸೇರ್ಪಡೆಯಾಗುವ ಸಮಯದಲ್ಲೆ, ಟಿಕೆಟ್‌ ಕುರಿತು ಪಾಟೀಲ್‌ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಹೆಬ್ಬಾರ್‌ ಅವರೇ ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ, ಕಳೆದ ಮೂರು ಚುನಾವಣೆಗಳಿಂದಲೂ ಪ್ರತಿಸ್ಪರ್ಧಿಗಳಾಗಿರುವ ಇಬ್ಬರೇ, ಆದರೆ ವಿಭಿನ್ನ ಪಕ್ಷಗಳಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ವಿಶೇಷವಾಗಲಿದೆ.

ಇದನ್ನೂ ಓದಿ | Independence Day | ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಧ್ವಜಾರೋಹಣ

Exit mobile version