ಕಾರವಾರ: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಮನೆಯಲ್ಲಿ ಬೆಂಕಿ ಆಕಸ್ಮಿಕ (Fire mishop) ಸಂಭವಿಸಿದೆ. ಇದು ಶಾರ್ಟ್ ಸರ್ಕ್ಯೂಟ್‌ನಿಂದ (Short Circuit) ಆಗಿದೆ ಎಂದು ತಿಳಿದುಬಂದಿದೆ.
ಶಿರಸಿಯ ಕೆಎಚ್‌ಬಿ ಕಾಲೋನಿಯಲ್ಲಿ ಇರುವ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಮೇಲ್ಭಾಗದ ಜಿಮ್ ಮಾಡುವ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸೃಷ್ಟಿಯಾದ ಪರಿಣಾಮ ಜಿಮ್ ಮಾಡುವ ಯಂತ್ರಗಳಿಗೆ ಅಲ್ಪ ಹಾನಿಯಾಗಿದೆ. ಇದನ್ನು ಹೊರತುಪಡಿಸಿದರೆ ಹೊಗೆಯಿಂದ ಗೋಡೆಗಳಿಗೆ ಹಾನಿಯಾಗಿದ್ದು ಅಂದಾಜು 50 ಸಾವಿರದಷ್ಟು ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದು ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನೀಲ್ ಅವರು ಮಾಹಿತಿ ನೀಡಿದ್ದಾರೆ.
ಸರಗಳ್ಳನ ಕಾಲಿಗೆ ತುಮಕೂರು ಪೊಲೀಸ್ ಗುಂಡೇಟು
ತುಮಕೂರು: ತುಮಕೂರಿನಲ್ಲಿ ಪೊಲೀಸ್ ತುಪಾಕಿ (Tumkur Shoot out) ಸದ್ದು ಮಾಡಿದೆ. ನಿರಂತರವಾಗಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆಂಧ್ರದ ಹಿಂದೂಪುರ ಮೂಲದ ರಿಜ್ವಾನ್ ಎಂಬಾತನಿಗೆ ಗುಂಡೇಟು ಬಿದ್ದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಈಜೀಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ.
ಆರೋಪಿ ರಿಜ್ವಾನ್ ಒಟ್ಟು 15ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಳೆದ ಒಂದು ವಾರದ ಹಿಂದೆ ಎ1 ಆರೋಪಿ ಚಿನ್ನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ (ಜೂ.24) ಖಚಿತ ಮಾಹಿತಿ ಮೇರೆಗೆ ಎ2 ಆರೋಪಿ ರಿಜ್ವಾನ್‌ನನ್ನು ಬಂಧಿಸಲು ಪೊಲೀಸರು ತೆರಳಿದ್ದರು.
ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ, ಸಿಪಿಐ ಹನುನಂತರಾಯಪ್ಪ, ಪಿಎಸ್‌ಐ ಶ್ರೀನಿವಾಸ್, ದಾದಪೀರ್, ಹಾಗೂ ಪೊಲೀಸ್ ಸಿಬ್ಬಂದಿ ರಮೇಶ್ ತಂಡ ತೆರಳಿತ್ತು. ಹೊಸಪೇಟೆಯಿಂದ ಪೊಲೀಸ್ ಜೀಪ್‌ನಲ್ಲಿ ಮಧುಗಿರಿಗೆ ಕರೆತರುತ್ತಿದ್ದಾಗ, ಬಹಿರ್ದೆಸೆಗೆ ಹೋಗುವುದಾಗಿ ಈಜಿಹಳ್ಳಿ ಕ್ರಾಸ್ ಬಳಿ ಇಳಿದಿದ್ದ. ಈ ವೇಳೆ ಪೊಲೀಸ್ ಪೇದೆ ರಮೇಶ್ ಮೇಲೆ ರಿಹ್ವಾನ್ ಬಿಯರ್ ಬಾಟಲ್ ಎಸೆದು ಹಲ್ಲೆ ನಡೆಸಿ, ಪರಾರಿ ಆಗಲು ಯತ್ನಿಸಿದ್ದ. ಪೊಲೀಸರು ಶರಣಾಗುವಂತೆ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಪೊಲೀಸರ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ಕರೆ ತಂದಿದ್ದಾರೆ.
ಬಿಯರ್ ಬಾಟೆಲ್‌ನಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ರಮೇಶ್‌ಗೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಿಜ್ವಾನ್‌ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನೂ ರಿಜ್ವಾನ್ ಮೇಲೆ ಮಧುಗಿರಿ 3, ಮಿಡಗೇಶಿ 4, ಬಡವನಹಳ್ಳಿ 2, ಕೊರಟಗೆರೆ 1, ಕೊಡಿಗೇನಹಳ್ಳಿ 2 ಹಾಗೂ ಮಡಕಶಿರಾ 1, ಪಟ್ಟನಾಯಕನಹಳ್ಳಿ 2, ಗೌರಿಬಿದನೂರು 1 ಸೇರಿದಂತೆ ಹಲವು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿವೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಇದನ್ನೂ ಓದಿ: Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು