Site icon Vistara News

Multi specialty | ಆಸ್ಪತ್ರೆ ನಿರ್ಮಾಣಕ್ಕೆ ಸ್ಪೀಕರ್ ಕಾಗೇರಿ ಮನವಿಗೆ ಸ್ಪಂದಿಸಿದ ಸಚಿವ ಸುಧಾಕರ್‌

multi special

ಕಾರವಾರ: ಜಿಲ್ಲೆಗೆ ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ (Multi specialty) ಅಗತ್ಯವಿದ್ದು, ತ್ವರಿತವಾಗಿ ನಿರ್ಮಾಣ ಮಾಡಬೇಕೆಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆರೋಗ್ಯ ಸಚಿವ ಸುಧಾಕರ್‌ ಅವರಿಗೆ ಮನವಿ ಮಾಡಿದ್ದಾರೆ.

ಈ ವಿಚಾರವಾಗಿ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವ ಸುಧಾಕರ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಇಂದೊಂದು ವಿಶೇಷ ಅತ್ಯಗತ್ಯ ಪ್ರಕರಣವಾಗಿ ಪರಿಗಣಿಸಿ ಶೀಘ್ರದಲ್ಲಿಯೇ ಆಸ್ಪತ್ರೆ ನಿರ್ಮಿಸಲು ಅಗತ್ಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಆಸ್ಪತ್ರೆಗಾಗಿ ತೀವ್ರಗೊಂಡ ಹೋರಾಟ

ಕಳೆದ ಕೆಲ ದಿನಗಳ ಹಿಂದೆ ಉಡುಪಿಯ ಬೈಂದೂರು ಟೋಲ್‌ನಲ್ಲಿ ನಡೆದ ಭೀಕರ ಅಪಘಾತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಅದಕ್ಕೂ ಹೆಚ್ಚಾಗಿ ನಾಲ್ವರನ್ನು ಕಳೆದುಕೊಂಡ ಉತ್ತರಕನ್ನಡ ಜನತೆ ಇನ್ನೆಷ್ಟು ಮಂದಿ ಈ ರೀತಿ ಬಲಿಯಾಗಬೇಕು ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ತುರ್ತು ಚಿಕಿತ್ಸಾ ಆಸ್ಪತ್ರೆ ಇಲ್ಲದಿರುವುದೇ ಇವೆಲ್ಲ ಅವಘಡಗಳಿಗೆ ಮೂಲ ಕಾರಣ. ಈ ನಿಟ್ಟಿನಲ್ಲಿ ಇದೀಗ ಮತ್ತೆ ಜಿಲ್ಲೆಯ ಜನತೆ ಒಟ್ಟಾಗಿ ಎಮರ್ಜೆನ್ಸಿ ಆಸ್ಪತ್ರೆಗಾಗಿ ಅಭಿಯಾನದ ಮೂಲಕ ಹೋರಾಟಕ್ಕೆ ಇಳಿಯಲು ಮುಂದಾಗಿದ್ದರು.

ಮಾನ್ಯ ಮುಖ್ಯಮಂತ್ರಿಯವರೇ, ನಮ್ಮ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multi-Specialty Hospital) ಕೊಡಿ, ನಮ್ಮ ತ್ಯಾಗಕ್ಕೊಂದು ಅರ್ಥ ಕಲ್ಪಿಸಿ. ದೇಶಕ್ಕಾಗಿ ಎಲ್ಲವನ್ನೂ ಕೊಟ್ಟ ನಮಗೆ ʼಆರೋಗ್ಯʼದ ಶ್ರೀರಕ್ಷೆ ನಿಮ್ಮಿಂದ ಸಿಗಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿತ್ತು.

ಈ ಕುರಿತು ʻವಿಸ್ತಾರ ನ್ಯೂಸ್‌ʼ ಶನಿವಾರ Multi-Specialty Hospital | ರಾಜ್ಯಕ್ಕೆ ಬೆಳಕು ಕೊಟ್ಟ ಉತ್ತರ ಕನ್ನಡಕ್ಕೆ ಇಲ್ಲ ಆರೋಗ್ಯದ ಬೆಳಕು ಶೀರ್ಷಿಕೆಯಲ್ಲಿ ವಿಶೇಷ ವರದಿಯನ್ನು ಪ್ರಕಟಿಸಿತ್ತು.

Exit mobile version