Site icon Vistara News

ಉತ್ತರ ಕನ್ನಡ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಕರಾವಳಿಯಲ್ಲಿ ಬಿಜೆಪಿಗೆ ಕಾಂಗ್ರೆಸ್‌, ಜೆಡಿಎಸ್‌ ಪ್ರಬಲ ಪೈಪೋಟಿ

Karnataka Election 2023 uttara kannada district constituency wise election analysis 

uttara kannada

ಎಸ್.ಎಸ್.ಸಂದೀಪ ಸಾಗರ ವಿಸ್ತಾರ ನ್ಯೂಸ್, ಕಾರವಾರ
ಕಳೆದ ಬಾರಿ ಹಿಂದುತ್ವದ ಅಲೆಯಲ್ಲಿ ಜಿಲ್ಲೆಯಾದ್ಯಂತ ಕಮಲ ಅರಳಿಸುವಲ್ಲಿ ಬಿಜೆಪಿ ಭರ್ಜರಿ ಯಶಸ್ಸು ಸಾಧಿಸಿತ್ತು. ಆ ಬಳಿಕ ಪಕ್ಷಾಂತರ ಪರ್ವದಿಂದ ಯಲ್ಲಾಪುರ ಕ್ಷೇತ್ರವೂ ಲಭಿಸುವಂತಾಗಿತ್ತು. ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ಉತ್ತರ ಕನ್ನಡವನ್ನು ಬಿಜೆಪಿ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಹಳಿಯಾಳ ಕ್ಷೇತ್ರವೊಂದೇ ಕಾಂಗ್ರೆಸ್‌ ಪಾಲಿಗೆ ಉಳಿದುಕೊಂಡಿತ್ತು. ಆದರೆ ಈ ಬಾರಿ (Karnataka Election 2023) ರಾಜಕೀಯ ಚಿತ್ರಣ ಬದಲಾಗಿದೆ. ಕರಾವಳಿಯಲ್ಲಿ ಹಿಂದುತ್ವದ ಅಲೆ ಈಗಿಲ್ಲ. ಬದಲಿಗೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ವಿರೋಧಿ ಅಲೆ ಎದ್ದಿದೆ. ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತೆ ಪುಟಿದೇಳುವ ಸಾಧ್ಯತೆ ಕಾಣಿಸುತ್ತಿದೆ.

ಹೊಸ ಮುಖಗಳ ಸ್ಪರ್ಧೆ: ಜಿಲ್ಲೆ ಆರೂ ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ವಿಶೇಷ. ಹೀಗಾಗಿ ಬಹುತೇಕ ಕ್ಷೇತ್ರಗಳಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಶಾಸಕರುಗಳ ವಿರುದ್ಧದ ಅಲೆ, ಹಳಬರ ಮೇಲಿನ ಬೇಸರದಿಂದಾಗಿ ಈ ಬಾರಿ ಹೊಸ ಮುಖಕ್ಕೆ ಮತದಾರರು ಮಣೆ ಹಾಕುವ ಲಕ್ಷಣ ಕಂಡುಬಂದಿವೆ. ಹೀಗಾಗಿ ಈ ಬಾರಿಯ ಫಲಿತಾಂಶ ಭಿನ್ನವಾಗಿ ಬರುವ ನಿರೀಕ್ಷೆ ಇದೆ.

ಕಾರವಾರ-ಅಂಕೋಲಾ: ಇಬ್ಬರು
ಮಹಿಳಾ ಅಭ್ಯರ್ಥಿಗಳು ಕಣದಲ್ಲಿ;
ತ್ರಿಕೋನ ಸ್ಪರ್ಧೆಯ ಸಾಧ್ಯತೆ

ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಈ ಬಾರಿ ವಿಶೇಷ ಎನ್ನುವಂತೆ ಇಬ್ಬರು ಪ್ರಬಲ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಮೂಲಕ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಹಾಲಿ ಶಾಸಕಿ ರೂಪಾಲಿ ನಾಯ್ಕ ಬಿಜೆಪಿ ಅಭ್ಯರ್ಥಿಯಾಗಿದ್ದು, ಮಾಜಿ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೊಠಾರಕರ್ ಅಚ್ಚರಿ ಎನ್ನುವಂತೆ ಕೊನೇ ಕ್ಷಣದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಮೂವರೂ ಅಭ್ಯರ್ಥಿಗಳಿಗೂ ಕ್ಷೇತ್ರದಲ್ಲಿ ತಮ್ಮದೇ ಆದ ಜನಬೆಂಬಲ ಇದ್ದು, ಈ ಬಾರಿ ಮತದಾರರ ಆಯ್ಕೆ ಏನಿರಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

Karnataka Election 2023 uttara kannada district constituency wise election analysis 

ಕ್ಷೇತ್ರದಲ್ಲಿ ಒಮ್ಮೆ ಆಯ್ಕೆಯಾದವರು ಎರಡನೇ ಬಾರಿಗೆ ಗೆಲುವು ಸಾಧಿಸಿದ ಉದಾಹರಣೆ ಇಲ್ಲಿ ಕಡಿಮೆ. ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ರೂಪಾಲಿ ನಾಯ್ಕ ಅವರು ಶಾಸಕರಾಗಿದ್ದ ಸತೀಶ್ ಸೈಲ್‌ರನ್ನ ಹಿಂದಿಕ್ಕಿ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್‌ರನ್ನ ಸೋಲಿಸಿ 14 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಈ ಬಾರಿ ಮತ್ತೊಂದು ಹೊಸ ಮುಖ ಕಣದಲ್ಲಿದ್ದು, ಸಹಜವಾಗಿ ಮತಗಳು ಮೂರು ಕಡೆ ಹಂಚಿಹೋಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಜನ ಈ ಬಾರಿಯೂ ತಮ್ಮ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ರೂಪಾಲಿ ನಾಯ್ಕ ಅವರದು.

ಕಳೆದ ಬಾರಿಯ ಫಲಿತಾಂಶ ಏನು?
ರೂಪಾಲಿ ನಾಯ್ಕ (ಬಿಜೆಪಿ): 60,339 | ಆನಂದ್ ಅಸ್ನೋಟಿಕರ್ (ಜೆಡಿಎಸ್): 46,275 | ಗೆಲುವಿನ ಅಂತರ: 14,064

ಕುಮಟಾ-ಹೊನ್ನಾವರ: ಬಿಜೆಪಿ
ವಿರೋಧಿ ಅಲೆ, ಕಾಂಗ್ರೆಸ್
ಭಿನ್ನಮತ, ಜೆಡಿಎಸ್‍ಗೆ ಲಾಭ?

ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಕುಮಟಾ ಮುಂಚೂಣಿಯಲ್ಲಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ 14 ಮಂದಿ ಆಕಾಂಕ್ಷಿಗಳಿಂದ ಗಮನ ಸೆಳೆದಿದ್ದ ಈ ಕ್ಷೇತ್ರದಲ್ಲಿ ಕೊನೆಗೆ ಕಾಂಗ್ರೆಸ್ ಹೊಸ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾರನ್ನು ಕಣಕ್ಕಿಳಿಸಿದೆ. ಇದರಿಂದ ಪಕ್ಷದಲ್ಲಿ ಭಿನ್ನಮತ ಸ್ಫೋಟವಾಗಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಬಂಡಾಯ ಎದ್ದಿದ್ದರಾದರೂ ಕೊನೆಗೆ ನಾಮಪತ್ರ ಹಿಂಪಡೆದು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಪಕ್ಷ ನಿಷ್ಠಾವಂತರನ್ನು ಕಡೆಗಣಿಸುತ್ತದೆ ಎನ್ನುವ ಆರೋಪ ಕಾಂಗ್ರೆಸ್ ಮೇಲೆ ಬಂದಿದ್ದು, ಇದರ ಬಿಸಿ ಅಭ್ಯರ್ಥಿ ನಿವೇದಿತ್ ಆಳ್ವಾಗೆ ತಟ್ಟಿದೆ. ಆದರೂ ಎಲ್ಲವನ್ನೂ ಸುಧಾರಿಸಿಕೊಂಡು ಗೆಲ್ಲುವ ಆಶಯದೊಂದಿಗೆ ನಿವೇದಿತ್ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Karnataka Election 2023 uttara kannada district constituency wise election analysis 

ಇನ್ನೊಂದೆಡೆ ಕ್ಷೇತ್ರದ ಹಾಲಿ ಶಾಸಕ ದಿನಕರ ಶೆಟ್ಟಿ ಬಿಜೆಪಿ ಅಭ್ಯರ್ಥಿಯಾಗಿ ಎರಡನೇಯ ಅವಧಿಗೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಆದರೆ ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಅಲೆ ಎದ್ದಿದೆ. ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ದಿನಕರ ಶೆಟ್ಟಿ ಎಡವಿದ್ದು, ಹಲವು ಕಾಮಗಾರಿಗಳು ಅಪೂರ್ಣಗೊಂಡಿದೆ ಎಂಬ ದೂರಿದೆ.

ಇನ್ನೊಂದೆಡೆ ಮೂಲ ಬಿಜೆಪಿಗರನ್ನು ಕಡೆಗಣಿಸಿರುವ ಅಸಮಾಧಾನ ಸಹ ದಿನಕರ ಶೆಟ್ಟಿ ಮೇಲಿದ್ದು, ಪಕ್ಷದವರಿಂದಲೇ ಟಿಕೆಟ್ ತಪ್ಪಿಸುವ ಪ್ರಯತ್ನ ಸಹ ನಡೆದಿತ್ತು. ಅದರಲ್ಲೂ ಕಳೆದ ಬಾರಿ ಹಿಂದುತ್ವದ ಅಲೆಯಲ್ಲಿ ಗೆಲುವು ಸಾಧಿಸಿದ ಬಳಿಕವೂ, ಹೊನ್ನಾವರದ ಯುವಕ ಪರೇಶ್ ಮೇಸ್ತಾ ಸಾವಿನ ಪ್ರಕರಣದ ಹೋರಾಟದಲ್ಲಿ ಯುವಕರ ಮೇಲೆ ದಾಖಲಾಗಿದ್ದ ಪ್ರಕರಣ ಹಿಂಪಡೆಯುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪ ಬಿಜೆಪಿ ಮೇಲಿದೆ.

ಕಳೆದ ಬಾರಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೂರಜ್ ನಾಯ್ಕ ಸೋನಿ, ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಮೂಲ ಬಿಜೆಪಿಯ ಒಂದಿಷ್ಟು ಮಂದಿ ಸೂರಜ್ ಬೆನ್ನಿಗೆ ನಿಂತಿದ್ದಾರೆ. ಅದರಲ್ಲೂ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರಿರುವ ನಾಮಧಾರಿ ಸಮುದಾಯದ ಅಭ್ಯರ್ಥಿಯಾಗಿರುವುದರ ಜೊತೆಗೆ ಯುವ ಸಮುದಾಯ ಸೂರಜ್‌ರತ್ತ ವಾಲಿದೆ. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಟ್ಟು ಮುನ್ನಡೆ ಸಾಧಿಸುವ ಸಾಧ್ಯತೆಯೂ ಇದೆ!

ಕಳೆದ ಬಾರಿಯ ಫಲಿತಾಂಶ ಏನು?
ದಿನಕರ ಕೆ ಶೆಟ್ಟಿ (ಬಿಜೆಪಿ): 59,392 | ಶಾರದಾ ಮೋಹನ್ ಶೆಟ್ಟಿ (ಕಾಂಗ್ರೆಸ್‌): 26,642 | ಗೆಲುವಿನ ಅಂತರ: 32,750

ಭಟ್ಕಳ-ಹೊನ್ನಾವರ: ಬಿಜೆಪಿಗೆ
ಭಿನ್ನಮತದ ಸಂಕಟ,
ಕಾಂಗ್ರೆಸ್‌ಗೆ ಗೆಲುವಿನ ವರ?

ಭಟ್ಕಳ ಕ್ಷೇತ್ರದಲ್ಲಿ ನಾಮಧಾರಿ ಸಮುದಾಯದ ಮತದಾರರು ನಿರ್ಣಾಯಕ. ಮುಸ್ಲಿಂ ಮತಗಳೂ ಸಹ ಗಣನೀಯ ಸಂಖ್ಯೆಯಲ್ಲಿವೆ. ಕಳೆದ ಬಾರಿ ಪರೇಶ್ ಮೇಸ್ತಾ ಸಾವಿನ ಪ್ರಕರಣ ಕಾರಣ ಹಿಂದುತ್ವದ ಅಲೆಯಲ್ಲಿ ಕಾಂಗ್ರೆಸ್ ಎದುರು ಬಿಜೆಪಿ ಗೆಲುವಿನ ನಗೆ ಬೀರಿತ್ತಾದರೂ, ಗೆಲುವಿನ ಅಂತರ ಕೇವಲ 5 ಸಾವಿರ ಮತಗಳಾಗಿತ್ತು.

ಈ ಬಾರಿ ಕ್ಷೇತ್ರದಲ್ಲಿ ಹಿಂದುತ್ವದ ಅಲೆ ಇಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶಿವಾಜಿ ಜಯಂತಿಯಂದು ಭಟ್ಕಳಕ್ಕೆ ಆಗಮಿಸಿದ್ದ ವೇಳೆ ಮಾಂಸದೂಟ ಮಾಡಿಸಿ ದೇವಸ್ಥಾನಕ್ಕೆ ಕರೆದೊಯ್ದಿದ್ದ ವಿಚಾರ ಬಿಜೆಪಿ ಪಾಳಯದಲ್ಲಿ ಸುನೀಲ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಣಾಮವಾಗಿ ಕಾರ್ಯಕರ್ತರು ಅಭ್ಯರ್ಥಿಯನ್ನು ಬದಲಾಯಿಸುವಂತೆಯೂ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಿದ್ದರು.

Karnataka Election 2023 uttara kannada district constituency wise election analysis 

ಹಿಂದಿನ ಚುನಾವಣೆಯ ಎದುರಾಳಿಗಳಾಗಿದ್ದ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಮಂಕಾಳು ವೈದ್ಯ ಈ ಬಾರಿಯೂ ಮುಖಾಮುಖಿಯಾಗಲಿದ್ದಾರೆ. ಕಳೆದ ಬಾರಿ ತಾವು ಎಡವಿದ್ದ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಮಂಕಾಳು ವೈದ್ಯ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸುನಿಲ್‌ ನಾಯ್ಕ್‌ ವಿರುದ್ಧದ ಅಲೆ ಮಂಕಾಳು ವೈದ್ಯ ಗೆಲುವಿಗೆ ಅನುಕೂಲವಾಗುವ ಸಾಧ್ಯತೆ ಇದೆ. ಭಟ್ಕಳ ಕ್ಷೇತ್ರದ ಸಾಂಪ್ರದಾಯಿಕ, ಮೋದಿ ಬೆಂಬಲಿಗ ಬಿಜೆಪಿಗರ ಮತಗಳೇ ಸುನೀಲ್‌ ನಾಯ್ಕ್‌ಗೆ ಆಸರೆಯಾಗಿದೆ.

ಜೆಡಿಎಸ್‌ನಿಂದ ಈ ಬಾರಿ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಕಣದಲ್ಲಿದ್ದು, ಪ್ರಬಲ ನಾಮಧಾರಿ ಸಮುದಾಯದ ಅಭ್ಯರ್ಥಿಯೇ ಆಗಿದ್ದಾರೆ. ಹೀಗಾಗಿ ಸುನೀಲ್ ನಾಯ್ಕಗೆ ಇದೂ ಸಹ ಹೊಡೆತ ನೀಡಲಿದೆ. ದೊಡ್ಡ ಸಂಖ್ಯೆಯ ಮುಸ್ಲಿಂ ಮತಗಳು ಸಹಜವಾಗಿಯೇ ಕಾಂಗ್ರೆಸ್‌ಗೆ ಸಿಗುವುದರಿಂದ ಸದ್ಯದ ಟ್ರೆಂಡ್‌ ಪ್ರಕಾರ ಕಾಂಗ್ರೆಸ್‌ ಇಲ್ಲಿ ಮುನ್ನಡೆಯಲ್ಲಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಸುನೀಲ್ ಬಿ ನಾಯ್ಕ (ಬಿಜೆಪಿ): 83,172 | ಮಂಕಾಳು ಎಸ್ ವೈದ್ಯ (ಕಾಂಗ್ರೆಸ್‌): 77,242 | ಗೆಲುವಿನ ಅಂತರ: 5,930

ಇದನ್ನೂ ಓದಿ : ಶಿವಮೊಗ್ಗ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಬಿಜೆಪಿಗೆ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು

Exit mobile version