Site icon Vistara News

ಐರ್ಲೆಂಡ್ |‌ ಕಾರ್ಮಿಕರ ಸಂಕ್ಷೇಮವೇ ಕೇಂದ್ರ, ರಾಜ್ಯ ಸರ್ಕಾರದ ಆದ್ಯತೆ ಎಂದ ಸಚಿವ ಶಿವರಾಂ ಹೆಬ್ಬಾರ್

ಶಿವರಾಂ ಹೆಬ್ಬಾರ್

ಡಬ್ಲಿನ್ (ಐರ್ಲೆಂಡ್): ವಿವಿಧ ಬಗೆಯ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳನ್ನು ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯಕ್ಕೆ ಪ್ರತಿಯಾಗಿ ಇ-ಶ್ರಮ್ ನೋಂದಣಿ ಮೂಲಕ ಶ್ರಮಿಕ ವರ್ಗವನ್ನು ಒಂದು ಕಡೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಪ್ರತಿಪಾದಿಸಿದರು.

ಐರ್ಲೆಂಡ್‌ಗೆ ವೈಯಕ್ತಿಕ ಪ್ರವಾಸ ಕೈಗೊಂಡಿರುವ ಅವರು, ಡಬ್ಲಿನ್‌ನಲ್ಲಿ “ಭಾರತ-ಐರ್ಲೆಂಡ್ ಸ್ನೇಹ ಉಪನ್ಯಾಸ ಮಾಲಿಕೆಯಡಿ ಭಾರತೀಯರಿಗೆ ವಿದೇಶಗಳಲ್ಲಿನ ಅವಕಾಶ- ಕರ್ನಾಟಕದ ದೃಷ್ಟಿಕೋನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಭಾರತ ಸರ್ಕಾರವು ಅಸಂಘಟಿತ ಕಾರ್ಮಿಕರ ಬಗೆಗಿನ ದತ್ತಾಂಶ ಪಡೆದುಕೊಂಡು ಆ ಮೂಲಕ ಸವಲತ್ತುಗಳನ್ನು ಸುಲಲಿತವಾಗಿ ವಿತರಿಸುವ ಸಲುವಾಗಿ ಇ-ಶ್ರಮ್ ಪೋರ್ಟಲ್ ಆರಂಭಿಸಿದೆ. ಈ ಶ್ರಮ್ ಪೋರ್ಟಲ್‌ನಲ್ಲಿ ಕರ್ನಾಟಕವು 1.9 ಕೋಟಿ ಕಾರ್ಮಿಕರ ನೋಂದಣಿ ಗುರಿ ಹೊಂದಿದ್ದು, ಆ ಪೈಕಿ ಈವರೆಗೆ 70 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Modi in Mangalore | ಜನರ ಆಕಾಂಕ್ಷೆಯೇ ನಮಗೆ ಆದೇಶ: ಮಂಗಳೂರಿನಲ್ಲಿ ಮೋದಿ ಹವಾ

ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಸಂಪೂರ್ಣ ಉಚಿತವಾಗಿದ್ದು, ನೋಂದಾಯಿತ ಕಾರ್ಮಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಸವಲತ್ತುಗಳನ್ನು ಪಡೆಯಲು ಅರ್ಹರಾಗಲಿದ್ದಾರೆ. 2 ಲಕ್ಷ ರೂ.ವರೆಗೆ ಪರಿಹಾರ ಸಿಗಲಿದೆ ಎಂದ ಸಚಿವರು, ಭಾರತವು ಅಂತಾರಾಷ್ಟ್ರೀಯ ವಲಸೆ ಕಾರ್ಮಿಕರ ಕೇಂದ್ರವನ್ನು ತೆರೆದಿದ್ದು, ಈ ಕೇಂದ್ರವು ಶ್ರಮಿಕ ವರ್ಗದವರಿಗೆ ತಮ್ಮ ಕೌಶಲ್ಯಕ್ಕೆ ತಕ್ಕಂತೆ ವಿದೇಶಗಳಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ ಎಂದರು.

ಕೇಂದ್ರವು ವಲಸೆ ಕಾರ್ಮಿಕರಿಗೆ ಅಗತ್ಯ ತರಬೇತಿ ಜತೆಗೆ 10 ಲಕ್ಷ ರೂಪಾಯಿಗಳ ವಿಮೆಯೊಂದಿಗೆ ಸಾಮಾಜಿಕ ಭದ್ರತೆಯನ್ನೂ ನೀಡುತ್ತಿದೆ. ಇದರಿಂದ ಕಾರ್ಮಿಕರ ಆತ್ಮವಿಶ್ವಾಸದ ಜತೆಗೆ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರವೂ ಶ್ರಮಿಕರ ಸಂಕ್ಷೇಮಕ್ಕೆ ಹತ್ತು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ಮಿಕರ ಮಂಡಳಿ, ಇಎಸ್‌ಐ ಸೇವೆಗಳು, ಬಾಯ್ಲರ್ ವಿಭಾಗಗಳು ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ಕಾರ್ಮಿಕ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಕೋವಿಡ್ ಸಂದರ್ಭದಲ್ಲಿ ಶ್ರಮಿಕ ವರ್ಗಕ್ಕೆ ಸಿದ್ಧಪಡಿಸಿದ ಆಹಾರ ಪದಾರ್ಥ, ರೇಷನ್ ಕಿಟ್, ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಜತೆಗೆ ಒಂದು ಬಾರಿ ಆರ್ಥಿಕ ಸಹಾಯಧನವನ್ನೂ ವಿತರಿಸಲಾಯಿತು. ವಿವಿಧ ವರ್ಗಗಳ ಶ್ರಮಿಕರಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಕನಿಷ್ಠ ವೇತನ ನಿಗದಿಪಡಿಸಲಾಗುತ್ತಿದೆ ಎಂದ ಅವರು, ರಾಜ್ಯ ಸರ್ಕಾರವು ಕಾರ್ಮಿಕ ಕಾಯ್ದೆಗಳಿಗೆ ಪ್ರತಿಯಾಗಿ 29 ಕಾನೂನುಗಳನ್ನು ಜಾರಿ ಮಾಡಿದ್ದು, ಇದಕ್ಕಾಗಿ ಕಾರ್ಮಿಕ ನ್ಯಾಯಾಲಯಗಳನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

2006ರಲ್ಲಿ ಕೇಂದ್ರ ಸರ್ಕಾರದ ನೀತಿಯಂತೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸೆಸ್ ಮೂಲಕ ಸಂಪನ್ಮೂಲ ಕ್ರೋಢೀಕರಣ ಮಾಡುತ್ತಿದ್ದು, ಕಾರ್ಮಿಕರಿಗೆ ಅಗತ್ಯ ತರಬೇತಿ ಜತೆಗೆ ಸಾಮಗ್ರಿಗಳ ಕಿಟ್‌ ವಿತರಣೆ ಮಾಡುತ್ತಿದೆ. ಕಾರ್ಮಿಕರು ಮಾತ್ರವಲ್ಲದೆ, ಶ್ರಮಿಕರ ಕುಟುಂಬ ವರ್ಗಕ್ಕೂ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಜಾರಿ ಮಾಡಲಾಗಿದೆ. ಆರೋಗ್ಯ ತಪಾಸಣಾ ಶಿಬಿರ, ಮೊಬೈಲ್ ಕ್ಲಿನಿಕ್, ಶ್ರಮಿಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ತರಬೇತಿ, ಶಿಷ್ಯ ವೇತನ ಜತೆಗೆ ಅಸಂಘಟಿತ ಕಾರ್ಮಿಕ ವಲಯಕ್ಕೂ ಆಶಾದೀಪದಂತಹ ಮತ್ತಿತರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ ಎಂದರು.

ಇಎಸ್‌ಐ ಆಸ್ಪತ್ರೆಗಳ ಉನ್ನತೀಕರಣದ ಜತೆಗೆ ಶ್ರಮಿಕ ವರ್ಗಕ್ಕೆ ಆರೋಗ್ಯ ಸೇವೆಗಳು ಸುಲಭದಲ್ಲಿ ದಕ್ಕುವಂತೆ ಮಾಡುವ ಸಲುವಾಗಿ ಖಾಸಗಿ ಆಸ್ಪತ್ರೆಗಳೊಂದಿಗೂ ಸಮನ್ವಯ ಸಾಧಿಸಲಾಗಿದೆ. ಕೋವಿಡ್ ಸಂದರ್ಭ ಕಾರ್ಮಿಕ ಇಲಾಖೆಗೆ ಸವಾಲಿನ ಸಂದರ್ಭವನ್ನು ಸೃಷ್ಟಿಸಿತ್ತಾದರೂ, ಆಹಾರ ವಿತರಣೆ, ಸಾರಿಗೆ ವ್ಯವಸ್ಥೆ, ಆಹಾರ ಸಾಮಗ್ರಿಗಳ ವಿತರಣೆ ಜತೆಗೆ ಸಹಾಯಧನ ವಿತರಿಸಿರುವ ಬಗ್ಗೆ ವಿವರಣೆ ನೀಡಿದ ಕಾರ್ಮಿಕ ಸಚಿವರು, ಕೋವಿಡ್ ಸಂದರ್ಭದಲ್ಲಿ ಶ್ರಮಿಕ ವರ್ಗಕ್ಕೆ ನಿಂತ ರಾಜ್ಯ ನಮ್ಮದು ಎಂದು ಹೆಮ್ಮೆಯಿಂದ ವಿವರಣೆ ನೀಡಿದರು.

ಸಭೆಯಲ್ಲಿ ಐರ್ಲೆಂಡ್‌ನ ಭಾರತೀಯ ರಾಯಭಾರಿ ಅಖಿಲೇಶ್ ಮಿಶ್ರ ಸೇರಿ ಹಲವು ಅನಿವಾಸಿ ಭಾರತೀಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ | Modi in Mangalore | ರಾಜ್ಯದಲ್ಲಿ ಮೋದಿ ನಂತರ ಜನಪ್ರಿಯ ವ್ಯಕ್ತಿ ಯಡಿಯೂರಪ್ಪ !

Exit mobile version