ಕಾರವಾರ: ಗಣೇಶ ಹಬ್ಬಕ್ಕೆ ಖರ್ಚು ಮಾಡಿದ ಹಣದ ಲೆಕ್ಕ ಕೊಡದ್ದಕ್ಕೆ ಸಹೋದರರ ನಡುವೆ ಗಲಾಟೆ ಆಗಿದ್ದು, ಕೊಲೆಯಲ್ಲಿ (Murder case)ಅಂತ್ಯವಾಗಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಘಟನೆ ನಡೆದಿದೆ. ನಗರದ ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ದುರ್ಘಟನೆ ನಡೆದಿದ್ದು, ಸಂದೇಶ ಪ್ರಭಾಕರ ಬೋರ್ಕರ್ ಕೊಲೆಯಾದ ದುರ್ದೈವಿ.
ಸಂದೇಶ್‌ನ ಚಿಕ್ಕಪ್ಪನ ಮಗ ಮನೀಶ್ ಬೋರ್ಕರ್ ಚಾಕು ಇರಿದವನು. ಪ್ರತಿವರ್ಷ ಬೋರ್ಕರ್ ಕುಟುಂಬಸ್ಥರು ಚತುರ್ಥಿಯಂದು ಮನೆಯಲ್ಲಿ ಗಣಪತಿ ಮೂರ್ತಿ ಸ್ಥಾಪಿಸಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು. ನಿನ್ನೆ ಶನಿವಾರ ಮಧ್ಯಾಹ್ನ ಗಣಪತಿ ಪೂಜೆ ನಂತರ ಪ್ರಭಾಕರ್ ಹಾಗೂ ಮನೋಹರ್ ಬೋರ್ಕರ್ ನಡುವೆ ಕಳೆದ ವರ್ಷ ಹಬ್ಬಕ್ಕೆ ಖರ್ಚು ಮಾಡಿದ ಹಣದ ಲೆಕ್ಕಾಚಾರದ ಕುರಿತು ಗಲಾಟೆ ನಡೆದಿದೆ.
ಈ ವಿಚಾರವಾಗಿ ಎರಡೂ ಕುಟುಂಬಸ್ಥರ ಮಕ್ಕಳು ಕೈ ಕೈ ಮಿಲಾಯಿಸಿಕೊಂಡಿದ್ದು ಗಲಾಟೆ ತಾರಕ್ಕೇರಿದಾಗ ಪ್ರಭಾಕರ್ ಹಿರಿಯ ಮಗ ಸಂದೇಶ್‌ಗೆ ಮನೋಹರ್ ಅವರ ಕಿರಿಯ ಪುತ್ರ ಚಾಕು ಇರಿದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಚಾಕು ಇರಿದ ಮನೀಶ್ ಹಾಗೂ ಆತನಿಗೆ ಸಹಕಾರ ನೀಡಿದವರನ್ನು ಕಾರವಾರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಣೇಶೋತ್ಸವದಲ್ಲಿ ಗುಂಪುಗಳ ಮಾರಾಮಾರಿ
ಗಣೇಶೋತ್ಸವ ಹಿನ್ನೆಲೆಯಲ್ಲಿ ಪಟಾಕಿ ಹಚ್ಚುವ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾ ಮಾರಿ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಬಸ್ ನಿಲ್ದಾಣದ ಸಮೀಪ ಘಟನೆ ನಡೆದಿದೆ. ಯುವಕರ ಹೊಡೆದಾಟದ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಯುವಕರ ಗಲಾಟೆಯಿಂದಾಗಿ ಗ್ರಾಮದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಅರಬಿಳಚಿ ಕ್ಯಾಂಪ್‌ನಲ್ಲೂ ಗಲಾಟೆ
ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಅರಬಿಳಚಿ ಕ್ಯಾಂಪ್‌ನಲ್ಲಿ ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಗಣೇಶ ಮೂರ್ತಿ ತರುವಾಗ ಡೊಳ್ಳು ಬಾರಿಸುವವರ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯ ಘರ್ಷಣೆಯಾಗಿದೆ.
ಮಾಜಿ ತಾಲೂಕು ಪಂಚಾಯತ್ ಸದಸ್ಯ ದಿ.ಅಣ್ಣಾಮಲೈ ಮಗ ಅರ್ಜುನ್ ಎಂಬಾತ ಮೇಲೆ ಹಲ್ಲೆ ನಡೆದಿದೆ. ಇತ್ತ ಗಲಾಟೆ ಬಿಡಿಸಲು ಹೋದ ಪೊಲೀಸ್ ಪೇದೆಗಳಾದ ನಾಗರಾಜ್ ಮತ್ತು ವಿಶ್ವ ಎಂಬುವರ ಮೇಲೆ ಕಲ್ಲು ಬಿದ್ದಿದೆ. ಸ್ಥಳಕ್ಕೆ ಎಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಮಾರು 15 ರಿಂದ 20 ಜನರನ್ನು ವಶಕ್ಕೆ ಪಡೆದಿದ್ದಾರೆ. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಪೊಲೀಸರ ಸಮ್ಮುಖದಲ್ಲೇ ಊರಿನ ಎಲ್ಲಾ ಗಣಪತಿ ವಿಸರ್ಜನೆ ಮಾಡಲಾಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ