ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣದಲ್ಲಿ ಪುಣೆಯ ಉದ್ಯಮಿ ಓರ್ವನ ಭೀಕರ ಹತ್ಯೆ (Murder case) ನಡೆದಿದೆ. ವಿನಾಯಕ್ ಮೃತ ದುರ್ದೈವಿ. ಭಾನುವಾರ ಬೆಳಗ್ಗೆ 5.30ರ ವೇಳೆ ಐವರು ಅಪರಿಚಿತರು ಏಕಾಏಕಿ ವಿನಾಯಕ ಮೇಲೆ ಚಾಕು, ತಲ್ವಾರ್‌ನಿಂದ ಹಲ್ಲೆ ಮಾಡಿ ಹತ್ಯೆ ನಡೆಸಿದ್ದಾರೆ. ಜತೆಗೆ ಇದ್ದ ವಿನಾಯಕ ಪತ್ನಿ ಮೇಲೂ ಸಹ ಹಲ್ಲೆ ನಡೆದಿದೆ. ಜಾತ್ರೆ ಇದ್ದ ಹಿನ್ನೆಲೆಯಲ್ಲಿ ಕುಟುಂಬ ಸಮೇತವಿನಾಯಕ ಊರಿಗೆ ಆಗಮಿಸಿದ್ದಾಗ ಘಟನೆ ನಡೆದಿದೆ. ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಹಣಕೋಣ ಗ್ರಾಮದಲ್ಲಿ ಉದ್ಯಮಿ ವಿನಾಯಕ ಮನೆಗೆ ನುಗ್ಗಿ ಹತ್ಯೆ ಮಾಡಲಾಗಿದೆ. ಸಾತೇರಿ ಜಾತ್ರೆಗೆ ಬಂದ ಇವರು ಭಾನುವಾರ ಬೆಳಗ್ಗೆ ಮರಳಿ ಹೊರಡಲು ಸಿದ್ದರಾಗಿದ್ದರು. ಈ ವೇಳೆ ಬೆಳಗಿನಜಾವ 5.30ರ ಸುಮಾರಿಗೆ ಐದು ಜನ ಅಪರಿಚಿತರು ಮನಗೆ ನುಗ್ಗಿ ಅಡುಗೆ ಮನೆಯಲ್ಲಿದ್ದ ವಿನಾಯಕನನ್ನು ಮನ ಬಂದಂತೆ ಚಾಕು ಹಾಗೂ ತಲ್ವಾರ್‌ನಿಂದ ಕಡಿದು ಹತ್ಯೆ ಮಾಡಲಾಗಿದೆ.
ಮನೆಯಲ್ಲಿ ಆತನ ಪತ್ನಿ ಕೂಡ ಇದ್ದು ಅವರಿಗೂ ತಲೆಗೆ ಹೊಡೆಯಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮನೆಯಂಗಳದಲ್ಲಿ ಚಾಕು ಹಾಗೂ ರಾಡ್ ಬಿದ್ದಿದ್ದು, ತನಿಖೆಯ ಬಳಿಕವೇ ನಿಜಾಂಶ ಹೊರಬರಬೇಕಿದೆ. ಸದ್ಯ ವಿನಾಯಕ ಅವರ ಪತ್ನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ 10 ದಿನಗಳಿಂದ ಹಣಕೋಣ ಗ್ರಾಮದಲ್ಲಿ ಉದ್ಯಮಿ ಕುಟುಂಬ ಉಳಿದುಕೊಂಡಿತ್ತು. ಗ್ರಾಮದ ಸಾತೇರಿದೇವಿ ಜಾತ್ರೆಗೆಂದು ಪತ್ನಿಯೊಂದಿಗೆ ಉದ್ಯಮಿ ವಿನಾಯಕ ಊರಿಗೆ ಬಂದಿದ್ದರು. ಜಾತ್ರೆ ಮುಗಿಸಿ ಭಾನುವಾರ ಬೆಳಗ್ಗೆ ಪುಣೆಗೆ ವಾಪಸ್ಸಾಗಲು ಸಿದ್ಧವಾಗಿದ್ದರು. ಉದ್ಯಮಿ ವಿನಾಯಕ ನಾಯ್ಕ ಕಾರಿನಲ್ಲಿ ಬ್ಯಾಗ್ ಇರಿಸಲು ಬಾಗಿಲು ತೆರೆದಿದ್ದರು. ಈ ವೇಳೆ ಏಕಾಏಕಿ ರಾಡ್‌ನಿಂದ ಹಲ್ಲೆ ನಡೆಸಿ ಐವರು ಆಗಂತುಕರು ಒಳನುಗ್ಗಿದ್ದರು.
ರಾಡ್ ಸೇರಿ ಮಾರಕಾಸ್ತ್ರಗಳಿಂದ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಉದ್ಯಮಿ ವಿನಾಯಕ ಭುಜಕ್ಕೆ ತೀವ್ರ ಹಲ್ಲೆ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ತಪ್ಪಿಸಲು ಅಡ್ಡಬಂದ ಪತ್ನಿ ವೃಷಾಲಿ ಮೇಲೂ ಹಲ್ಲೆ ಮಾಡಿದ್ದಾರೆ. ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಿನ ಜಾವ 5:30 ರಿಂದ 6 ಗಂಟೆ ವೇಳೆಗೆ ಘಟನೆ ನಡೆದಿದೆ. ಪೂಣಾದಲ್ಲಿ ಆಮದು ರಫ್ತು ಉದ್ಯಮ ನಡೆಸುತ್ತಿದ್ದರು. ತನಿಖೆ ಬಳಿಕ ಹಲ್ಲೆಗೆ ನಿಖರ ಕಾರಣ ತಿಳಿದುಬರಬೇಕಿದೆ. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಹತ್ಯೆ, ಹತ್ಯೆ ಯತ್ನ ಪ್ರಕರಣ ದಾಖಲಾಗಿದೆ ಎಂದು ಉತ್ತರಕನ್ನಡ ಎಸ್ಪಿ ಎಂ.ನಾರಾಯಣ ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ