ಶಿರಸಿ: ಸಹಕಾರಿ ಧುರೀಣ, ಸಹಕಾರಿ ರತ್ನ ಎಂದೇ ಖ್ಯಾತರಾಗಿದ್ದ ಟಿಎಸ್‌ಎಸ್ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೆಹಳ್ಳಿ (Shantaram Hegde Sheegehalli) (79) ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ. ಸರಳ ಹಾಗೂ ಸಜ್ಜನ ವ್ಯಕ್ತಿಯಾಗಿದ್ದ ಇವರು ಶಾಂತಣ್ಣ ಎಂದೇ ಚಿರಪರಿಚಿತರಾಗಿದ್ದರು.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಪ್ರಮುಖ ರಾಜಕಾರಣಿಯಾಗಿದ್ದ ಶಾಂತಾರಾಮ ಹೆಗಡೆ ಅವರು, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದರು. ಅಲ್ಲದೆ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ ಶಾಂತಾರಾಮ ಹೆಗಡೆ ಅವರು ಸುದೀರ್ಘವಾಗಿ ಕಾರ್ಯ ನಿರ್ವಹಿಸಿದ್ದರು.
ಇದನ್ನೂ ಓದಿ: Hanuman Flag: ಕೆರಗೋಡು ಹನುಮ ಧ್ವಜ ಕಿಚ್ಚು ಫೆ.7ಕ್ಕೆ ಮಂಡ್ಯ ನಗರ ಬಂದ್!
ಸುದೀರ್ಘ ಅವಧಿಗೆ ಶಿರಸಿ ಟಿಎಸ್‌ಎಸ್ ಅಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆ ಅವರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ಅಲ್ಲದೆ, ಇಂದು ಟಿಎಸ್‌ಎಸ್ ಹೆಸರುವಾಸಿಯಾಗಲು ಸಾಕಷ್ಟು ಶ್ರಮ ವಹಿಸಿದ್ದರು. ರೈತರಿಗೆ ಅಗತ್ಯ ವಸ್ತುಗಳು ಸಿಗುವ ಸೂಪರ್ ಮಾರ್ಕೆಟ್ ಅನ್ನು ಸಹ ತೆರೆದಿದ್ದ ಇವರು, ಸಂಸ್ಥೆ ಮತ್ತು ರೈತರ ಏಳ್ಗೆಗೆ ಶ್ರಮ ವಹಿಸಿದ್ದರು.
ಕಾಗೇರಿ ವಿರುದ್ಧ ಸ್ಪರ್ಧೆ ಮಾಡಿದ್ದ ಶಾಂತಾರಾಮ ಹೆಗಡೆ
ಶಿರಸಿ – ಅಂಕೋಲಾ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸ್ಪರ್ಧಿಸಿದ್ದ ಶಾಂತಾರಾಮ ಹೆಗಡೆ ಅವರು ಸೋಲು ಕಂಡಿದ್ದರು.
ಇದನ್ನೂ ಓದಿ: Forced Conversion : ಶಿರಸಿಯಲ್ಲಿ ಮತಾಂತರಕ್ಕೆ ಪ್ರಚೋದನೆ; ಮಹಿಳೆಯರು ಸೇರಿ ಆರು ಮಂದಿ ಬಂಧನ
ಶಾಂತಾರಾಮ ಹೆಗಡೆ ಅವರು ಬಹುದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು ಎಂದು ತಿಳಿದುಬಂದಿದೆ. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.