Site icon Vistara News

Super Speciality Hospital | ಸದನದಲ್ಲಿ ಪಕ್ಷಾತೀತವಾಗಿ ಆಗ್ರಹ; ದೇಶಪಾಂಡೆ-ಹೆಬ್ಬಾರ್‌ ನಡುವೆ ಚಕಮಕಿ

Shivaram hebbar

ವಿಧಾನಸಭೆ: ಉತ್ತರ ಕನ್ನಡದ ಜನರ ಆರೋಗ್ಯಕ್ಕಾಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು (Super Speciality Hospital) ಸ್ಥಾಪಿಸಬೇಕು ಎಂಬ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದು ಪಕ್ಷಾತೀತವಾಗಿ ಎಲ್ಲರೂ ಆಗ್ರಹಿಸಿದರು. ಈ ಸಮಯದಲ್ಲಿ ಕಾಂಗ್ರೆಸ್‌ನ ಆರ್‌. ವಿ. ದೇಶಪಾಂಡೆ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ವಿಷಯ ಪ್ರಸ್ತಾಪಿಸಿದರು. ಅನಾರೋಗ್ಯಪೀಡಿತರನ್ನು ದೂರದ ಆಸ್ಪತ್ರೆಗೆ ಸಾಗಿಸುವಾಗ ಅನೇಕರು ಮೃತಪಟ್ಟಿದ್ದಾರೆ. ಈಗಾಗಲೆ ಸರ್ಕಾರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಿ ಒಪ್ಪಿಗೆ ನೀಡಿದೆ. ಉತ್ತರ ಕನ್ನಡದಲ್ಲಿ ಎಲ್ಲಿ ಸೂಕ್ತವೋ ಅಲ್ಲಿ ಆಸ್ಪತ್ರೆ ಸ್ಥಾಪಿಸಬಹುದು. ಆದರೆ ಕಾರವಾರದಲ್ಲಿರುವ 460 ಹಾಸಿಗೆಯ ವೈದ್ಯಕೀಯ ಕಾಲೇಜಿಗೆ ಸರ್ಕಾರ ಏಳು ಸೂಪರ್‌ ಸ್ಪೆಷಾಲಿಟಿ ವಿಭಾಗಗಳನ್ನು ಮಂಜೂರು ಮಾಡಿದ್ದರೂ ಒಬ್ಬರು ಮಾತ್ರ ನೇಮಕವಾಗಿದ್ದಾರೆ. ಎಂಆರ್‌ಐ ಯಂತ್ರ ಖರೀದಿ ಸೇರಿ ಈ ಸಂಸ್ಥೆಗೆ ಸುಮಾರು ಮೂವತ್ತು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌, ಈಗಾಗಲೆ ಸಭೆಯನ್ನು ನಡೆಸಲಾಗಿದ್ದು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಎಲ್ಲಿ ನಿರ್ಮಾಣ ಮಾಡಬೇಕು ಎಂಬುದರ ಕುರಿತು ತೀರ್ಮಾನ ಮಾಡಲಾಗುತ್ತದೆ. ಕಾರವಾರ ಮೆಡಿಕಲ್‌ ಕಾಲೇಜಿನ ಏಳು ವಿಭಾಗಗಳಿಗೆ ತಜ್ಞ ವೈದ್ಯರಿಗಾಗಿ ಆಹ್ವಾನ ನೀಡಲಾಗಿತ್ತಾದರೂ ನೆಫ್ರಾಲಜಿ ಹೊರತುಪಡಿಸಿ ಉಳಿದ ವಿಭಾಗಗಳಿಗೆ ಯಾರೂ ಆಗಮಿಸಿಲ್ಲ. ಬೇರೆ ಕಡೆಯಿಂದ ಕಾರವಾರಕ್ಕೆ ವೈದ್ಯರನ್ನು ಮಂಜೂರು ಮಾಡಲಾಗುತ್ತದೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಉತ್ತರ ಕನ್ನಡದ ಜನರು ಕೈಗಾ ಸ್ಥಾವರ, ಸೀಬರ್ಡ್‌ ನೌಕಾನೆಲೆ ಸೇರಿ ಅನೇಕ ಯೋಜನೆಗಳಿಗಾಗಿ ತ್ಯಾಗ ಮಾಡಿದ್ದೇವೆ. ಜಿಲ್ಲೆಯ ಅರಣ್ಯ ಸಂಪತ್ತಿನಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯವಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಿಲ್ಲ ಎಂದು ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈಗಲೂ ಮಂಜೂರು ಮಾಡಲಿಲ್ಲ ಎಂದರೆ ಜನರ ಆಕ್ರೋಶ ಹೆಚ್ಚಾಗುತ್ತದೆ ಎಂದರು.

ಭಟ್ಕಳ ಶಾಸಕ ಸುನೀಲ್‌ ನಾಯ್ಕ ಮಾತನಾಡಿ, ಕರಾವಳಿ ಎಂದ ಕೂಡಲೆ ನಮ್ಮನ್ನು ಮರೆಯಲಾಗುತ್ತಿದೆ. ನಾವೂ ಕರಾವಳಿಗೆ ಸೇರುತ್ತೇವೆ, ಸೀಬರ್ಡ್‌ ನೌಕಾನೆಲೆಗೆ ಜಾಗ ಒದಗಿಸಿದ್ದೇವೆ. ಉತ್ತರ ಕನ್ನಡದ ಮೇಲೆ ನಿಷ್ಕಾಳಜಿ ತೋರಿಸುತ್ತಿರುವುದು ಸರಿಯಲ್ಲ. ಬೆಂಗಳೂರಿನ ಶಾಸಕರಿಗೆ ಸಾವಿರಾರು ಕೋಟಿ ರೂ. ನೀಡುತ್ತೀರ, ನಮಗೆ 300-400 ಕೋಟಿ ರೂ. ನೀಡಲು ಆಗುವುದಿಲ್ಲವೇ? ಎಂದರು.

ಇದನ್ನೂ ಓದಿ | Super Speciality Hospital | ಕೊನೆಗೂ ಉತ್ತರ ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ಸಿಎಂ, ಆರೋಗ್ಯ ಸಚಿವರ ಭೇಟಿ ಶೀಘ್ರ

ಮಾಜಿ ಸಚಿವ ಆರ್‌. ವಿ. ದೇಶಪಾಂಡೆ ಮಾತನಾಡಿ, ಉತ್ತರ ಕನ್ನಡದ ಮೇಲೆ ಸರ್ಕಾರದ ನಿಷ್ಕಾಳಜಿ ಎನ್ನುವುದನ್ನು ಒಪ್ಪುವುದಿಲ್ಲ. ಸಾಕಷ್ಟು ಕೆಲಸಗಳು ಆಗಿವೆ. ಆದರೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಆರೋಗ್ಯ ಸಚಿವರೂ ಭರವಸೆ ನೀಡಿದ್ದಾರೆ ಎಂದರು.

ಕಾರ್ಮಿಕ ಸಚಿವ ಶಿರಾಮ ಹೆಬ್ಬಾರ್‌ ಮಾತನಾಡಿ, ಈ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆ ಆಗಿದೆ. ಸರ್ಕಾರದಿಂದಲೇ ಆಸ್ಪತ್ರೆ ನಿರ್ಮಾಣ ಮಾಡಬೇಕೆ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಬೇಕೆ ಎಂಬ ಚರ್ಚೆ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮತ್ತೆ ಮಾತನಾಡಿದ ಆರ್‌. ವಿ. ದೇಶಪಾಂಡೆ, ಆರೋಗ್ಯ ಸಚಿವರು ಹಾಗೂ ಸಿಎಂ ಭರವಸೆ ನೀಡಿರುವುದು ಸರಿ. ಆದರೆ ಮಲ್ಲಿಕಾರ್ಜುನ ಖರ್ಗೆಯವರು ಕಾರ್ಮಿಕ ಸಚಿವರಾಗಿದ್ದಾಗ ಕಲಬುರ್ಗಿಯಲ್ಲಿ ಒಂದು ದೊಡ್ಡ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಅದೇ ರೀತಿ ಉತ್ತರ ಕನ್ನಡದವರೇ ಆದ ಶಾಸಕರು ಕಾರ್ಮಿಕ ಸಚಿವರಾಗಿದ್ದಾರೆ. ಅವರು ಏಕೆ ಈ ಆಸ್ಪತ್ರೆಗೆ ತಮ್ಮ ನಿಧಿಯನ್ನು ನೀಡಿ ಸಹಾಯ ಮಾಡಬಾರದು? ಎಂದು ಪ್ರಶ್ನಿಸಿದರು.

ಈ ಸಮಯದಲ್ಲಿ ತುಸು ಸಿಟ್ಟಾದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌, ಖರ್ಗೆ ಅವರು ಕೇಂದ್ರ ಕಾರ್ಮಿಕ ಸಚಿವರಾಗಿದ್ದರು. 50 ಸಾವಿರಕ್ಕಿಂತ ಹೆಚ್ಚು ವಿಮಾದಾರರಿದ್ದರೆ ಮಾತ್ರವೇ ಇಎಸ್‌ಐ ಆಸ್ಪತ್ರೆ ನಿರ್ಮಾಣ ಸಾಧ್ಯ. ಆದರೆ ಉತ್ತರ ಕನ್ನಡದಲ್ಲಿ ಕೇವಲ 31 ಸಾವಿರ ವಿಮಾದಾರರಿದ್ದಾರೆ ಎಂದರು. ಅನೇಕ ವರ್ಷ ಅಧಿಕಾರದಲ್ಲಿದ್ದ ದೇಶಪಾಂಡೆ ಅವರೇ ಇದನ್ನೆ ಮಾಡಬಹುದಾಗಿತ್ತು. ಏಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

ಈ ರೀತಿ ಸಂದರ್ಭಗಳಲ್ಲಿ ಕ್ಯಾಬಿನೆಟ್‌ ನಿರ್ಧಾರ ಮಾಡಿ ಅನೇಕ ಯೋಜನೆ ಕೈಗೊಂಡಿದ್ದೇವೆ, ಅದೇ ರೀತಿ ಇದನ್ನೂ ಮಾಡಿ ಎಂದು ದೇಶಪಾಂಡೆ ಆಗ್ರಹಿಸಿದರು. ಈ ಸಮಯದಲ್ಲಿ ಹೆಬ್ಬಾರ್‌ ಬೆಂಬಲಕ್ಕೆ ಬಂದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, 30-40 ವರ್ಷ ಅಧಿಕಾರ ನಡೆಸಿದ ದೇಶಪಾಂಡೆ ಅವರಿಗೆ ಈ ಸ್ಥಿತಿ ಬರಬಾರದಿತ್ತು ಎಂದರು.

ಕಾಗೇರಿ ಧರ್ಮಸಂಕಟ !

ಈ ವಿಚಾರ ಅನೇಕ ಹೊತ್ತು ಚರ್ಚೆ ಆಗುತ್ತಿರುವುದನ್ನು ಗಮನಿಸಿದ ಇತರೆ ಜಿಲ್ಲೆಗಳ ಶಾಸಕರು ಇದೇ ರೀತಿ ಎಷ್ಟು ಹೊತ್ತು ಚರ್ಚೆ ನಡೆಯಬೇಕು ಎಂದು ಗೊಣಗಲು ಆರಂಭಿಸಿದರು. ಇದನ್ನು ಕೇಳಿಸಿಕೊಂಡ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ನಾನು ಇಲ್ಲಿ ಚರ್ಚೆಗೆ ಅವಕಾಶ ನೀಡದೇ ಇದ್ದರೆ, ಇದನ್ನೇ ದೊಡ್ಡ ವಿಚಾರ ಮಾಡುವ ʼಸ್ನೇಹಿತರುʼ ಅನೇಕರು ಕಾಯ್ದು ಕುಳಿತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಕಾಗೇರಿ ಅವಕಾಶ ನೀಡಲಿಲ್ಲ ಎಂದೇ ಹೇಳಿಬಿಡುತ್ತಾರೆ. ಇನ್ನೂ ಯಾರಾದರೂ ಇದ್ದರೆ ಮಾತಾಡಿ ಎಂದರು.

ಮತ್ತೆ ಮಾತನಾಡಿದ ರೂಪಾಲಿ ನಾಯ್ಕ, ಕಾರವಾರ ಮೆಡಿಕಲ್‌ ಕಾಲೇಜಿಗೆ ಮೂವತ್ತು ಕೋಟಿ ರೂ. ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಚರ್ಚೆಗೆ ತೆರೆ ಎಳೆಯಲಾಯಿತು.

ಇದನ್ನೂ ಓದಿ | Super Speciality Hospital | ಕುಮಟಾ ಅಕ್ಕಪಕ್ಕದಲ್ಲೇ ಉತ್ತರ ಕನ್ನಡದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

Exit mobile version