ಮೈಸೂರು: ಈ ಬಾರಿಯ ವಿಧಾನಸಭಾ ಚುನಾವಣೆ (Karnataka Election 2023) ಹಲವು ಕಾರಣಗಳಿಂದ ವಿಶೇಷತೆಯನ್ನು ಪಡೆದುಕೊಳ್ಳುತ್ತಿದೆ. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಎದುರು ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಂದಾಗಿರುವ ಬಿಜೆಪಿಯ ವಿ. ಸೋಮಣ್ಣ (V Somanna) ಪ್ರಬಲ ಪೈಪೋಟಿಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಆಪ್ತ ಕಾ.ಪು. ಸಿದ್ದಲಿಂಗಸ್ವಾಮಿ ಅವರನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ. ನಿನ್ನನ್ನೇ ನಂಬಿದ್ದೇನೆ, ದಯಮಾಡಿ ಕೈಬಿಡಬೇಡ ಎಂದು ಮನವಿ ಮಾಡಿದ್ದಾರೆ.
ಕಾ.ಪು. ಸಿದ್ದಲಿಂಗಸ್ವಾಮಿ ಅವರ ಮೈಸೂರಿನ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಸೋಮಣ್ಣ, ವರುಣದಲ್ಲಿ ಅವರ ಬೆಂಬಲ ಕೋರಿದ್ದಾರೆ. ಈ ಹಿಂದೆ ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ವಿರುದ್ಧ ಕಾಪುಸಿ ಸ್ಪರ್ಧೆ ಮಾಡಿದ್ದರು. ಈ ಬಾರಿ ತಾವು ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತಮಗೆ ಬೆಂಬಲ ನೀಡುವುದರ ಜತೆಗೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತು ಪ್ರಚಾರದ ಉಸ್ತುವಾರಿ ನೋಡಿಕೊಳ್ಳುವಂತೆ ಸೋಮಣ್ಣ ಮನವಿ ಮಾಡಿದರು.
ಇದನ್ನೂ ಓದಿ: WhatsApp New Feature: ನಿಮ್ಮ ಖಾತೆ ಸುರಕ್ಷತೆಯನ್ನು ಖಾತ್ರಿಪಡಿಸುವ ಮೂರು ಫೀಚರ್ ಲಾಂಚ್ ಮಾಡಿದ ವಾಟ್ಸಾಪ್
ನಿನ್ನ ಬಗ್ಗೆ ನಾನು ಏನೂ ಅಂದುಕೊಂಡಿಲ್ಲ. ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸು. ನೀನೇ ನನ್ನ ಸೈನ್ಯದ ಕಮಾಂಡರ್ ಆಗಿ ಕೆಲಸ ಮಾಡು. ನಿನ್ನನ್ನೇ ನಂಬಿದ್ದೇನೆ, ದಯಮಾಡಿ ಕೈಬಿಡಬೇಡ ಎಂದು ಕಾಪು ಸಿದ್ದಲಿಂಗಸ್ವಾಮಿಗೆ ಸೋಮಣ್ಣ ಅವರು ಕೈ ಮುಗಿದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕಾ.ಪು. ಸಿದ್ದಲಿಂಗಸ್ವಾಮಿ, ನಮ್ಮ ಮನೆಯಿಂದಲೇ ಪ್ರಚಾರ ಕಾರ್ಯ ಪ್ರಾರಂಭಿಸಬೇಕು ಎಂದು ಪೂಜೆ ಇಟ್ಟುಕೊಂಡಿದ್ದೇನೆ. ಬೆಳಗ್ಗೆಯೇ ನಿಮ್ಮ ಹೆಸರಲ್ಲಿ ಪೂಜೆ ನಡೆದಿದೆ. ನಿಮ್ಮ ನಕ್ಷತ್ರಕ್ಕೆ ಪೂಜೆ ಮಾಡಿಸಿದ್ದೇವೆ. ಈ ಬಾರಿ ನೀವು ಗೆಲ್ಲುತ್ತೀರಿ ಎಂದು ಹೇಳಿದರು. ಬಳಿಕ ಕಾಪುಸಿ ಮನೆಯಲ್ಲಿ ವಿ. ಸೋಮಣ್ಣ ಉಪಾಹಾರ ಸೇವಿಸಿದರು.
ಕಾಪುಸಿ ಸಹೋದರ ಇದ್ದಂತೆ- ಸೋಮಣ್ಣ
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ, ಕಾ.ಪು.ಸಿದ್ದಲಿಂಗಸ್ವಾಮಿ ನನ್ನ ಸಹೋದರ ಇದ್ದ ಹಾಗೆ. ಯಾವುದೋ ಜನ್ಮದಲ್ಲಿ ಅಣ್ಣನಾಗಿಯೋ, ತಮ್ಮನಾಗಿಯೋ ಹುಟ್ಟಿದ್ದೆವು ಎಂದನ್ನಿಸುತ್ತದೆ. ಸಿದ್ದಲಿಂಗಸ್ವಾಮಿಗೆ ಕೆಲವು ಜವಾಬ್ದಾರಿ ನೀಡಿದ್ದೇನೆ. ಇಂದು ಅವರ ಮನೆಯಲ್ಲಿ ವರುಣ ಕ್ಷೇತ್ರದ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಛಲವಾದಿ ನಾರಾಯಣಸ್ವಾಮಿ ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಕಾ.ಪು. ಸಿದ್ದಲಿಂಗಸ್ವಾಮಿಗೆ ನೀಡಲಾಗಿದೆ ಎಂದು ಹೇಳಿದರು.
ಆ ಎಲ್ಲ ಜವಾಬ್ದಾರಿ ಸಿದ್ದಲಿಂಗಸ್ವಾಮಿಗೆ ನೀಡಿದ್ದೇನೆ. ಇಂದಿನಿಂದ ವರುಣದಲ್ಲಿ ಪ್ರಚಾರವನ್ನು ಆರಂಭಿಸಿದ್ದೇವೆ. ಒಂದು ವಾರದ ಬಳಿಕ ಕ್ಷೇತ್ರದ ವಾತಾವರಣ ತಿಳಿಯುತ್ತದೆ. ವರುಣವನ್ನು ಮತ್ತೊಂದು ಗೋವಿಂದರಾಜ ನಗರ ಮಾಡುವ ಗುರಿ ಹೊಂದಿದ್ದೇನೆ ಎಂದು ಸೋಮಣ್ಣ ತಿಳಿಸಿದರು.