ಮೈಸೂರು: ಹಿರಿಯ ರಾಜಕಾರಣಿ, ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದ ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಇಲ್ಲಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ನಿವೃತ್ತಿ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ʻʻನನ್ನ ರಾಜಕೀಯ ಜೀವನಕ್ಕೆ 50 ವರ್ಷ ತುಂಬುತ್ತಿದೆ. ಇನ್ನು ಒಂದೂವರೆ ವರ್ಷಕ್ಕೆ ಸಂಸದನ ಅವಧಿ ಮುಕ್ತಾಯವಾಗುತ್ತದೆ. ಅಲ್ಲಿಗೆ ನಾನು ನಿವೃತ್ತಿ ಆಗುತ್ತೇನೆʼʼ ಎಂದು ೭೫ ವರ್ಷದ ಶ್ರೀನಿವಾಸ ಪ್ರಸಾದ್ ಹೇಳಿದರು.
ʻʻ1977ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದೆ. ಇದುವರೆಗೆ 14 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 11 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ. ನನಗೆ ರಾಷ್ಟ್ರ ಮಟ್ಟದಲ್ಲೂ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಸಂಸತ್ತು ಜಗತ್ತಿನ ಪ್ರಜಾಪ್ರಭುತ್ವದ ಬಹುದೊಡ್ಡ ಶಕ್ತಿ ಕೇಂದ್ರ. ಸ್ಥಾಯಿ ಸಮಿತಿಗಳ ಮೂಲಕ ದೇಶದ ಪ್ರವಾಸ ಮಾಡಿದ್ದೇನೆʼʼ ಎಂದು ಹೇಳಿದರು.
ʻʻನಾನು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನವರಿಕೆ ಮಾಡಿಕೊಂಡಿದ್ದೇನೆ. ಜಾತೀಯತೆ, ಅಸ್ಪೃಶ್ಯತೆ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಸ್ಪೃಶ್ಯತೆಯ ಹಿಂಸೆ ಕೇಳಿದರೆ ಬೇರೆಯವರಿಗೆ ರಕ್ತ ಕುದಿಯುತ್ತದೆ. ಇನ್ನು ಅನುಭವಿಸುವವರ ಕತೆ ಏನಾಗಬೇಡʼʼ ಎಂದು ಪ್ರಶ್ನಿಸಿದರು ಪ್ರಸಾದ್.
ʻʻಜಗತ್ತು ಒಂದು ಹುಚ್ಚರ ಸಂತೆಯಾಗಿದೆ. ನಾವು ಹೇಗೋ ಬದುಕುತ್ತಿದ್ದೇವೆ. ಅಸ್ಪೃಶ್ಯತೆ ಮಾನಸಿಕ ರೋಗʼʼ ಎಂದು ಪ್ರಸಾದ್ ಹೇಳಿದರು. ʻʻಹಿಂದೂ ಧರ್ಮದ ಅಸಮಾನತೆ ವಿರುದ್ಧ ಹೋರಾಡಲು ಸಾಧ್ಯವಾಗದೆ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಿದರು. ನಮಗೆ ಧಾರ್ಮಿಕ ವಿಮೋಚನೆ ನೀಡಿದರುʼʼ ಎಂದು ಶ್ರೀನಿವಾಸ ಪ್ರಸಾದ್ ನೆನಪು ಮಾಡಿಕೊಂಡರು.
ಒಳಮೀಸಲಾತಿ ಒಡೆದು ಆಳುವ ನೀತಿ
ಜಾತಿಗಳ ಒಳಗೇ ಮೀಸಲಾತಿ ಹಂಚುವ ಒಳಮೀಸಲಾತಿ ಹೋರಾಟದ ಬಗ್ಗೆ ಮಾಡನಾಡಿದ ಅವರು, ʻʻಇದೆಲ್ಲ ಒಡೆದು ಆಳುವ ನೀತಿʼʼ ಎಂದು ಎಚ್ಚರಿಸಿದರು.
ʻʻಬ್ರಿಟಿಷರು ಒಡೆದು ಆಳುವ ನೀತಿ ಮಾಡಿದ್ದರು. ಈಗ ವೋಟಿಗಾಗಿ ಒಡೆದು ಆಳುವ ಕೆಲಸ ಮಾಡಲಾಗುತ್ತಿದೆ. ಮೀಸಲಾತಿ, ಒಳ ಮೀಸಲಾತಿ ಅಂತ ಮಾಡಿದ್ದಾರೆ. ನಮ್ಮಲ್ಲಿ ಎಡಗೈ, ಬಲಗೈ ಅಂತೆಲ್ಲ ಇದೆ. ನಾನು ಎಲ್ಲವನ್ನೂ ಹತ್ತಿರದಿಂದ ನೋಡಿದ್ದೇನೆ. ಅಂತಹ ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡಿದ್ದೇನೆ. ನಾವು ಅದೆಲ್ಲವನ್ನೂ ದೂರ ಇಟ್ಟು ಒಟ್ಟಿಗೆ ಇರಬೇಕು. ದಲಿತರಲ್ಲಿ ಇರುವ ಆಂತರಿಕ ಶತ್ರುಗಳನ್ನೂ ದೂರ ಮಾಡಬೇಕುʼʼ ಎಂದು ದಲಿತರಿಗೆ ಸಲಹೆ ನೀಡಿದರು.
ʻʻದಲಿತರು ಕುಡಿತದಿಂದ ದೂರವಿರಬೇಕು. ದುಡಿಯುವ ಜನರು ದುಡ್ಡು ಉಳಿಸಿಕೊಳ್ಳಬೇಕು. ಉಚಿತವಾಗಿ ಶಿಕ್ಷಣ ಕೊಡುತ್ತಿದ್ದಾರೆ. ಹಾಗಾಗಿ ಎಲ್ಲರೂ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಯಾರೂ ಕೂಡಾ ಐದಾರು ಮಕ್ಕಳನ್ನು ಮಾಡಿಕೊಳ್ಳಬೇಡಿ. ದಯವಿಟ್ಟು ಕುಟುಂಬ ಯೋಜನೆ ಅಳವಡಿಸಿಕೊಳ್ಳಿʼʼ ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು.
ಶ್ರೀನಿವಾಸ ಪ್ರಸಾದ್ ರಾಜಕೀಯ ಬದುಕು
೧೯೪೭ರ ಆಗಸ್ಟ್ ೬ರಂದು ಹುಟ್ಟಿದ ಶ್ರೀನಿವಾಸ ಪ್ರಸಾದ್ ಅವರು ಮೂಲತಃ ಜನತಾ ಪಾರ್ಟಿಯಿಂದ ಬಂದವರು. ೧೯೭೭ರಿಂದ ೭೯ರವರೆಗೆ ಜನತಾ ಪಾರ್ಟಿಯಲ್ಲಿ, ೧೯೭೯ರಿಂದ ೯೬ರವರೆಗೆ ಕಾಂಗ್ರೆಸ್ ನಾಯಕರಾಗಿ, ೧೯೯೬ರಿಂದ ೯೭ರಲ್ಲಿ ಸ್ವತಂತ್ರರಾಗಿ, ೧೯೯೮-೯೯ರಲ್ಲಿ ಸಮತಾ ಪಾರ್ಟಿಯಲ್ಲಿ, ೧೯೯೯ರಿಂದ ೨೦೦೪ರವರೆಗೆ ಸಂಯುಕ್ತ ಜನತಾದಳದಲ್ಲಿ ಗುರುತಿಸಿಕೊಂಡಿದ್ದರು. ೨೦೦೪ರಿಂದ ೨೦೦೬ರವರೆಗೆ ಜಾತ್ಯತೀತ ಜನತಾದಳದಲ್ಲಿ, ಮತ್ತು ಬಳಿಕ ೨೦೧೭ರವರೆಗೆ ಕಾಂಗ್ರೆಸ್ ಜತೆಗಿದ್ದರು ಶ್ರೀನಿವಾಸ ಪ್ರಸಾದ್. ಮುಂದೆ ಬಿಜೆಪಿ ಸೇರಿ ಈಗ ಸಂಸದರಾಗಿದ್ದಾರೆ. ರಾಜ್ಯದಲ್ಲಿ ಮತ್ತು ಕೇಂದ್ರ ಸರಕಾರಗಳೆರಡರಲ್ಲೂ ಮಂತ್ರಿಗಳಾಗಿ ಗಮನ ಸೆಳೆದಿದ್ದಾರೆ.