ವಿಜಯನಗರ: ವಾಲ್ಮೀಕಿ ಸಮುದಾಯದ ಮೀಸಲಾತಿ ಬೇಡಿಕೆ ತೀವ್ರತೆಯನ್ನು ಪಡೆದುಕೊಂಡಿದೆ. ಒಂದು ಕಡೆ ವಾಲ್ಮೀಕಿ ಸಮಾಜದ ಸ್ವಾಮೀಜಿ ಪ್ರಸನ್ನಾನಂದ ಶ್ರೀ ಹಗಲು-ರಾತ್ರಿ ಧರಣಿ ಮಾಡುತ್ತಿದ್ದರೂ ಸರಕಾರ ತಮ್ಮ ಬೇಡಿಕೆಯನ್ನು ಪರಿಗಣಿಸುತ್ತಿಲ್ಲ ಎನ್ನುವುದು ಸಮಾಜದ ಮುಖಂಡರ ಅಳಲು. ಅದೀಗ ಸಾರಿಗೆ ಸಚಿವರಾಗಿರುವ ರಾಮುಲು ಅವರ ಮೇಲೆ ತಿರುಗಿಬಿದ್ದಿದೆ. ಜತೆಗೆ ಅಕ್ಟೋಬರ್ ೮ರಂದು ಬೆಂಗಳೂರು ಚಲೋ ಕೂಡಾ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 8ಕ್ಕೆ ಬೆಂಗಳೂರು ಚಲೋ
ಸಚಿವರಾದ ಶ್ರೀರಾಮುಲು ಅವರು ಮಹಾನ್ ಸುಳ್ಳುಗಾರ. ಸಚಿವರ ಮಾತು ನಂಬುವ ಸ್ಥಿತಿಯಲ್ಲಿ ನಾವಿಲ್ಲ ಎಂದು ವಾಲ್ಮೀಕಿ ಮುಖಂಡ ಜಂಬೈಹ್ ನಾಯಕ್ ಆಕ್ರೋಶ ಹೊರಹಾಕಿದ್ದಾರೆ. ಪರಿಶಿಷ್ಟ ಜಾತಿ ಇಲಾಖೆ ಸಚಿವರಾಗಿದ್ದರೂ ನಮ್ಮ ಸಮುದಾಯಕ್ಕೆ ಲಾಭ ಇಲ್ಲ. ನಾಗಮೋಹನ್ ದಾಸ್ ವರದಿ ಕೂಡಲೇ ಸರ್ಕಾರ ಜಾರಿ ಮಾಡಬೇಕು ಒತ್ತಾಯಿಸಿದ್ದಾರೆ.
ನಾವು ಅಕ್ಟೋಬರ್ 8ಕ್ಕೆ ಬೆಂಗಳೂರು ಚಲೋ ಹಮ್ಮಿಕೊಂಡಿದ್ದೇವೆ. ಆದರೆ, ನಮ್ಮ ದಿಕ್ಕು ತಪ್ಪಿಸಲು ಸಿಎಂ ಅವರು ಸರ್ವ ಪಕ್ಷ ಸಭೆ ಕರೆದಿದ್ದಾರೆ. ಸರ್ವ ಪಕ್ಷ ಸಭೆಯ ಅಭಿಪ್ರಾಯ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಸಭೆ ಬಳಿಕವೂ ಯಾವುದೋ ಒಂದು ಸುಳ್ಳು ಹೇಳಿ ಸಮುದಾಯವನ್ನು ದಿಕ್ಕು ತಪ್ಪಿಸುತ್ತಾರೆ. ಹಾಗಾಗಿ ನಾವು ಯಾರನ್ನು ನಂಬುವುದಿಲ್ಲ, ಅಕ್ಟೋಬರ್ 8 ಬೆಂಗಳೂರು ಚಲೋ ಹಾಗೂ ಅಕ್ಟೋಬರ್ 9ಕ್ಕೆ ಬೆಂಗಳೂರಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ ಎಂದು ಜಂಬೈಹ್ ನಾಯಕ್ ಹೇಳಿದ್ದಾಎ. ವಾಲ್ಮೀಕಿ ಸಮಾಜದ ಸ್ವಾಮೀಜಿ ಪ್ರಸನ್ನಾನಂದ ಶ್ರೀ ಹಗಲು-ರಾತ್ರಿ ಧರಣಿ ಮಾಡುತ್ತಿದ್ದಾರೆ. ಆದರೂ ಯಾರೂ ಕಿವಿಗೊಡುತ್ತಿಲ್ಲ. ಮೀಸಲಾತಿ ವಿಚಾರಕ್ಕೆ ಬೆಂಗಳೂರಿನಲ್ಲೇ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದಿದ್ದಾರೆ ಅವರು.
ನಾನು ಮೋಸ ಮಾಡಿಲ್ಲ ಎಂದ ಶ್ರೀರಾಮುಲು
ʻʻನಾನು ನಮ್ಮ ಸಮುದಾಯಕ್ಕೆ ಮೋಸ ಮಾಡಿಲ್ಲ, ಒಂದು ವೇಳೆ ಮೋಸ ಮಾಡಿದರೆ ಅಂದೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಮೀಸಲಾತಿ ವಿಚಾರ ರಕ್ತದಲ್ಲಿ ಬರೆದುಕೊಡುತ್ತೇನೆ. ಸಮುದಾಯಕ್ಕೆ (Valmiki Community) ನೋವು ಆಗುವ ರೀತಿಯಲ್ಲಿ ನಾನು ನಡೆದುಕೊಂಡಿಲ್ಲ. ಮೀಸಲಾತಿ ಹೆಚ್ಚಿಸುವ ಪರ ಕೆಲಸ ಮಾಡುತ್ತೇನೆʼʼ ಎಂದು ಸಾರಿಗೆ ಶ್ರೀರಾಮುಲು ಹೇಳಿಕೊಂಡಿದ್ದಾರೆ.
ಕಳೆದ 150ಕ್ಕೂ ದಿನಗಳಿಂದ ವಾಲ್ಮೀಕಿ ಜಗದ್ಗುರು ಪ್ರಸನ್ನಾನಂದ ಪುರಿ ಸ್ವಾಮೀಜಿ ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಸರ್ವಪಕ್ಷ ಸಭೆ ಕರೆಯುತ್ತೇವೆ, ಅತೀ ಶೀಘ್ರದಲ್ಲಿ SC-ST ಮೀಸಲಾತಿ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಕೊಟ್ಟ ಮಾತನ್ನು ಈಡೇರಿಸುವೆ ಎಂದು ರಾಮುಲು ಹೇಳಿದ್ದಾರೆ.
ಹಾದಿ ಬೀದಿಯಲ್ಲಿ ಚರ್ಚೆ
ಒಳ್ಳೆಯ ಕೆಲಸ ಮಾಡಿದಾಗ ರಾಮುಲು ನೆನಪಿಗೆ ಬರುವುದಿಲ್ಲ. ಮೀಸಲಾತಿ ನೀಡುವಾಗ ತಡವಾಗಿದ್ದಕ್ಕೆ ಹಾದಿ ಬೀದಿಯಲ್ಲಿ ನನ್ನ ವಿರುದ್ಧ ಮಾತಾಡ್ತಿದ್ದಾರೆ ಎಂದು ಶ್ರೀರಾಮುಲು ಅಸಮಾಧಾನ ಹೊರಹಾಕಿದ್ದಾರೆ. ಸತೀಶ್ ಜಾರಕಿಹೊಳಿ ವಾಲ್ಮೀಕಿ ಜಯಂತಿ ಆಚರಣೆ ಮಾಡಬೇಡಿ ಎನ್ನುತ್ತಾರೆ. ವಿರೋಧ ಪಕ್ಷದವರಿಗೆ ಬೇರೆ ಕೆಲಸ ಇಲ್ಲ ಹೀಗಾಗಿ ಮಾತಾಡುತ್ತಾರೆ. ಆದರೆ ಮೀಸಲಾತಿ ಕೊಡಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ವಿಜಯನಗರದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.