ಬೆಂಗಳೂರು: ವಾಲ್ಮೀಕಿ ನಿಗಮ ಪ್ರಕರಣ (Valmiki Corp scam) ಸಂಬಂಧ ಎಸ್‌ಐಟಿ ವಿಚಾರಣೆಗೆ ಹಾಜರಾದ ಬಳಿಕ ಮೂರು ದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ಶಾಸಕ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರು ಸೋಮವಾರ ವಿಧಾನ ಮಂಡಲ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಶಾಸಕ ದದ್ದಲ್(Basanagouda Daddal), ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ, ಈ ಘಟನೆಯಿಂದ ನಮ್ಮ ಕುಟುಂಬದ ಸದಸ್ಯರು ಹೆದರಿಕೊಂಡಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ದದ್ದಲ್, ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ದದ್ದಲ್ ನಾಪತ್ತೆ ಅಂತ ಬಿಜೆಪಿಯವರು ಸುಮ್ಮನೇ ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ. ಯಾವ ಇಡಿಯವರೂ ನನ್ನ ಬೆನ್ನತ್ತಿಲ್ಲ. ಬಿಜೆಪಿ ನಾಯಕರು ಬೇಕು ಅಂತಲೇ ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ನಾಪತ್ತೆಯಾಗಿಲ್ಲ. ಈ ಘಟನೆಯಿಂದ ನಮ್ಮ ಕುಟುಂಬದ ಸದಸ್ಯರು ಹೆದರಿಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಅಂತ ಸಿಎಂ ಮುಂದೆ ಕಣ್ಣೀರು ಹಾಕಿದ್ದಾರೆ.
ನನ್ನ ಮನೆಗೆ ಇಡಿ ಅಧಿಕಾರಿಗಳು ಬಂದಿದ್ದರು. ಬಂದಾಗ ಕೆಲ ದಾಖಲೆಗಳನ್ನು ಕೇಳಿದ್ದರು, ಕೊಟ್ಟಿದ್ದೇನೆ. ತನಿಖೆ ಸಹಕಾರ ನೀಡಿದ್ದೇನೆ. ಎಸ್.ಐ.ಟಿಯವರು ನೋಟಿಸ್ ಕೊಟ್ಟಿದ್ದರು, ಹಾಗಾಗಿ ವಿಚಾರಣೆ ಹಾಜರ್ ಆಗಿದ್ದೆ. ಇಡಿಯವರು ವಿಚಾರಣೆಗೆ ಕರೆದರೆ ಬರಬೇಕು ಎಂದು ಹೇಳಿದ್ದರು. ನೀವು ಕರೆದಾಗ ಬರುತ್ತೇನೆ ಎಂದು ಹೇಳಿದ್ದೇನೆ. ಆದರೆ ಇಡಿಯವರು ಈವರೆಗೂ ನನ್ನನ್ನು ವಿಚಾರಣೆ ಕರೆದಿಲ್ಲ. ಒಂದು ವೇಳೆ ಕರೆದರೆ ಹೋಗುತ್ತೇನೆ. ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಸಿಎಂ ಬಳಿ ಹೇಳಿದ್ದಾರೆ.
ಇದನ್ನೂ ಓದಿ | Revenue Officers: ಹೆಚ್ಚು ದೂರುಗಳಿರುವ ಕಂದಾಯ ಅಧಿಕಾರಿಗಳ ಪಟ್ಟಿ ನೀಡುವಂತೆ ಸಚಿವ ಕೃಷ್ಣಭೈರೇಗೌಡ ಸೂಚನೆ
ವಿಧಾನಸಭೆ ಕಲಾಪಕ್ಕೆ ಹಾಜರಾಗಿ ಸೇಫ್ ಆದ ಬಸವನಗೌಡ ದದ್ದಲ್
ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಅವ್ಯವಹಾರ (Valmiki Corporation Scam) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತನಿಖೆಗಾಗಿ ಬೇಕಾಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್, ಇಂದು ವಿಧಾನಸಭೆ ಕಲಾಪಕ್ಕೆ (Karnataka Session Live) ಹಾಜರಾಗುವ ಮೂಲಕ, ಅಧಿವೇಶನ (Assembly Session) ಮುಗಿಯುವ ಹತ್ತು ದಿನಗಳ ಕಾಲ ಅವರು ಇಡಿ ಬಂಧನದಿಂದ ಸೇಫ್ ಆಗಿದ್ದಾರೆ.
ಕಳೆದ ಮೂರು ದಿನಗಳಿಂದ ಬಸವನಗೌಡ ದದ್ದಲ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಾಲ್ಕು ದಿನಗಳ ಹಿಂದೆ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ದದ್ದಲ್ ನಿವಾಸ ಹಾಗೂ ಕಚೇರಿಗಳಿಗೆ ದಾಳಿ ಮಾಡಿದ್ದರು. ನಾಗೇಂದ್ರ ಅವರನ್ನು ಪ್ರಶ್ನಿಸಿದ ಬಳಿಕ ವಶಕ್ಕೆ ಪಡೆದಿದ್ದರು. ಇದರೊಂದಿಗೆ ದದ್ದಲ್ ಅವರಿಗೂ ಬಂಧನ ಭೀತಿ ಶುರುವಾಗಿತ್ತು. ಇಡಿ ಅಧಿಕಾರಿಗಳು ಹುಡುಕಾಡುತ್ತಿದ್ದಂತೆ ದದ್ದಲ್ ನಾಪತ್ತೆಯಾಗಿದ್ದರು.
ದದ್ದಲ್ ಅವರು ವಾಲ್ಮೀಕಿ ನಿಗಮದ ಅಧ್ಯಕ್ಷರೂ ಆಗಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಅವರ ಹೆಸರೂ ಕೇಳಿಬಂದಿದೆ. ದದ್ದಲ್ ಅವರ ಪಿಎ ಸಾಕಷ್ಟು ಹಣದ ಡೀಲಿಂಗ್ ನಡೆಸಿರುವುದು ಪತ್ತೆಯಾಗಿದ್ದು, ಇದರಿಂದ ಆರೋಪದ ತೂಗುಗತ್ತಿ ದದ್ದಲ್ ಅವರ ಮೇಲೂ ತೂಗುತ್ತಿದೆ. ಮೊನ್ನೆ ಇಡಿ ಬಂಧನದಿಂದ ಪಾರಾಗಲು ದದ್ದಲ್ ಅವರು ಎಸ್‌ಐಟಿ ಮುಂದೆ ಹಾಜರಾಗಿ ಇಡೀ ದಿನ ಅಲ್ಲಿ ಕುಳಿತಿದ್ದರು. ಸಂಜೆ ಬಳಿಕ ಕಣ್ಮರೆಯಾಗಿದ್ದರು.
ಇದನ್ನೂ ಓದಿ | Midday meal workers: ಅಕ್ಷರ ದಾಸೋಹ ನೌಕರರ ಅನಿರ್ದಿಷ್ಟಾವಧಿ ಹೋರಾಟ ಆರಂಭ; ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆ
ಸದ್ಯ ವಿಧಾನಸಭೆ ಕಲಾಪಕ್ಕೆ ಆಗಮಿಸುವ ಮೂಲಕ ಅವರು ಬಂಧನದಿಂದ ಬಚಾವ್ ಆಗಿದ್ದಾರೆ. ಇನ್ನೂ ಹತ್ತು ದಿನ ಶಾಸಕ ದದ್ದಲ್ ಬಂಧನ ಸಾಧ್ಯತೆ ಕಡಿಮೆ. ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಒಂದು ವೇಳೆ ಅಧಿವೇಶನ ಸಂದರ್ಭದಲ್ಲೆ ಶಾಸಕರ ತನಿಖೆ ನಡೆಸಬೇಕು, ಬಂಧನ ಮಾಡಬೇಕು ಎಂದರೆ ಸ್ಪೀಕರ್ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಅತ್ತ ಇಡಿ ಅಥವಾ ಎಸ್ಐಟಿ ನೊಟೀಸ್ ನೀಡಿದರೂ ಸದನಕ್ಕೆ ಹಾಜರಾಗಬೇಕು ಎಂದು ಸಬೂಬು ನೀಡಬಹುದು. ಹೀಗಾಗಿ ಅಧಿವೇಶನ ಮುಗಿಯುವವರೆಗೂ ದದ್ದಲ್ ಬಂಧನ ಸಾಧ್ಯತೆ ಇಲ್ಲದಾಗಿದೆ.