ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ (Valmiki Corporation Scam) ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರ (Ex minister B Nagendra) ಸದ್ಯ ಇಡಿ ಅಧಿಕಾರಿಗಳ (ED Officers) ವಶದಲ್ಲಿದ್ದಾರೆ. ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಕೂಡ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಆದರೆ ನಾಗೇಂದ್ರ ಯಾವುದೇ ವಿಚಾರವನ್ನು ಬಾಯಿ ಬಿಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ದಾಖಲೆಗಳನ್ನ ಮುಂದಿಟ್ಟುಕೊಂಡು ಇಡಿ ಅಧಿಕಾರಿಗಳು ಪ್ರಶ್ನೆಸುತ್ತಿದ್ದರೂ ನಾಗೇಂದ್ರ ಯಾವುದೇ ರೀತಿಯಲ್ಲಿಯೂ ತನಿಖೆಗೆ ಸಹಕರಿಸುತ್ತಿಲ್ಲ. ಏನು ಕೇಳಿದರೂ ನನಗೇನೂ ಗೊತ್ತಿಲ್ಲ, ನಾನೇನೂ ಮಾಡಿಲ್ಲ ಎಂದೇ ಹೇಳುತ್ತಿದ್ದಾರೆ. ಪ್ರಕರಣ ಸಂಬಂಧ ಬಂಧಿತ ಆರೋಪಿಗಳ ಹೇಳಿಕೆ ಆಧರಿಸಿ ಪ್ರಶ್ನೆ ಮಾಡಿದರೂ ಯಾವುದೇ ವಿಚಾರ ತಿಳಿಸದ ಕಾರಣ ಅಧಿಕಾರಿಗಳು ಹೈರಾಣಾಗಿದ್ದಾರೆ.
ನಾಗೇಂದ್ರ ಹೇಳಿದ್ದೇನು?
ಆಪ್ತ ನೆಕ್ಕುಂಟಿ ನಾಗರಾಜ್, ನಾಗೇಶ್ವರ್ ರಾವ್, ನಿಗಮದ ಎಂ.ಡಿ ಪದ್ಮನಾಭ್ ಜತೆ ಸೇರಿ ಹೋಟೆಲ್‌ನಲ್ಲಿ ಮೀಟಿಂಗ್ ಮಾಡಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೇಂದ್ರ ಯಾವುದೇ ಮೀಟಿಂಗ್ ಮಾಡಿಲ್ಲ. ಊಟಕ್ಕೆ ಸೇರಿದ್ವಿ ಅಷ್ಟೇ ಎಂದಿದ್ದಾರೆ. ನಿಮ್ಮ ಸೂಚನೆಯಂತೆ ನಿಗಮದಲ್ಲಿ ಹೊಸ ಅಕೌಂಟ್ ತೆರೆಯಲಾಗಿದೆ ಎಂದು ನಿಗಮದ ಎಂ.ಡಿ. ಪದ್ಮನಾಭ್ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದಾಗ ಅವರನ್ನೆ ಕೇಳಿಕೊಳ್ಳಿ ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವರು ಪ್ರತಿಕ್ರಿಯಿಸಿದ್ದಾರೆ.
ನಿಗಮಕ್ಕೆ ಸಂಬಂಧವಿಲ್ಲದ ಆಂಧ್ರದ ಐಟಿ ಕಂಪನಿಗಳಿಗೆ ಹಣ ವರ್ಗಾವಣೆ ಆಗಿದ್ದೇಕೆ? ಎಂಬ ಪ್ರಶ್ನೆಗೆ ಗೊತ್ತಿಲ್ಲ ಎಂದೇ ಉತ್ತರ ಲಭಿಸಿದೆ. ನಿಗಮಕ್ಕೂ ನೆಕ್ಕುಂಟಿ ನಾಗರಾಜ್, ಸತ್ಯನಾರಾಯಣ, ನಾಗೇಶ್ವರ್ ರಾವ್‌ಗೂ ಏನು ಸಂಬಂಧ ? ಎಂದು ಇಡಿ ಅಧಿಕಾರಿಗಳು ಕೇಳಿದಾಗ ನನಗೇನು ಗೊತ್ತು ಸರ್ ? ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಸುಸ್ತಾದ ಅಧಿಕಾರಿಗಳು
ವಿಚಾರಣೆ ವೇಳೆ ಏನೇ ಕೇಳಿದರೂ ನನಗೇನು ಗೊತ್ತಿಲ್ಲ, ನಾನೇನು ಮಾಡಿಲ್ಲ ಎಂಬ ಎರಡು ಮಾತನ್ನ ಬಿಟ್ಟು ಬೇರೆ ಮಾತಾಡದ ಮಾಜಿ ಸಚಿವ ನಾಗೇಂದ್ರ ಅವರಿಂದಾಗಿ ಅಧಿಕಾರಿಗಳು ಸುಸ್ತಾಗಿದ್ದಾರೆ. ಎಸ್.ಐ.ಟಿ. ಹಾಗೂ ಸಿಬಿಐ ವಿಚಾರಣೆ ವೇಳೆ ಮಾಜಿ ಸಚಿವ ನಾಗೇಂದ್ರ ಸೂಚನೆಯಂತೆ ಹೊಸ ಅಕೌಂಟ್ ತೆರೆದಿದ್ದಾಗಿ ಎಂ.ಡಿ ಪದ್ಮನಾಭ್ ಬಾಯ್ಬಿಟ್ಟಿದ್ದರು. ಆದರೆ ಇಡಿ ವಿಚಾರಣೆ ವೇಳೆ ಯಾವುದಕ್ಕೂ ಸರಿಯಾಗಿ ಉತ್ತರಿಸದೇ ತನಗೇನೂ ಗೊತ್ತಿಲ್ಲ ಎಂದು ನಾಗೇಂದ್ರ ಹೇಳುತ್ತಿದ್ದಾರೆ.
ಇದನ್ನೂ ಓದಿ: ED Raid: ಮಾಜಿ ಸಚಿವ ನಾಗೇಂದ್ರ, ಶಾಸಕ ದದ್ದಲ್ ನಿವಾಸದಲ್ಲಿ 24 ಗಂಟೆಗಳಿಂದ ಮುಂದುವರಿದ ಇಡಿ ಅಧಿಕಾರಿಗಳ ತಪಾಸಣೆ
ನಿರಂತರ 40 ಗಂಟೆಗಳ ತಪಾಸಣೆ ಹಾಗೂ ತನಿಖೆಯ ಬಳಿಕ, ವಾಲ್ಮೀಕಿ ನಿಗಮ ಹಗರಣ ಕುರಿತು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜುಲೈ 12ರಂದು ವಶಕ್ಕೆ ಪಡೆದುಕೊಂಡಿದ್ದರು. 40 ಗಂಟೆಗಳ ಕಾಲ ನಾಗೇಂದ್ರ ಹಾಗೂ ಕುಟುಂಬದವರನ್ನು ಮನೆಯಿಂದ ಹೊರಬಿಡದ ಇಡಿ ಅಧಿಕಾರಿಗಳು ನಿರಂತರವಾಗಿ ಪ್ರಶ್ನೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂಪಾಯಿಗಳ ಹಗರಣದ ಬಗ್ಗೆ ಯಾವುದೇ ಸುಳಿವು ತಮಗಿಲ್ಲ ಎಂದೇ ನಾಗೇಂದ್ರ ಹೇಳಿದ್ದರು. ಆದರೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್ ಹೇಳಿಕೆಯಿಂದಾಗಿ ನಾಗೇಂದ್ರ ಹೇಳಿಕೆಯ ಬಗ್ಗೆ ಅನುಮಾನ ಮೂಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿತ್ತು.