Site icon Vistara News

Valmiki Corporation scam: ಮಾಜಿ ಸಚಿವ ನಾಗೇಂದ್ರಗೆ ಆ.3ರವರೆಗೆ ನ್ಯಾಯಾಂಗ ಬಂಧನ

Valmiki Corporation Scam

ಬೆಂಗಳೂರು: ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ (Valmiki Corporation scam) ಇಡಿಯಿಂದ ಬಂಧನವಾಗಿರುವ ಮಾಜಿ ಸಚಿವ ಬಿ.ನಾಗೇಂದ್ರಗೆ ಆಗಸ್ಟ್‌ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೃದಯ ಸಂಬಂಧಿ‌ ಕಾಯಿಲೆ ಇರುವುದರಿಂದ ಚಿಕಿತ್ಸೆ ಕೊಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ನಾಗೇಂದ್ರ ಪರ ವಕೀಲರಿಂದ ಮನವಿ ಮಾಡಿದ್ದರಿಂದ ಮಾಜಿ ಸಚಿವರಿಗೆ ಆಗಸ್ಟ್‌ 3ರವರೆಗೆ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಇಡಿ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ರಿಮ್ಯಾಂಡ್ ಕಾಪಿ ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಿದ ಎಸ್‌ಪಿಪಿ, ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದರು. ಇನ್ನು ನಾಗೇಂದ್ರ ಪರ ವಕೀಲ ಶ್ಯಾಮ್ ಸುಂದರ್ ಅವರು ಜಾಮೀನು ಅರ್ಜಿ ಸಲ್ಲಿಸುವುದಾಗಿ ಮನವಿ ಮಾಡಿದರು. ಇದಕ್ಕೆ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ಸಮ್ಮತಿ ಸೂಚಿಸಿದರು.

ಹಣ ಅಕ್ರಮ ವರ್ಗಾವಣೆಯಲ್ಲಿ ನಾಗೇಂದ್ರ ಪ್ರಮುಖ‌ ಪಾತ್ರ ವಹಿಸಿದ್ದು, ವಿಚಾರಣೆ ಅವಶ್ಯಕತೆ ಇದೆ. ಹೀಗಾಗಿ ಕಸ್ಟಡಿಗೆ ನೀಡಬೇಕೆಂದು ಇಡಿ ಮನವಿ ಸಲ್ಲಿಸಿತ್ತು. ಆದರೆ, ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಚಿಕಿತ್ಸೆಗೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ನಾಗೇಂದ್ರ ಪರ ವಕೀಲರು ಮನವಿ ಮಾಡಿದ್ದಾರೆ. ಹೀಗಾಗಿ ಅವರಿಗೆ ನಾಗೇಂದ್ರ ಬಂಧನ ವಿಧಿಸಲಾಗಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜುಲೈ 12ರಂದು ನಾಗೇಂದ್ರರನ್ನು ಇಡಿ ಬಂಧಿಸಿತ್ತು. ಬಳಿಕ ಜುಲೈ 13ರಂದು ನಾಗೇಂದ್ರರನ್ನು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರ ಯಲಹಂಕದ ನಿವಾಸಕ್ಕೆ ಹಾಜರುಪಡಿಸಲಾಗಿತ್ತು ಆಗ ಐದು ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದ್ದರು. ಬಳಿಕ ಜುಲೈ 18ರಂದು ಮತ್ತೆ ಕೋರ್ಟ್‌ಗೆ ಹಾರುಪಡಿಸಿದಾಗ ಮತ್ತೆ 5 ದಿನ ನ್ಯಾಯಾಂಗ ಬಂಧನಕ್ಕೆ (ಜುಲೈ 22ರವರೆಗೆ) ಒಪ್ಪಿಸಲಾಗಿತ್ತು. ಇಂದು ನಾಗೇಂದ್ರ ಅವರ ಕಸ್ಟಡಿ ಅಂತ್ಯವಾಗಿದ್ದರಿಂದ ನ್ಯಾಯಾಲಯದ ಮುಂದೆ ಇಡಿ ಹಾಜರ್ ಪಡಿಸಿತ್ತು.

ಇದೇ ವೇಳೆ ಆರೋಪಿ ಸತ್ಯಾನಾರಾಯಣ ವರ್ಮನನ್ನು ಕಸ್ಟಡಿ ಪಡೆಯಲು ಬಾಡಿ ವಾರೆಂಟ್‌ಗೆ ಇಡಿ ಮನವಿ ಸಲ್ಲಿಸಿತು. ಹಗರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಆರೋಪಿ ಸತ್ಯನಾರಾಯಣ ವರ್ಮ ವಿಚಾರಣೆ ಅವಶ್ಯಕತೆ ಇದೆ, ಹೀಗಾಗಿ ಕಸ್ಟಡಿಗೆ ನೀಡಬೇಕೆಂದು ಇಡಿ ಮನವಿ ಸಲ್ಲಿಸಿದೆ.

ಇದನ್ನೂ ಓದಿ | SSLC Student : ಚಿತ್ರದುರ್ಗದಲ್ಲಿ ನೇಣಿಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ

ಜುಲೈ 12ರಂದು ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ನಾಗೇಂದ್ರ ಹಾಗೂ ಬಸನಗೌಡ ದದ್ದಲ್‌ ಅವರ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸತತ 7 ಗಂಟೆ ವಿಚಾರಣೆ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರರನ್ನು ಇಡಿ ಬಂಧನ ಮಾಡಿತ್ತು. ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂಪಾಯಿಗಳ ಹಗರಣದ ಬಗ್ಗೆ ಯಾವುದೇ ಸುಳಿವು ತಮಗಿಲ್ಲ ಎಂದೇ ನಾಗೇಂದ್ರ ಹೇಳಿದ್ದರು. ಆದರೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ ಹೇಳಿಕೆಯಿಂದಾಗಿ ನಾಗೇಂದ್ರ ಹೇಳಿಕೆಯ ಬಗ್ಗೆ ಅನುಮಾನ ಮೂಡಿತ್ತು. ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿತ್ತು.

Exit mobile version