Site icon Vistara News

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಇಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌!

Valmiki Corporation Scam

Valmiki Corporation Scam

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ಕೇಸ್‌ (Valmiki Corporation Scam)ನಲ್ಲಿ ಇಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಮೂಲಕ ಕೇಂದ್ರ ತನಿಖಾ ಸಂಸ್ಥೆ ಜತೆ ರಾಜ್ಯ ಸರ್ಕಾರ ನೇರ ಸಂಘರ್ಷಕ್ಕೆ ಇಳಿಯಿತಾ ಎನ್ನುವ ಪ್ರಶ್ನೆ ಮೂಡಿದೆ. ಮಾಜಿ ಸಚಿವ ಬಿ.ನಾಗೇಂದ್ರ ಹೆಸರು ಹೇಳುವಂತೆ ಒತ್ತಡ, ಮಾನಸಿಕವಾಗಿ ಹಿಂಸೆ ನೀಡಲಾಗಿದೆ ಎಂಬ ಆರೋಪದಲ್ಲಿ ಇಡಿ ಅಧಿಕಾರಿಗಳ ವಿರುದ್ಧ ವಿಲ್ಸನ್‌ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಈ ಹಿಂದಿನ ನಿರ್ದೇಶಕ ಕಲ್ಲೇಶ್ ಬಿ. ನೀಡಿದ ದೂರಿನ ಮೇರೆಗೆ ಇಡಿ ಅಧಿಕಾರಿಗಳಾದ ಮಿತ್ತಲ್ ಹಾಗೂ ಮುರುಳಿ ಕಣ್ಣನ್ ಮೇಲೆ ಪ್ರಕರಣ ದಾಖಲಾಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಬಂಧನವಾಗಿರುವ ಮಾಜಿ ಸಚಿವ ನಾಗೇಂದ್ರ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ವಿಚಾರಣೆ ವೇಳೆ ಮಾಜಿ ಸಚಿವ ನಾಗೇಂದ್ರ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇರಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ನಿಗಮದ ಈ ಹಿಂದಿನ ಎಂಡಿ ಕಲ್ಲೇಶ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇಡಿ ಕಚೇರಿ ಶಾಂತಿನಗರದಲ್ಲಿ ಇರುವುದರಿಂದ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬಿಎನ್‌ಎಸ್‌ ಕಾಯ್ದೆಯಡಿ ಕೇಸ್

ಸೆಕ್ಷನ್ 3(5), 351(2), 352ರಡಿ (ಕ್ರಿಮಿನಲ್ ಬೆದರಿಕೆ ಮತ್ತು ಶಾಂತಿ ಹದಗೆಡಿಸುವ ಉದ್ದೇಶದಿಂದ ಅವಮಾನ ಆರೋಪ) ಎಫ್‌ಐಆರ್‌ ದಾಖಲಿಸಿಕೊಂಡಿರುವ ವಿಲ್ಸನ್ ಗಾರ್ಡನ್ ಪೊಲೀಸರು ಇಡಿ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಆರೋಪಗಳ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಿದ್ದಾರೆ. ಸದ್ಯ ಮುಂದಿನ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳ ಪೊಲೀಸರು ಚರ್ಚಿಸುತ್ತಿದ್ದಾರೆ.

ಯಾರು ಈ ಕಲ್ಲೇಶ್ ?

ಕಲ್ಲೇಶ್‌ ಬಿ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕರಾಗಿದ್ದರು. ಜತೆಗೆ ವಾಲ್ಮೀಕಿ ನಿಗಮದ ಪದನಿಮಿತ್ತ ನಿರ್ದೇಶಕರೂ ಆಗಿದ್ದರು. ಆದರೆ ಇಲಾಖೆಯ ಅನುದಾನ ದುರ್ಬಳಕೆ ಆರೋಪದಡಿ ಅವರು ಸದ್ಯ ಅಮಾನತ್ತಿನಲ್ಲಿದ್ದಾರೆ. ಕಳೆದ ಜೂನ್ 22ರಂದು ಕಲ್ಲೇಶ್ ಅವರನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಮಾನತ್ತಿನಲ್ಲಿಟ್ಟಿದೆ. ವಾಲ್ಮೀಕಿ ನಿಗಮ ಹಗರಣ ಸಂಬಂಧ ಜು. 16ರಂದು ವಿಚಾರಣೆಗೆ ಹಾಜರಾಗಿದ್ದರು.

ಎಫ್‌ಐಆರ್‌ನಲ್ಲಿ ಏನಿದೆ?

ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ವೇಳೆ 17 ಪ್ರಶ್ನೆಗಳನ್ನು ಕೇಳಿರುವ ಇಡಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡು, ಒತ್ತಾಯ ಪೂರ್ವಕ ಸಹಿ ಹಾಕುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಕಲ್ಲೇಶ್‌ ಉಲ್ಲೇಖಿಸಿದ್ದಾರೆ. ಅಕ್ರಮ ವರ್ಗಾವಣೆಯಲ್ಲಿ ನಿನ್ನನ್ನು ಬಂಧಿಸುತ್ತೇವೆ, ಎರಡು ವರ್ಷ ಬೇಲ್‌ ಸಿಗಲ್ಲ ಎಂದು ಧಮ್ಕಿ ಹಾಕಿದ್ದಾರೆ. ನೀನೊಬ್ಬ ಅಪರಾಧಿ, ನಿನ್ನನ್ನು ಹೀಗಲೇ ಅರೆಸ್ಟ್ ಮಾಡುತ್ತೇವೆ, ಇಡಿ ಬಗ್ಗೆ ನಿನಗೆ ಗೊತ್ತಿಲ್ಲಾ ಎಂದು ಮಿತ್ತಲ್‌ ಬೈದಿದ್ದಾರೆ. ಎಂಜಿ ರಸ್ತೆ ಶಾಖೆಗೆ ಹಣ ವರ್ಗಾವಣೆ ಮಾಡಲು ನಾಗೇಂದ್ರ ಹಾಗೂ ಹೈ ಅಥಾರಿಟಿ ಎಫ್.ಡಿ ಇಲಾಖೆಯಿಂದ ಸೂಚನೆ ಇತ್ತು ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿದೆ. ಈ ಕೂಡಲೇ ಬರೆದು ಕೊಟ್ಟು ಸಹಿ ಮಾಡಿಕೊಡುವಂತೆ ಒತ್ತಡ ಹೇರಿದ್ದಾರೆ. ಹಣ ವರ್ಗಾವಣೆಗೆ ಒತ್ತಡ ಇತ್ತು ಎಂದು ಬರೆದುಕೊಡಲು ತಿಳಿಸಿದ್ದಾರೆ. ಪದೇಪದೆ ಇದೇ ಪ್ರಶ್ನೆ ಕೇಳಿ 7 ವರ್ಷ ಜೈಲು, ಶಿಕ್ಷೆ ಕೊಡಿಸುವವರೆಗೂ ಬಿಡುವುದಿಲ್ಲ ಎಂದಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ ಕಾನೂನು ಬಾಹಿರವಾಗಿ ವಿಚಾರಣೆ ಮಾಡಿ ಬೈದು ಬೆದರಿಕೆ ಹಾಕಿದ್ದಾರೆ ಎಂದು ಇಡಿ ಅಧಿಕಾರಿಗಳಾದ ಮಿತ್ತಲ್ ಮತ್ತು ಮುರುಳಿ ಕಣ್ಣನ್ ಅವರ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: TA Sharavana: 108 ಆಂಬ್ಯುಲೆನ್ಸ್‌ಗೆ 7 ವರ್ಷ ಕಳೆದರೂ ಹೊಸ ಟೆಂಡರ್‌ ಇಲ್ಲ ಯಾಕೆ? ಟಿ. ಎ. ಶರವಣ ಪ್ರಶ್ನೆ

Exit mobile version