Site icon Vistara News

Vande Bharat Express: ಕರ್ನಾಟಕದ 2ನೇ ವಂದೇ ಭಾರತ್‌ ರೈಲಿಗೆ ಇಂದು ಮೋದಿ ಹಸಿರು ನಿಶಾನೆ, ಒಟ್ಟು 5 ರೈಲು ಶುರು

modi vande bharat train

ಬೆಂಗಳೂರು: ಕರ್ನಾಟಕದ ಎರಡನೇ ವಂದೇ ಭಾರತ್‌ ರೈಲಿಗೆ (Vande Bharat Express) ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಹಸಿರು ನಿಶಾನೆ ತೋರಲಿದ್ದಾರೆ.

ನೈಋತ್ಯ ರೈಲ್ವೆ (SWR) ವಲಯದಲ್ಲಿ ಬೆಂಗಳೂರು ಮತ್ತು ಧಾರವಾಡವನ್ನು ಸಂಪರ್ಕಿಸುವ ಕರ್ನಾಟಕದ ವಿಶೇಷ ರೈಲು ಇದಾಗಿದೆ. ಜೂನ್ 19ರಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ನಿಲ್ದಾಣದಿಂದ ಧಾರವಾಡಕ್ಕೆ ಮತ್ತು ಅಲ್ಲಿಂದ ಹಿಂದಕ್ಕೆ ಈ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಓಡಾಟವನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

ಕಳೆದ ವರ್ಷ ನವೆಂಬರ್‌ನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ ನೀಡಿದ್ದರು. ಇದು ಅವರು ಕರ್ನಾಟಕದಲ್ಲಿ ಹಸಿರು ನಿಶಾನೆ ತೋರಲಿರುವ ಎರಡನೇ ವಂದೇ ಭಾರತ್ ರೈಲು. ಅದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಕೂಡ ಆಗಿತ್ತು. ಈ ಎಕ್ಸ್‌ಪ್ರೆಸ್ ರೈಲು ರಾಜ್ಯದ ಪ್ರಮುಖ ನಗರಗಳಾದ ಧಾರವಾಡ, ಹುಬ್ಬಳ್ಳಿ ಮತ್ತು ದಾವಣಗೆರೆಯನ್ನು ರಾಜಧಾನಿ ಬೆಂಗಳೂರಿನೊಂದಿಗೆ ಸಂಪರ್ಕಿಸುತ್ತದೆ. ಈ ಭಾಗದ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ಅಪಾರ ಪ್ರಯೋಜನ ನೀಡಲಿದೆ.

ಧಾರವಾಡ-ಕೆಎಸ್‌ಆರ್ ಬೆಂಗಳೂರು ಉದ್ಘಾಟನಾ ವಿಶೇಷ (ರೈಲು ಸಂಖ್ಯೆ 07305) ಜೂನ್ 27ರಂದು ಬೆಳಿಗ್ಗೆ 10.30ಕ್ಕೆ ಧಾರವಾಡದಲ್ಲಿ ಉದ್ಘಾಟನೆ ಆಗಲಿದೆ. ಐದು ನಿಮಿಷಗಳ ನಂತರ ಬೆಂಗಳೂರಿಗೆ ಹೊರಡಲಿದೆ. ಪ್ರಾಯೋಗಿಕ ಚಾಲನೆಯಲ್ಲಿ, ಎಕ್ಸ್‌ಪ್ರೆಸ್ ರೈಲು ಒಟ್ಟು 489 ಕಿಮೀ ದೂರದ ಮಾರ್ಗದಲ್ಲಿ 350 ಕಿಮೀ ಮಾರ್ಗದಲ್ಲಿ ಗಂಟೆಗೆ 110 ಕಿಮೀ ವೇಗದಲ್ಲಿ ಯಶಸ್ವಿಯಾಗಿ ಓಡಿತು.

ರೈಲಿನ ಪ್ರಯಾಣ ಅವಧಿ 6 ಗಂಟೆ 25 ನಿಮಿಷ. ಮೊದಲಿನದಕ್ಕಿಂತ 30 ನಿಮಿಷ ಕಡಿಮೆ. ಹವಾನಿಯಂತ್ರಿತ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಕಾರ್ ಹೊಂದಿರುವ ಈ ರೈಲು ನಿಯಮಿತ ಕಾರ್ಯಾಚರಣೆ ಆರಂಭಿಸಿದ ನಂತರ ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಿಲ್ಲುತ್ತದೆ. ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿ ವಾಣಿಜ್ಯ ನಿಲುಗಡೆ. ಪ್ರಾಥಮಿಕ ನಿರ್ವಹಣೆ ಬೆಂಗಳೂರಿನಲ್ಲಿರುತ್ತದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳ ಇದು ಚಲಿಸಲಿದೆ.

ಒಟ್ಟು 5 ವಂದೇ ಭಾರತ್‌ ರೈಲು ಲೋಕಾರ್ಪಣೆ

ಕರ್ನಾಟಕದ ಈ ರೈಲು ಸೇರಿ ಒಟ್ಟು 5 ವಂದೇ ಭಾರತ್‌ ಟ್ರೇನುಗಳಿಗೆ ಇಂದು ಪ್ರಧಾನ ಮೋದಿ ಚಾಲನೆ ನೀಡಲಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ದೇಶಾದ್ಯಂತದ ಐದು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಿಗೆ ಚಾಲನೆ ನೀಡಲಿದ್ದಾರೆ.

ಈ ರೈಲುಗಳು ಧಾರವಾಡ-ಬೆಂಗಳೂರು, ಭೋಪಾಲ್- ಜಬಲ್ಪುರ, ಭೋಪಾಲ್-ಇಂದೋರ್, ಮಡಗಾಂವ್-ಮುಂಬೈ ಮತ್ತು ಹಟಿಯಾ-ಪಾಟ್ನಾಗಳನ್ನು ಸಂಪರ್ಕಿಸುತ್ತವೆ. ಗೋವಾ ಮತ್ತು ಜಾರ್ಖಂಡ್ ತಮ್ಮ ಮೊದಲ ಜೋಡಿ ವಂದೇ ಭಾರತ್ ರೈಲುಗಳನ್ನು ಪಡೆಯುತ್ತಿವೆ. ಬಿಹಾರದಲ್ಲಿ ಹೈಸ್ಪೀಡ್‌ ರೈಲು ಇದ್ದರೂ, ತನ್ನ ಮೊದಲ ವಂದೇ ಭಾರತ್ ರೈಲನ್ನು ಪಡೆಯುತ್ತಿದೆ. ಭಾರತದಾದ್ಯಂತ ರೈಲು ಮಾರ್ಗ ವಿದ್ಯುದ್ದೀಕರಣಗೊಂಡ ಬಳಿಕ ಎಲ್ಲಾ ರಾಜ್ಯಗಳು ಈಗ ಈ ಸೆಮಿ-ಹೈ ಸ್ಪೀಡ್ ರೈಲುಗಳೊಂದಿಗೆ ಸಂಪರ್ಕ ಹೊಂದುತ್ತಿವೆ. ಒಂದೇ ದಿನದಲ್ಲಿ ಐದು (ವಂದೇ ಭಾರತ್) ರೈಲುಗಳನ್ನು ಉದ್ಘಾಟನೆ ಮಾಡುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: Vande Bharat Express : ಬೆಂಗಳೂರು-ಧಾರವಾಡ ನಡುವೆ ಜುಲೈನಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಂಚಾರ, ಇಲ್ಲಿದೆ ಡಿಟೇಲ್ಸ್

Exit mobile version