ಬೆಂಗಳೂರು: ರಾಜ್ಯಕ್ಕೆ ಜುಲೈನಲ್ಲಿ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ (Vande Bharat Express train) ಸಿಗಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ಈ ವರ್ಷ ಜುಲೈನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ಘೋಷಿಸಿದ್ದಾರೆ. ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವೆ ಮೊದಲ ವಂದೇ ಭಾರತ್ ರೈಲು ಸಂಚಾರ ಶುರುವಾಗಿತ್ತು.
ಜುಲೈನಲ್ಲಿ ಧಾರವಾಡ – ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ
— Pralhad Joshi (@JoshiPralhad) May 31, 2023
ಬಹು ನಿರೀಕ್ಷೆಯ ಧಾರವಾಡ – ಬೆಂಗಳೂರು ಮಧ್ಯದ ವಂದೇ ಭಾರತ್ ರೈಲಿನ ಸೇವೆ ಇನ್ನು ಕೆಲವೇ ದಿನಗಳಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ.#VandeBharatExpress (1/3) pic.twitter.com/IFv04VJrAY
ಪ್ರಲ್ಹಾದ್ ಜೋಷಿ ಬುಧವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದರು. ಬಳಿಕ ವಂದೇ ಭಾರತ್ ಸೇವೆ ಶೀಘ್ರ ರಾಜ್ಯದ ಜನತೆಗೆ ಸಿಗಲಿದೆ ಎಂದು ಟ್ವೀಟ್ ಮಾಡಿದ್ದರು. ರೈಲು ಸಂಚಾರಕ್ಕೆ ಬೇಕಾದ ಪೂರ್ವ ಸಿದ್ಧತೆ ಸಂಪೂರ್ಣವಾಗಿದೆ.
ದೇಶದ ಅತಿ ವೇಗದ ರೈಲು ಇದಾಗಿದೆ. ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲೂ ಸಂಚರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ವಿಮಾನದಲ್ಲಿ ಇರುವಂತೆ ಐಷಾರಾಮಿ ವ್ಯವಸ್ಥೆ, ಸೀಟುಗಳನ್ನು ಹೊಂದಿದೆ. ವಿಶ್ವದರ್ಜೆಯ ಪ್ರಯಾಣಿಕರ ಸೌಲಭ್ಯ ಹೊಂದಿದೆ. ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್‌ಗಳನ್ನು ಹೊಂದಿದೆ. ವಂದೇ ಭಾರತ್ ರೈಲಿನಲ್ಲಿ ಆನ್‌ಬೋರ್ಡ್ ಉಪಾಹಾರದ ವ್ಯವಸ್ಥೆ ಇದೆ. ರೀಡಿಂಗ್ ಲೈಟ್, ಸ್ವಯಂಚಾಲಿತ ವಾಗಿಲು, ವೈ ಫೈ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್ ಪಾಯಿಂಟ್, ಬಯೊ ಶೌಚಾಲಯ ಇದೆ ಎಂದು ಕೇಂದರ ಸಚಿವ ಪ್ರಲ್ಹಾದ್ ಜೋಷಿ ತಿಳಿಸಿದ್ದಾರೆ.
ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಉಭಯ ನಗರಗಳ ನಡುವೆ ಡೌನ್‌ಲೈನ್‌ನ ವಿದ್ಯುದೀಕರಣದಲ್ಲಿ ವಿಳಂಬವಾದ್ದರಿಂದ ಸೇವೆ ಆರಂಭಿಸಲು ಅಡಚಣೆಯಾಗಿತ್ತು. ಹುಬ್ಬಳ್ಳಿ-ಧಾರವಾಡ ವಲಯದಲ್ಲಿ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಇವೆ. ಹುಬ್ಬಳ್ಳಿ ವಾಣಿಜ್ಯ ಚಟುವಟಿಕೆಗೂ ಹೆಸರಾಗಿದೆ. ಹೀಗಾಗಿ ವಂದೇ ಭಾರತ್ ಐಷಾರಾಮಿ ರೈಲು ಸಂಚಾರದಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಮುಂಬರುವ ವಂದೇ ಭಾರತ್ ಸಂಚಾರ ಮಾರ್ಗ
ಮುಂಬರುವ ದಿನಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ಹೈದರಾಬಾದ್ ನಡುವೆ ಆರಂಭವಾಗಲಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈ-ಮೈಸೂರು-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಉದ್ಘಾಟಿಸಿದ್ದರು.
ಕೇರಳದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ತಿರುವನಂತಪುರಂ-ಕಾಸರಗೋಡು ಮಧ್ಯೆ ಸಂಚಾರ ಮಾಡುತ್ತಿದೆ. ತಿರುವನಂತಪುರಂನಿಂದ ಕಾಸರಗೋಡಿಗೆ ಸಾಗುವ ಮಾರ್ಗದಲ್ಲಿ ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಲಕ್ಕಾಡ್, ಪತನಂಥಿಟ್ಟ, ಮಲಪ್ಪುರಂ, ಕೊಯಿಕ್ಕೋಡ್, ಕಣ್ಣೂರ್ ಸೇರಿ 11 ಜಿಲ್ಲೆಗಳ ವಿವಿಧ ನಗರಗಳನ್ನು ಈ ರೈಲು ಹಾದುಹೋಗುತ್ತಿದ್ದು, 556 ಕಿಮೀ ದೂರವನ್ನು 8ತಾಸುಗಳಲ್ಲಿ ತಲುಪಲಿದೆ.
ವೇಗದ ಮಿತಿ ಎಷ್ಟು?
ಭಾರತದ ವೇಗದ ರೈಲು ಎಂದು ಹೆಸರಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಂಟೆಗೆ 180 ಕಿ.ಮೀ ಚಲಿಸಬಲ್ಲುದು. (Vande Bharat Express) ಇಷ್ಟು ಸಾಮರ್ಥ್ಯ ಇದ್ದರೂ ಕಳೆದ ಎರಡು ವರ್ಷಗಳಲ್ಲಿ ಸರಾಸರಿ 83 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸಿದೆ. ಇದಕ್ಕೆ ಕಾರಣ ಹಳಿಗಳ ಪರಿಸ್ಥಿತಿ ಕಳಪೆಯಾಗಿರುವುದು. ಮಾಹಿತಿ ಹಕ್ಕು ಕಾಯಿದೆಯ ಅಡಿ ಕೇಳಿದ ಪ್ರಶ್ನೆಗೆ ಈ ಉತ್ತರ ಲಭಿಸಿದೆ. ಸುಧಾರಿತ ವಂದೇ ಭಾರತ್ ರೈಲುಗಳು ಗಂಟೆಗೆ 200 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲುದು.
ಮಧ್ಯಪ್ರದೇಶ ಮೂಲದ ಚಂದ್ರ ಶೇಖರ್ ಗೌರ್ ಎಂಬುವರು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕೇಳಿದ ಪ್ರಶ್ನೆಗೆ, ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು 2021-22ರಲ್ಲಿ ಗಂಟೆಗೆ 84.48 ಕಿ.ಮೀ ಹಾಗೂ 2022-23ರಲ್ಲಿ 81.38 ಕಿ.ಮೀ ವೇಗದಲ್ಲಿ ಸಂಚರಿಸಿದೆ ಎಂಬ ಉತ್ತರ ಸಿಕ್ಕಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲಾಗಿದ್ದು, ರಿಸರ್ಚ್ ಡಿಸೈನ್ಸ್ & ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಇದರ ವಿನ್ಯಾಸವನ್ನು ಸಿದ್ಧಪಡಿಸಿದೆ. ಚೆನ್ನೈನಲ್ಲಿ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಇದನ್ನು ಉತ್ಪಾದಿಸುತ್ತದೆ. ಮುಂಬಯಿ ಸಿಎಸ್‌ಎಂಟಿ-ಸಾಯಿನಗರ್ ಶಿರಿಡಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸರಾಸರಿ 64 ಕಿ.ಮೀ ವೇಗದಲ್ಲಿ ಸಂಚರಿಸಿದೆ. ನವ ದೆಹಲಿ-ವಾರಾಣಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸರಾಸರಿ 95 ಕಿ.ಮೀ ವೇಗದಲ್ಲಿ ಸಂಚರಿಸಿದೆ.