ಬೆಂಗಳೂರು: ರಾಜ್ಯ ಸರಕಾರದ ನೂತನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ವಂದಿತಾ ಶರ್ಮಾ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಈಗಿನ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ. ಈ ಪ್ರಮುಖ ಹುದ್ದೆಗೆ ಹಲವು ಅಧಿಕಾರಿಗಳ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ವಂದಿತಾ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ವಂದಿತಾ ಅವರು 1986ರ ಬ್ಯಾಚ್ ನ ಕರ್ನಾಟಕ ಕೇಡರ್ ನ ಅಧಿಕಾರಿಯಾಗಿದ್ದಾರೆ.
ಪಿ ರವಿಕುಮಾರ್ ಮೇ 31ರಂದು ನಿವೃತ್ತರಾಗಲಿದ್ದಾರೆ. ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆಯಾಗಿದ್ದಾರೆ.
ಇದನ್ನೂ ಓದಿ | ಸರ್ಕಾರದ ಹೊರಗುತ್ತಿಗೆ ಹುದ್ದೆಗಳಲ್ಲಿಯೂ ಮಹಿಳೆಯರಿಗೆ ಶೇ.33 ಮೀಸಲು ಜಾರಿ
ಮೂರು ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳು!
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಈ ಹಿಂದೆ 2000ರಲ್ಲಿ ತೆರೇಸಾ ಭಟ್ಟಾಚಾರ್ಯ, 2006ರಲ್ಲಿ ಮಾಲತಿ ದಾಸ್ ಹಾಗೂ 2017ರಲ್ಲಿ ಕೆ. ರತ್ನಪ್ರಭ ಅವರು ಅಲಂಕರಿಸಿದ್ದರು.
ಕೆ ರತ್ನಪ್ರಭ ಅವರ ಅಧಿಕಾರಾವಧಿಯಲ್ಲಿ ರಾಜ್ಯ ಪೋಲಿಸ್ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಹುದ್ದೆಯನ್ನು ನೀಲಮಣಿ ಎನ್ ರಾಜು ಅಲಂಕರಿಸಿದಾಗ ಎರಡು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದದ್ದು ಗಮನ ಸೆಳೆದಿತ್ತು.
ಇದೀಗ ವಂದಿತಾ ಶರ್ಮಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದಾಗ, ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಇರುವ ಮೂರೂ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದಂತಾಗುತ್ತದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಹಾಗೂ ರಾಜ್ಯ ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ ಅವರು ರಾಜ್ಯ ಆಡಳಿತ ಯಂತ್ರದ ಮಹಿಳಾ ಶಕ್ತಿಯಾಗಿ ಹೊಸ ದಾಖಲೆ ನಿರ್ಮಾಣವಾಗಲಿದೆ.
ಇದನ್ನೂ ಓದಿ | ನಾಯಿ ವಾಕಿಂಗ್‌ಗೆ ಸ್ಟೇಡಿಯಂನಿಂದ ಕ್ರೀಡಾಳುಗಳನ್ನೇ ಹೊರಗಟ್ಟುತ್ತಿದ್ದ ಅಧಿಕಾರಿ, ಪತ್ನಿ ಬೇರೆ ಬೇರೆ ರಾಜ್ಯಕ್ಕೆ ಟ್ರಾನ್ಸ್‌ಫರ್