Site icon Vistara News

Varthur santhosh arrest : ವರ್ತೂರು ಸಂತೋಷ್‌ಗೆ 14 ದಿನ ನ್ಯಾಯಾಂಗ ಬಂಧನ, ಜಾಮೀನು ಸಿಗುತ್ತಾ?

Varthur Santosh releaseon on bail

ಬೆಂಗಳೂರು: ಹುಲಿಯುಗುರು (Tiger Nail) ಹೊಂದಿದ ಲಾಕೆಟ್‌ ಧರಿಸಿದ್ದ ಆಪಾದನೆ ಮೇರೆ ಬಂಧಿತರಾದ ಬಿಗ್‌ ಬಾಸ್‌ ಸೀಸನ್‌ 10 (BBK Season 10) ಸ್ಪರ್ಧಿ ವರ್ತೂರು ಸಂತೋಷ್‌ (Varthur santhosh arrest) ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ (Judicial custody) ವಿಧಿಸಲಾಗಿದೆ. ರಾಮೋಹಳ್ಳಿ ಅರಣ್ಯಾಧಿಕಾರಿಗಳಿಂದ ಬಂಧಿತರಾಗಿರುವ ಅವರನ್ನು 2ನೇ ಎಸಿಜೆಎಂ ಕೋರ್ಟ್‌ಗೆ ಹಾಜರುಪಡಿಸಿದ ವೇಳೆ ಅವರಿಗೆ ನ್ಯಾಯಾಧೀಶರು ನವೆಂಬರ್‌ 6ರವರೆಗೆ ನ್ಯಾಯಾಂಗಬಂಧನ ವಿಧಿಸಿದರು. ಸಂತೋಷ್‌ ಪರ ವಕೀಲರು ಬುಧವಾರ ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ. ಇದೀಗ ಅವರಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

1972ರ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ (Wild life -Protection- Act 1972) ಅಡಿ ವನ್ಯ ಜೀವಿಗಳ ಮೂಳೆಯನ್ನು ಧರಿಸುವುದು ಅಥವಾ ಚರ್ಮವನ್ನು ಬಳಸುವುದು ಅಪರಾಧವಾಗಿದೆ. ಬಿಗ್‌ ಬಾಸ್‌ ಮನೆಯೊಳಗೆ ಇದ್ದ ಸಂತೋಷ್‌ ಅವರು ಹುಲಿ ಉಗುರನ್ನು ಧರಿಸಿರುವುದನ್ನು ಟಿವಿಯಲ್ಲಿ ಗಮನಿಸಿದ ಅರಣ್ಯಾಧಿಕಾರಿಗಳು ಕೇಸು ದಾಖಲಿಸಿಕೊಂಡಿದ್ದರು. ಭಾನುವಾರ ಸಂಜೆ ರಾಜರಾಜೇಶ್ವರಿ ನಗರದ ಬಳಿ ಇರುವ ಬಿಗ್‌ ಬಾಸ್‌ ಮನೆಗೆ ಹೋಗಿ ಬಂಧಿಸಿದ್ದರು. ಅರಣ್ಯ ಇಲಾಖೆ ಕಚೇರಿಯಲ್ಲಿ ವಿಚಾರಣೆ ನಡೆಸಿ ಹಲವಾರು ವಿವರಗಳನ್ನು ಪಡೆದಿದ್ದಾರೆ.

ಕಳೆದ ಮೂರು ವರ್ಷಗಳಿಂದ ಹುಲಿಯುಗುರು ಇರುವ ಲಾಕೆಟ್‌ ಧರಿಸುತ್ತಿರುವುದಾಗಿ ಸಂತೋಷ್‌ ತಿಳಿಸಿದ್ದಾರೆನ್ನಲಾಗಿದೆ. ಅದನ್ನು ಎಲ್ಲಿಂದ ಖರೀದಿಸಲಾಯಿತು ಎಂಬಿತ್ಯಾದಿ ಮಾಹಿತಿಗಳನ್ನು ಪಡೆದುಕೊಂಡಿರುವ ಅಧಿಕಾರಿಗಳು ಬಳಿಕ ಅವರನ್ನು ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದಾರೆ.

ಅರಣ್ಯಾಧಿಕಾರಿಗಳು ಅವರ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮರಳಿ ಕಸ್ಟಡಿಗೆ ನೀಡುವಂತೆ ಕೇಳಿಲ್ಲ. ಹೀಗಾಗಿ ನ್ಯಾಯಮೂರ್ತಿಗಳಾದ ನರೇಂದ್ರ ಅವರು ಹೆಚ್ಚಿನ ವಿಚಾರಣೆ ಇಲ್ಲದೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಇದನ್ನೂ ಓದಿ: varthur santhosh arrest : ನಾಯಿಗೆ ಹೊಡ್ದಂಗ್‌ ಹೊಡೀತಾರೆ; ಅರೆಸ್ಟ್‌ ಆಗೋ ಮುನ್ನ ಭವಿಷ್ಯ ಹೇಳಿದ್ದ ಸಂತೋಷ್‌

ಹುಲಿಯ ಉಗುರು ಹೌದೇ ಅಲ್ಲವೇ?

ಈ ನಡುವೆ, ಸಂತೋಷ್‌ ಅವರ ಪರವಾಗಿ ಬುಧವಾರ ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂದು ಅವರ ಪರ ವಕೀಲ ನಟರಾಜ್‌ ಹೇಳಿದ್ದಾರೆ. ಉಗುರು ಹುಲಿಯದ್ದು ಎಂದು ಹೇಳಿದ್ದಾರೆ. ಆದರೆ, ಹೌದೋ ಅಲ್ಲವೋ ಎನ್ನುವುದು ಎಫ್‌ಎಸ್‌ಎಲ್‌ ವರದಿ ಬಂದ ಮೇಲೆ ತಿಳಿಯಲಿದೆ ಎಂದು ಹೇಳಿರುವ ಅವರು ಈ ಉಗುರು ಮತ್ತು ಲಾಕೆಟ್‌ ಖರೀದಿಗೆ ಸಂಬಂಧಿಸಿ ಯಾವುದೇ ಬಿಲ್‌ ಇಲ್ಲ ಎಂದಿದ್ದಾರೆ.

ಜಾಮೀನು ಸಿಗುವ ರೀತಿ ಪ್ರಕರಣ ದಾಖಲು?

ಈ ನಡುವೆ, ಪರಿಸರವಾದಿ ಜೋಸೆಫ್ ಹೂವರ್ ಅವರು, ಈ ಪ್ರಕರಣದಲ್ಲಿ ಸಂತೋಷ್‌ ಅವರಿಗೆ ಜಾಮೀನು ಸಿಗುವ ರೀತಿಯಲ್ಲಿ ಕೇಸು ದಾಖಲಾಗಿದೆ ಎಂದು ಹೇಳಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 9 ಹಾಗೂ 50 ಪ್ರಕಾರ ಪ್ರಕರಣ ದಾಖಲು ಆಗಿದೆ. ಆರೋಪ ದೃಢ ಆದರೆ ಇನ್ನು ಬೇರೆ ಬೇರೆ ಕಾಯ್ದೆ ಅಡಿ ಕೇಸ್ ಹಾಕಬಹುದು. ಈಗ ಅವರು ಜಾಮೀನು ಪಡೆದು ಹೊರಬರುವ ರೀತಿ ಪ್ರಕರಣ ದಾಖಲು ಆಗಿದೆ/

ಈಗ ಪತ್ತೆ ಆಗಿರುವ ಉಗುರನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿ ಪರೀಕ್ಷೆ ಮಾಡಲಾಗುತ್ತದೆ. ಆ ನಂತರ ಅದು ನಿಜವಾದ ಹುಲಿಯ ಉಗುರ ಅಥವಾ ನಕಲಿನ ಅಂತ ದೃಢ ಆಗುತ್ತದೆ ಎಂದು ಹೂವರ್‌ ಹೇಳಿದ್ದಾರೆ.

ʻʻಯಾವುದೇ ವ್ಯಕ್ತಿ ವನ್ಯಜೀವಿಗಳ ದೇಹದ ಭಾಗಗಳನ್ನು ಇಟ್ಟು ಕೊಳ್ಳಬೇಕು ಅಂದರೆ ಅದಕ್ಕೆ ಅನುಮತಿ ಪಡೆಯಬೇಕು. ಅದು ವಂಶ ಪಾರಂಪರ್ಯವಾಗಿ ಬಂದಿದ್ದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ತಿಳುವಳಿಕೆ ಇಲ್ಲ ಅಂತ ಸಬೂಬು ನೀಡುವುದು ತಪ್ಪು ಹಾಗೂ ಅಪರಾಧವಾಗುತ್ತದೆʼʼ ಎಂದು ಅವರು ವಿವರಿಸಿದ್ದಾರೆ.

ಸಂತೋಷ್ ಅವರು ಯಾರಿಂದ ಈ ಉಗುರನ್ನು ಪಡೆದಿದ್ದಾರೆ ಅನ್ನುವುದನ್ನು ಪತ್ತೆ ಮಾಡಬೇಕು. ಸದ್ಯ ತಂತ್ರಜ್ಞಾನ ಮುಂದುವರೆದಿದ್ದು, ಹುಲಿಯ ಉಗುರಿನಿಂದ DNA ಪತ್ತೆ ಹಚ್ಚುತ್ತಾರೆ. ಅದರಿಂದ ಹುಲಿಯ ಕುರಿತ ಎಲ್ಲ ಮಾಹಿತಿ ಸಹ ಲಭ್ಯ ಆಗುತ್ತದೆ ಎಂದು ಜೋಸೆಫ್‌ ಹೂವರ್‌ ಹೇಳಿದ್ದಾರೆ.

Exit mobile version