Site icon Vistara News

CT Ravi: ಸಿ.ಟಿ. ರವಿ ವಿರುದ್ಧ ಸಿಡಿದ ವೀರಶೈವ-ಲಿಂಗಾಯತ ಸಮುದಾಯ; ಕ್ಷಮೆ ಕೇಳದಿದ್ದರೆ ವಾರದಲ್ಲಿ ಮುತ್ತಿಗೆ ಎಚ್ಚರಿಕೆ

c t raviacvuses congress for dividing community

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯಾಧ್ಯಕ್ಷ ಸಿ.ಟಿ. ರವಿ (CT Ravi) ವಿರುದ್ಧ ವೀರಶೈವ ಲಿಂಗಾಯತ ಸಮುದಾಯ (Veerashaiva Lingayat community) ಸಿಡಿದೆದ್ದಿದೆ. ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯ ಕೊಡಬೇಕಿಲ್ಲ ಎಂಬ ಅವರ ಹೇಳಿಕೆ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದ್ದಲ್ಲದೆ, ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ವೀರಶೈವ ಲಿಂಗಾಯತರಿಂದ ಎಂಬುದು ನೆನಪಿರಲಿ ಎಂದು ಹೇಳಿದೆ. ಅಲ್ಲದೆ, ಸಿ.ಟಿ. ರವಿಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್‌ ಕಂಕಣವಾಡಿ, ಸಿ.ಟಿ. ರವಿ ವಿರುದ್ಧ ನೇರವಾಗಿ ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಸಿ.ಟಿ. ರವಿ ಎಲ್ಲಿಯೇ ಚುನಾವಣೆ ಪ್ರಚಾರದಲ್ಲಿ ಕಾಣಿಸಿಕೊಂಡರೂ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. “ಕಿತ್ತೋದ ಸಿ.ಟಿ. ರವಿ” ಎಂದು ಘೋಷಣೆ ಕೂಗುತ್ತೇವೆ ಎಂದೂ ಹೇಳಿದ್ದಾರೆ. ಒಂದು ವಾರದಲ್ಲಿ ಕ್ಷಮೆ ಕೇಳದಿದ್ದರೆ ಮನೆಗೆ ಬಂದು ಮುತ್ತಿಗೆ ಹಾಕಲಾಗುವುದು ಎಂದೂ ಎಚ್ಚರಿಸಿದ್ದಾರೆ.

ಇದನ್ನೂ ಓದಿ: High court observation : 5 ವರ್ಷ ಸಹಮತದ ಸಂಬಂಧ ಇಟ್ಕೊಂಡು ನಂತ್ರ ರೇಪ್‌ ಅಂದ್ರೆ ಆಗುತ್ತಾ?; ಹೈಕೋರ್ಟ್‌ ಪ್ರಶ್ನೆ

ಪತ್ರಿಕಾ ಪ್ರಕಟಣೆಯ ಸಾರಾಂಶ ಇಂತಿದೆ

ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಅನ್ನುವ ಪತ್ರಿಕೆ ಹೇಳಿಕೆ ವಿರುದ್ಧವಾಗಿ ಕರ್ನಾಟಕ ರಾಜ್ಯದಲ್ಲಿ ಸಿ.ಟಿ. ರವಿ ಚುನಾವಣೆ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕುವುದಷ್ಟೇ ಅಲ್ಲ, ಕಿತ್ತೋದ ಸಿ.ಟಿ. ರವಿ ಎಂದು ಘೋಷಣೆ ಕೂಗಬೇಕು. ಕಳೆದ 50 ವರ್ಷಗಳಿಂದ ಇಂತಹ ಕಿತ್ತೋದ ಸಿ.ಟಿ. ರವಿ ಅಂತಹ ತುಂಬಾ ಜನಗಳನ್ನು ವೀರಶೈವ ಲಿಂಗಾಯತ ಸಮಾಜ ನೋಡಿದೆ. ನಮ್ಮ ಸಮಾಜ ಎಷ್ಟೇ ಒಡೆದರೂ, ಚುನಾವಣೆಯಲ್ಲಿ ಒಂದಾಗಿ ತಕ್ಕ ಪಾಠ ಕಲಿಸುತ್ತಿರುವುದು ನೆನಪಿಲ್ಲವೇ?

ವೀರಶೈವ ಲಿಂಗಾಯತ ಸಮಾಜ ತುಂಬಾ ಸೂಕ್ಷ್ಮ ಸಮಾಜವಾಗಿದ್ದು, ಯಾರನ್ನೂ ಕೆಣಕಲು ಹೋಗುವುದಿಲ್ಲ. ಕಾಯಕವೇ ಕೈಲಾಸ ಎಂದು ತಿಳಿದು ತಮ್ಮ ಜೀವನವನ್ನು ನಡೆಸುತ್ತಿದೆ. ನಿನ್ನ ತರಹ ಜೀವನ ಮಾಡಲು ನಮಗೆ ಬರುವುದಿಲ್ಲ ಒಂದು ಸಲ ಸಿಡಿದರೆ ನಿನ್ನಂತಹ ಸಾವಿರಾರು ವ್ಯಕ್ತಿಗಳನ್ನು ಮುಗಿಸಿ ಹಾಕುವುದು ನಮಗೆ ಗೊತ್ತು.

ಸಿ.ಟಿ. ರವಿಯವರೇ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಮಾತನಾಡಲಿಕ್ಕೆ ಏನು ನೈತಿಕತೆ ಇದೆ? ಇಂತಹವರನ್ನು ಬಿಜೆಪಿ ಪಕ್ಷ ತಕ್ಷಣವೇ ಉಚ್ಚಾಟನೆ ಮಾಡಬೇಕು. ವೀರಶೈವ ಲಿಂಗಾಯತ ಸಮಾಜಕ್ಕೆ ಕ್ಷಮೆ ಕೇಳಬೇಕು. ಇಲ್ಲದೇ ಹೋದರೆ ಒಂದು ವಾರದಲ್ಲಿ ನಿಮ್ಮ ಮನೆಗೆ ಬಂದು ಹೋರಾಟ ಮಾಡುತ್ತೇವೆ. ಮಾನಸಿಕ ಅಸ್ವಸ್ಥ ಸಿ.ಟಿ. ರವಿ ಅವರಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಎಚ್ಚರಿಕೆ ನೀಡುತ್ತಿದ್ದೇವೆ.

ಇದನ್ನೂ ಓದಿ: Dharma Dangal : ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿ ದೇವಳದ ಜಾತ್ರೆ ವಿಷಯದಲ್ಲಿ ಶುರುವಾಯಿತು ವ್ಯಾಪಾರ ದಂಗಲ್

ಈ ರೀತಿಯಾಗಿ ಪತ್ರ ಬರೆದಿರುವ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು, ಸಿ.ಟಿ. ರವಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿಯೂ ಎಚ್ಚರಿಕೆಯನ್ನು ನೀಡಿದೆ.

Exit mobile version