Site icon Vistara News

Karnataka Election: ಸೋನಿಯಾ ಗಾಂಧಿ ವಿಷ ಕನ್ಯೆ ಹೇಳಿಕೆ; ಯತ್ನಾಳ್‌ ವಿರುದ್ಧ ಮೈಸೂರಿನಲ್ಲಿ ದೂರು

Basanagowda pateel yatnal on Shivamogga violence

ಮೈಸೂರು: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಷ ಕನ್ಯೆ ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ದಾಖಲಾಗಿದೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಧಿ ವಿರುದ್ಧ ಚುನಾವಣಾ ಪ್ರಚಾರದ (Karnataka Election) ವೇಳೆ ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕ ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಎನ್‌ಎಸ್‌ಯುಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ದೂರು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರು ವಿಷದ ಹಾವು ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿಜಯಪುರ ನಗರ ಬಿಜೆಪಿ ಅಭ್ಯರ್ಥಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿಷದ ಹಾವು ಎಂದಾದರೆ, ಸೋನಿಯಾ ಗಾಂಧಿಯೇನು ವಿಷ ಕನ್ಯೆಯೇ ಎಂದು ಟೀಕಿಸಿದ್ದರು. ಅಲ್ಲದೇ ರಾಹಲ್ ಗಾಂಧಿ ಹುಚ್ಚ ಎಂದು ಜರಿದಿದ್ದರು. ಜತೆಗೆ ಮೌನ್‌ಸಿಂಗ್ (ಡಾ.ಮನಮೋಹನ್ ಸಿಂಗ್) ಅವರು ಪ್ರಧಾನಿಯಾಗಿದ್ದೇ ದುರಂತ ಎಂದು ವ್ಯಂಗ್ಯವಾಡಿದ್ದರು. ಹೀಗಾಗಿ ಶಾಸಕ ಯತ್ನಾಳ್‌ ಹೇಳಿಕೆ ಖಂಡಿಸಿ ಎನ್‌ಎಸ್‌ಯುಐ ದೂರು ಸಲ್ಲಿಸಿದೆ.

ಇದನ್ನೂ ಓದಿ | Karnataka Election 2023: ಕಾಂಗ್ರೆಸ್ ಪರ ನಟ ದರ್ಶನ್, ಸುದೀಪ್ ಪ್ರಚಾರ ಎಂದ ಗೀತಾ ಶಿವರಾಜಕುಮಾರ್

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಮತಯಾಚನೆ ಮಾಡಿದ ವೇಳೆ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಮ್ಮ ಪ್ರಧಾನಿಗಳನ್ನು ಎಲ್ಲೆಡೆ ಕೆಂಪು ಹಾಸಿಗೆ ಹಾಕಿ ಸ್ವಾಗತಿಸಲಾಗುತ್ತಿದೆ. ಇಂತಹ ನಾಯಕರನ್ನು ಖರ್ಗೆ ನಾಗರ ಹಾವಿಗೆ ಹೋಲಿಸುತ್ತಾರೆ. ನಿಮ್ಮ ಪಾರ್ಟಿಯ ಸೋನಿಯಾ ಗಾಂಧಿ ವಿಷಕನ್ಯೆಯೇ? ಚೀನಾ ಮತ್ತು ಪಾಕಿಸ್ತಾನದ ಏಜೆಂಟರಾಗಿ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ್ದರು.

ಸಿದ್ದರಾಮಯ್ಯ ಲಿಂಗಾಯತ ಸಿಎಂಗಳು ಭ್ರಷ್ಟರು ಎಂದು ಹೇಳುತ್ತಾರೆ. ಇಡೀ ಸಮುದಾಯಕ್ಕೆ ಹೋಲಿಸುವುದು ಸರಿಯಲ್ಲ. ಕಾಂಗ್ರೆಸ್‌ನವರೇ ನಿಮಗೆ ಧಮ್‌ ಇದ್ದರೆ ಲಿಂಗಾಯತ ಸಿಎಂ ಘೋಷಣೆ ಮಾಡಿ. ಲಿಂಗಾಯತರಿಗೆ ಮೀಸಲಾತಿ ರದ್ದು ಮಾಡುತ್ತೇನೆ ಎಂದವರು ಠೇವಣಿ ಕಳೆದುಕೊಳ್ಳಬೇಕು. ಬಿಜೆಪಿ ಸ್ಟಾರ್ ಕ್ಯಾಂಪೇನರ್ ಎಂದರೆ ರಾಹುಲ್ ಗಾಂಧಿ ಎಂದು ವ್ಯಂಗ್ಯವಾಡಿದ್ದ ಯತ್ನಾಳ್‌ ಅವರು, ಕಾಂಗ್ರೆಸ್ ಎಕ್ಸ್‌ಪೈರ್‌ ಆಗಿದೆ. ಇನ್ನು ಇವರ ಗ್ಯಾರಂಟಿ ಸ್ಥಿತಿ ಏನು ಎಂದು ವ್ಯಂಗ್ಯವಾಡಿದ್ದರು.

ಇದನ್ನೂ ಓದಿ | Karnataka Election: ವಿಷ-ದ್ವೇಷ ಭಾಷಣ; ಬಿಜೆಪಿ, ಕಾಂಗ್ರೆಸ್‌ನಿಂದ ಚುನಾವಣಾ ಆಯೋಗಕ್ಕೆ ದೂರು

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಬೆಂ.ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇ-ಖಾತಾ ಮಾಡಿಕೊಡಲು 8 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಪಿಡಿಒ, ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಪಿಡಿಒ ಜಿ. ಮಂಜುಳಾ ಆರೋಪಿಯಾಗಿದ್ದಾರೆ.

ಇ-ಖಾತಾ ಮಾಡಿಕೊಡಲು ದೂರುದಾರ ದೊಡ್ಡ ತುಮಕೂರಿನ ನಿವಾಸಿ ಬೈರೇಶ್‌ಗೆ ಪಿಡಿಒ ಮಂಜುಳಾ 8 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಮಂಜುಳಾ ಅವರನ್ನು ವಶಕ್ಕೆ ಪಡೆದು ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version