ಚಿತ್ರದುರ್ಗ/ಕಲಬುರಗಿ: ಪ್ರತ್ಯೇಕ ಪ್ರಕರಣಗಳಲ್ಲಿ ಲಂಚ ಸ್ವೀಕಾರ ಮಾಡುತ್ತಿದ್ದ ಪಶುವೈದ್ಯಾಧಿಕಾರಿ ಮತ್ತು ಕಾನ್‌ಸ್ಟೆಬಲ್ ಲೋಕಾಯುಕ್ತ ಅಧಿಕಾರಿಗಳಿಗೆ (Lokayukta Raid) ಸಿಕ್ಕಿಬಿದ್ದಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹಸುವಿನ ಪೋಸ್ಟ್ ಮಾರ್ಟಂ ರಿಪೋರ್ಟ್ ನೀಡಲು 6 ಸಾವಿರ ರೂ. ಲಂಚ ಪಡೆಯುತ್ತಿದ್ದ ಪಶುವೈದ್ಯಾಧಿಕಾರಿ ಮತ್ತು ಕಲಬುರಗಿಯಲ್ಲಿ ಪ್ರಕರಣವೊಂದರಲ್ಲಿ ದೂರುದಾರರ ಹೆಸರು ಕೈ ಬಿಡಲು 7 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಪೊಲೀಸ್ ಪೇದೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಹಸುವಿನ ಪೋಸ್ಟ್ ಮಾರ್ಟಂ ರಿಪೋರ್ಟ್ ನೀಡಲು ಲಂಚ ಸ್ವೀಕಾರ; ಪಶುವೈದ್ಯಾಧಿಕಾರಿ ವಿರುದ್ಧ ದೂರು
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರಿನಲ್ಲಿ ಹಸುವಿನ ಪೋಸ್ಟ್ ಮಾರ್ಟಂ ರಿಪೋರ್ಟ್ ನೀಡಲು 6 ಸಾವಿರ ಹಣ ಪಡೆಯುವಾಗ ಪಶು ವೈದ್ಯಾಧಿಕಾರಿ ತಿಪ್ಪೇಸ್ವಾಮಿ ಎಂಬುವವರು ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ದೂರುದಾರ ಸ್ವಾಮಿ ಎಂಬುವವರು ನೀಡಿದ ಮಾಹಿತಿ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪಶುವೈದ್ಯಾಧಿಕಾರಿ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಬೇಕೆಂದರೆ 7 ಸಾವಿರ ರೂಪಾಯಿ ನೀಡಲು ತಿಪ್ಪೇಸ್ವಾಮಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತಗೆ ರೈತ ಸ್ವಾಮಿ ದೂರು ನೀಡಿದ್ದರು. ನಂತರ 6 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಪಶು ವೈದ್ಯಾಧಿಕಾರಿಯನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಳ್ಳಲಾಗಿದೆ.
ದೂರುದಾರರ ಹೆಸರು ಕೈ ಬಿಡಲು ಲಂಚ ಸ್ವೀಕಾರ; ಕಾನ್‌ಸ್ಟೆಬಲ್ ಬಂಧನ
ಕಲಬುರಗಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆ ಸಮೀಪ 7 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಕಾನ್‌ಸ್ಟೆಬಲ್ ಮುಕ್ಕಳಪ್ಪ ನಿಲಜೇರಿ ಎಂಬುವವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಸಂಜನಾ ಬೀರಪ್ಪಾ ಎಂಬುವರ ಬಳಿ ಪೇದೆ ಪ್ರಕರಣವೊಂದರಲ್ಲಿ ದೂರುದಾರರ ಹೆಸರು ಕೈ ಬಿಡಲು 13 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಲೋಕಾಯುಕ್ತ ಎಸ್‌ಪಿ ಎ.ಆರ್. ಕರ್ನೂಲ್ ನೇತೃತ್ವದಲ್ಲಿ ದಾಳಿ ನಡೆಸಿ ಪೇದೆಯನ್ನು ವಶಕ್ಕೆ ಪಡೆಯಲಾಗಿದೆ.
25 ಕೋಟಿ ರೂ. ಮೌಲ್ಯದ ಅಂಬರ್‌ಗ್ರಿಸ್ ವಶ, ಮೂವರ ಸೆರೆ
ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ 25 ಕೋಟಿ ರೂ. ಬೆಲೆಬಾಳುವ ತಿಮಿಂಗಿಲದ ಅಂಬರ್‌ಗ್ರಿಸ್ (ತಿಮಿಂಗಳ ವಾಂತಿ) ವಶಕ್ಕೆ ಪಡೆದು, ಕೇರಳ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿರಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಎಚ್.ಡಿ.ಕೋಟೆ ಮತ್ತು ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸಿ 9.5 ಕೆಜಿ ಅಂಬರ್‌ಗ್ರಿಸ್ ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಮಹೇಶ್ ಮಾರ್ಗದರ್ಶನದಲ್ಲಿ ಎಚ್.ಡಿ.ಕೋಟೆ ಇನ್‌ಸ್ಪೆಕ್ಟರ್ ಶಬ್ಬೀರ್ ಹುಸೇನ್, ಮೈಸೂರು ಕ್ರೈಂ ಬ್ರಾಂಚ್ ಇನ್‌ಸ್ಪೆಕ್ಟರ್ ಪುರುಷೋತ್ತಮ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.
ಎಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್‌ನಲ್ಲಿ ಸಮವಸ್ತ್ರ ಧರಿಸದೆ ಸಾಧಾರಣ ವ್ಯಕ್ತಿಗಳಂತೆ ಇದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕೇರಳದ ಕೊಚ್ಚಿಯಿಂದ ಅಂಬರ್‌ಗ್ರಿಸ್ ತಂದಿರುವ ಮಾಹಿತಿ ಲಭ್ಯವಾಗಿದೆ. ಕೇರಳ ಮೂಲದ ಮೂವರು ಆರೋಪಿಗಳ ಪೈಕಿ ಇಬ್ಬರು ಹಡಗು ನಡೆಸುವ ನಾವಿಕರಾಗಿದ್ದಾರೆ.
ಇದನ್ನೂ ಓದಿ | Electric shock: ಆಟವಾಡುವಾಗ ಹೈಟೆನ್ಶನ್ ವೈರ್ ತಾಗಿ ಬಾಲಕಿ ಸಾವು
ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿರುವುದನ್ನು ಅಂಬರ್‌ಗ್ರಿಸ್ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಖಚಿತಪಡಿಸಿದೆ. ಅಂಬರ್‌ಗ್ರಿಸ್‌ಗೆ ವಿದೇಶದಲ್ಲೂ ಅಪಾರವಾದ ಬೇಡಿಕೆ ಇದೆ, ಇದಕ್ಕೆ ಅಧಿಕ ಬೆಲೆ ಇದೆ. ಹೀಗಾಗಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.