ಬೆಂಗಳೂರು: ತಮ್ಮಲ್ಲಿ ಯಾವುದೇ ಜಾತಿ ಭೇದ ಇಲ್ಲ ಎಂದು ಹೇಳಿಕೊಳ್ಳುವ ಅಬ್ರಾಹಮಿಕ್ (ಮುಸ್ಲಿಂ, ಕ್ರೈಸ್ತ) ಮತಗಳಿಗೆ ಮತಾಂತರವಾದವರಿಗೆ ಎಸ್‌ಸಿಎಸ್‌ಟಿ ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಬಾರದು ಎಂದು ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ಆಗ್ರಹಿಸಿದೆ.
ಮತಾಂತರಗೊಂಡ ಎಸ್‌ಸಿಎಸ್‌ಟಿ ಸಮುದಾಯದವರ ಸ್ಥಿತಿಗತಿ ಹೇಗಿದೆ, ಎಸ್‌ಸಿಎಸ್‌ಟಿ ಸಮುದಾಯದ ಮೇಲೆ ಇದರಿಂದಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಆಯೋಗವನ್ನು ರಚಿಸಿದೆ. ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷದ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮಾತನಾಡಿದರು.
ಪರಿಶಿಷ್ಟ ಜಾತಿಗಳು ತಮ್ಮ ಜಾತಿಗಳ ಆಧಾರದ ಮೇಲೆ ಅವಕಾಶ ವಂಚಿತರಾದ ವ್ಯಕ್ತಿಗಳು ಎಂದು ವಿಎಚ್‌ಪಿ ನಂಬಿದೆ. ಭಾರತೀಯ ಸಂವಿಧಾನದ ಆಶಯದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯ ಹಕ್ಕುಗಳು ಹಿಂದುಗಳಿಗೆ ಮಾತ್ರ ಸೀಮಿತವಾಗಿದೆ. ಆದರೂ ಕ್ರೈಸ್ತ ಮಿಷನರಿಗಳು ಹಾಗೂ ಇಸ್ಲಾಮಿಕ್ ಸಂಘಟನೆಗಳು, ಮತಾಂತರಿತ ಎಸ್‌ಸಿಎಸ್‌ಟಿ ಸಮುದಾಯದವರಿಗೂ ವಿಸ್ತರಣೆ ಆಗಬೇಕು ಎಂದು ಒತ್ತಾಯ ಮಾಡುತ್ತಲೇ ಬಂದಿವೆ. ಎಸ್‌ಸಿ ಹಾಗೂ ಎಸ್‌ಟಿಗಳ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಲು ನಾವು ಅವಕಾಶ ನೀಡುವುದಿಲ್ಲ. ಮತಾಂತರಗೊಂಡ ಎಸ್‌ಸಿಎಸ್‌ಟಿ ಸಮುದಾಯದವರು, ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಿರುವ ಹಕ್ಕುಗಳನ್ನು ಪಡೆಯಲಾಗುವುದಿಲ್ಲ ಎಂದರು.
ಮತಾಂತರಿತರಿಗೆ ಎಸ್‌ಸಿಎಸ್‌ಟಿ ಹಕ್ಕುಗಳನ್ನು ವಿಸ್ತರಿಸಲು ಡಾ. ಬಿ. ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರೂ ಸೇರಿ ಅನೇಕರು ಸಮ್ಮತಿ ನೀಡಿಲ್ಲ. ರಾಜೀವ್ ಗಾಂಧಿ, ಎಚ್.ಡಿ. ದೇವೇಗೌಡ ಹಾಗೂ ಮನಮೋಹನ್ ಸಿಂಗ್ ಅವಧಿಯಲ್ಲಿ ಈ ಬೇಡಿಕೆಗೆ ಮಣಿಯಲು ಮುಂದಾಗಿದ್ದರು, ಆದರೆ ದೇಶಾದ್ಯಂತ ಪ್ರತಿಭಟನೆಗಳು ಆಗಿದ್ದರ ಹಿನ್ನೆಲೆಯಲ್ಲಿ ಸುಮ್ಮನಾದರು.
ಈ ವಿಚಾರದಲ್ಲಿ 2005ರಲ್ಲಿ ರಚನೆಯಾಗಿದ್ದ ಸಚಾರ್ ಸಮಿತಿ, 2009ರಲ್ಲಿ ರಚನೆಯಾಗಿದ್ದ ರಂಗನಾಥ್ ಸಮಿತಿ ಕೆಲವು ಶಿಫಾರಸುಗಳನ್ನು ಮಾಡಿವೆ. ಆದರೆ ಅವುಗಳಲ್ಲಿದ್ದ ಧ್ವಂದ್ವಾತ್ಮಕ ನಿಲುವಿನ ಕಾರಣಕ್ಕೆ ಹಾಗೂ ದೋಷಪೂರಿತ ವಿಧಾನಗಳನ್ನು ಅನುಸರಿಸಿದ್ದರಿಂದ ಜಾರಿ ಮಾಡಲಾಗಿಲ್ಲ. ಮುಸ್ಲಿಂ ಸಂಘಟನೆಗಳು ಹಾಗೂ ಕ್ರೈಸ್ತ ಮಿಷನರಿಗಳು ತಮ್ಮಲ್ಲಿ ಸಾಮಾಜಿಕ ಸಮಾನತೆ ಇದೆ ಎನ್ನುತ್ತಲೇ ಮತ್ತೊಂದು ಕಡೆ ಮೀಸಲಾತಿ ಬೇಡಿಕೆಯನ್ನೂ ಮುಂದಿಡುವುದು ಧ್ವಂದ್ವಾತ್ಮಕ ನಿಲುವಾಗಿದೆ. ಮತಾಂತರ ಗೊಂಡವರಿಗೂ ಎಸ್‌ಸಿಎಸ್‌ಟಿ ಸೌಲಭ್ಯ ವಿಸ್ತರಣೆ ಮಾಡಬೇಕೆಂಬ ಬೀಡಿಕೆಯನ್ನು ಸುಪ್ರೀಂಕೋರ್ಟ್ ಸಹ ತಿರಸ್ಕಾರ ಮಾಡಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಮತಾಂತರದ ಹೆಚ್ಚಳದಿಂದಾಗಿ ಭಾರತದ ಅನೇಕ ಭಾಗಗಳಲ್ಲಿ ಭೌಗೋಳಿಕ ಅಸಮತೋಲನ ಉಂಟಾಗುತ್ತಿದೆ. ಇಂತಹ ಘಟನೆಗಳಿಂದಾಗಿ ಜಮ್ಮು ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳು, ಉತ್ತರ ಪ್ರದೇಶ, ಬಿಹಾರ ಮುಂತಾದೆಡೆ ಪರಿಣಾಮ ಗೋಚರಿಸುತ್ತಿದೆ. ಇದು ರಾಷ್ಟ್ರೀಯ ಏಕತೆಗೆ ಧಕ್ಕೆಯನ್ನು ತರುತ್ತಿದೆ. ಇದು ಧಾರ್ಮಿಕ ಧ್ವೇಷಭಾವನೆಗೆ ಕಾರಣ ಆಗುವುದಷ್ಟೆ ಅಲ್ಲದೆ, ಸರ್ವ ಧರ್ಮ ಸಮಭಾವ ಎಂಬ ಭಾರತದ ಮೂಲ ಗುರುತಿಗೇ ಧಕ್ಕೆ ತರುತ್ತಿದೆ.
ಮತಾಂತರಗೊಂಡುವರು ಎಸ್‌ಸಿಎಸ್‌ಟಿಗಳ ಹಕ್ಕುಗಳನ್ನು ಕಿತ್ತುಕೊಳ್ಳಲು ಅವಕಾಶ ನೀಡಬಾರದು. ಹಣದ ಬಲ, ರಾಜಕೀಯ ಶಕ್ತಿ ಹಾಗೂ ಅಂತಾರಾಷ್ಟ್ರೀಯ ಬೆಂಬಲವನ್ನು ಪಡೆದು ಇವರುಗಳು ಎಸ್‌ಸಿಎಸ್‌ಟಿ ಸಮುದಾಯದವರಿಗೆ ಮೀಸಲಿಟ್ಟಿದ್ದ ಜಾಗಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದರ ಕುರಿತು ವಿಶ್ವ ಹಿಂದು ಪರಿಷತ್, ದೇಶಾದ್ಯಂತ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳುತ್ತದೆ. ಮತಾಂತರಗೊಂಡವರಿಗೆ ಎಸ್‌ಸಿಎಸ್‌ಟಿ ಸೌಲಭ್ಯಗಳನ್ನು ನೀಡುವಂತೆ ಒತ್ತಾಯ ಮಾಡುವುದರ ಹಿಂದಿರುವ ಸಂಚನ್ನು ಬಯಲು ಮಾಡುತ್ತದೆ. ಈಗಾಗಲೆ ಕೇಂದ್ರ ಸರ್ಕಾರ ರಚಿಸಿರುವ ಆಯೋಗವು ಮೊದಲು ಸಮಾಲೋಚನಾ ಸಭೆಗಳನ್ನು ನಡೆಸಬೇಕು. ಈ ಪ್ರಕ್ರಿಯೆಯಲ್ಲಿ ವಿಶವ ಹಿಂದು ಪರಿಷತ್ ಸಕ್ರಿಯವಾಗಿ ಭಾಗವಹಿಸುತ್ತದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ | ಮತಾಂತರಗೊಂಡ ಪರಿಶಿಷ್ಟ ಜಾತಿ ವ್ಯಕ್ತಿಗಳ ಸ್ಥಿತಿಗತಿ ಪರಿಶೀಲನೆಗೆ ಕೇಂದ್ರ ಆಯೋಗ