ಶಿವಮೊಗ್ಗ: ಅಂಗನವಾಡಿಗೆ ಹೋಗಲು ಸರಿಯಾದ ರಸ್ತೆಯಿಲ್ಲ, ಊರಲ್ಲಿ ಕರೆಂಟ್ ಇಲ್ಲ ಎಂದು ೫ ವರ್ಷದ ಬಾಲಕಿಯೊಬ್ಬಳು ಜಿಲ್ಲಾಧಿಕಾರಿ ಅವರ ಮೊರೆ ಹೋಗಿರುವ ವಿಡಿಯೊವೊಂದು ಈಗ ವೈರಲ್ (Video Viral) ಆಗಿದೆ.
ಶಿವಮೊಗ್ಗದ ಸಾಗರ ತಾಲೂಕಿನ ಕಾರ್ಗಲ್ ಬಳಿಯ ಉರುಳುಗಲ್ಲು ಗ್ರಾಮದ 5 ವರ್ಷದ ಬಾಲಕಿ ಸಾನ್ವಿ ಈಗ ಸುದ್ದಿಯಲ್ಲಿದ್ದಾಳೆ. ರಸ್ತೆ ಹಾಗೂ ವಿದ್ಯುತ್ ಸಂಪರ್ಕದ ಬೇಡಿಕೆಯನ್ನು ಜಿಲ್ಲಾಧಿಕಾರಿಗಳ ಮುಂದೆ ಇಟ್ಟಿದ್ದಾಳೆ.
ವಿಡಿಯೊದಲ್ಲೇನಿದೆ?
ಡಿಸಿ ಅಂಕಲ್ ನಮ್ಮೂರಿಗೆ ಯಾವಾಗ ಬರ್ತೀರ? ಕರೆಂಟು ಯಾವಾಗ ಕೊಡ್ತೀರಾ? 8 ಕಿಮೀ ದೂರದ ಅಂಗನವಾಡಿಗೆ ಹೋಗಬೇಕು. ಆದರೆ, ರಸ್ತೆ ಚೆನ್ನಾಗಿಲ್ಲ ಡಿಸಿ ಅಂಕಲ್ ಎಂದು ಶಿವಮೊಗ್ಗದ ಜಿಲ್ಲಾಧಿಕಾರಿಗೆ ಸಮಸ್ಯೆ ಹೇಳಿಕೊಂಡಿದ್ದಾಳೆ.
ಗ್ರಾಮಸ್ಥರ ಪ್ರತಿಭಟನೆ
ಗ್ರಾಮಸ್ಥರು ಈ ಹಿಂದೆ ಹಲವು ಬಾರಿ ಸರಿಯಾದ ರಸ್ತೆ ನಿರ್ಮಿಸಿಕೊಡುವಂತೆ ಪ್ರತಿಭಟನೆ ನಡೆಸಿದಾಗ, ಯಾವ ಅಧಿಕಾರಿಗಳು ಗಮನಹರಿಸಲಿಲ್ಲ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದ್ದಕ್ಕೆ ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ಹಾಕಿದ್ದರು. ಅರಣ್ಯ ಸಿಬ್ಬಂದಿ ವರ್ತನೆ ವಿರೋಧಿಸಿ ಗ್ರಾಮಸ್ಥರು ಪಾದಯಾತ್ರೆ ಕೂಡ ಮಾಡಿದ್ದರು. ಈಗ ಪುಟಾಣಿ ಸ್ವಾನಿ ವಿಡಿಯೊ ಮೂಲಕ ಮೂಲಸೌಕರ್ಯ ಒದಗಿಸಿಕೊಡುವಂತೆ ಹಾಗೂ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾಳೆ.