Site icon Vistara News

ವಿಧಾನಸೌಧ ರೌಂಡ್ಸ್: ಪಾಕ್‌ ಘೋಷಣೆ, ಬಾಂಬ್‌ ಬ್ಲಾಸ್ಟ್‌ ಬಳಿಕ ಮತ್ತಷ್ಟು ಕುಗ್ಗಿದೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಉತ್ಸಾಹ

congress

| ಮಾರುತಿ ಪಾವಗಡ
ಕಳೆದ ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಮತ್ತು ಬಿಜೆಪಿ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆದ್ದಿವೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ ನಾಸೀರ್‌ ಹುಸೇನ್‌ ವಿಜಯೋತ್ಸವ ಸಂದರ್ಭದಲ್ಲಿ ವಿಧಾನಸೌಧದೊಳಗೇ (Vidhana Soudha rounds) ದೇಶದ್ರೋಹದ ಘೋಷಣೆ ಮೊಳಗಿರುವುದು ಕನ್ನಡಿಗರನ್ನು ಕೆರಳಿಸಿದೆ.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಇಂಥ ದೇಶದ್ರೋಹದ ಹೇಳಿಕೆಯನ್ನು ಖಂಡಿಸುವುದನ್ನು ಬಿಟ್ಟು ಮಾಧ್ಯಮಗಳ ವಿರುದ್ಧವೇ ಹರಿಹಾಯ್ದಿರುವುದು ಆಘಾತಕಾರಿಯಾಗಿದೆ. ಈ ಘಟನೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಯಶಸ್ವಿಯಾಗುತ್ತಿವೆ. ಅಂದೇ ಆರೋಪಿಯನ್ನು ಹಿಡಿದು ಒಳಗೆ ಹಾಕಿ ಪ್ರಕರಣದ ಚರ್ಚೆಗೆ ತೆರೆ ಎಳೆಯಬೇಕಿದ್ದ ಕಾಂಗ್ರೆಸ್ ಎಫ್ಎಸ್ಎಲ್ ರಿಪೋರ್ಟ್ ಕಥೆ ಹೇಳಿ ಕಾಲ ಹರಣ ಮಾಡುತ್ತಿದೆ. ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡಲು ಕಾಂಗ್ರೆಸ್ ಈ ಪ್ರಕರಣದಲ್ಲೂ ಎಫ್ಎಸ್ಎಲ್ ರಿಪೋರ್ಟ್ ಮೊರೆ ಹೋಗಿರುವುದು ಎದ್ದು ಕಾಣಿಸುತ್ತಿದೆ.

ಅಭ್ಯರ್ಥಿ ಆಗಲು ಕೈ ಪಕ್ಷದಲ್ಲಿ ಹಿಂದೇಟು

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಗಲು ಕಾಂಗ್ರೆಸ್‌ನ ಕೆಲವು ಆಕಾಂಕ್ಷಿಗಳು ಹಿಂದೇಟು ಹಾಕಿದ್ದಾರೆ. ವಿಧಾನಸೌಧ ಪಡಸಾಲೆಯಲ್ಲಿ ಸಿಕ್ಕಿದ್ದ ಉತ್ತರ ಕರ್ನಾಟಕದ ಆಕಾಂಕ್ಷಿ ಒಬ್ಬರು ವಿಧಾನಸಭಾ ಚುನಾವಣೆ ಬಳಿಕ ಗ್ಯಾರಂಟಿ ಹುಮ್ಮಸ್ಸಿನಲ್ಲಿ ಟಿಕೆಟ್ ಕೇಳಿದ್ದು ನಿಜ. ಆದರೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಬಳಿಕ ದೇಶದಲ್ಲಿ ರಾಜಕೀಯ ವಾತಾವರಣ ಬದಲಾಗಿದೆ. ಮೋದಿ ಪರ ಅಲೆ ಜೋರಾಗಿದೆ. ಹೀಗಾಗಿ ಟಿಕೆಟ್ ಬೇಡ ಅಂದುಕೊಂಡಿದ್ದೇನೆ ಎಂದು ಹೇಳಿದರು. ಈ ನಡುವೆ, ವಿಧಾನಸೌಧದೊಳಗೆ ದೇಶದ್ರೋಹ ಘೋಷಣೆ ಪ್ರಕರಣ ಮತ್ತು ಬೆಂಗಳೂರಿನಲ್ಲಿನ ಬಾಂಬ್ ಬ್ಲಾಸ್ಟ್ ಪ್ರಕರಣಗಳು ಕಾಂಗ್ರೆಸ್‌ಗೆ ಇನ್ನಷ್ಟು ಹೆಚ್ಚು ಹಾನಿ ಮಾಡಿರುವುದು ಕೈ ಅಭ್ಯರ್ಥಿ ಆಕಾಂಕ್ಷಿಗಳನ್ನು ತತ್ತರಗೊಳಿಸಿದೆ.

I.N.D.I.A ವೀಕ್, ಬಿಜೆಪಿಯಲ್ಲಿ ಎಲೆಕ್ಷನ್ ಉತ್ಸಾಹ

ಹತ್ತು ವರ್ಷಗಳ ಸುದೀರ್ಘ ಆಡಳಿತ ನಡೆಸಿ ಮತ್ತೊಂದು ಚುನಾವಣೆಗೆ ಅದೇ ಮುಖ ಇಟ್ಟುಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಯಾಕೆಂದರೆ 2004ರಿಂದ 2014ರವರೆಗೂ ಇದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ಭ್ರಷ್ಟಾಚಾರದ ಆರೋಪಗಳು ನುಂಗಿ ನೀರು ಕುಡಿದವು. ಆದರೆ ಮೋದಿ ವಿಚಾರದಲ್ಲಿ ಆ ಅಸ್ತ್ರಗಳು ವಿಪಕ್ಷಗಳಿಗೆ ಸಿಕ್ತಿಲ್ಲ. ಜತೆಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮಾಡಿಕೊಂಡ I.N.D.I.A ಒಕ್ಕೂಟದಿಂದ ಪಕ್ಷಗಳು ಒಂದೊಂದಾಗಿ ಹೊರಬರುತ್ತಿವೆ. ಇದರಿಂದಾಗಿ ಮೋದಿ ಬಲ ಜಾಸ್ತಿ ಆಗುತ್ತ ಹೋದರೆ, ರಾಹುಲ್ ಗಾಂಧಿ ಬಲ ಇನ್ನಷ್ಟು ಕಡಿಮೆ ಆಗುತ್ತ ಹೋಗುತ್ತಿದೆ.

ಈ ನಡುವೆ ಶನಿವಾರ ರಾತ್ರಿ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ we are ready for race ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ. ಯಾವತ್ತೂ ವಿಪಕ್ಷಗಳು ಆಡಳಿತ ಪಕ್ಷಕಿಂತಲೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ತಂತ್ರಗಾರಿಕೆಯಲ್ಲಿ ಮುಂದಿರಬೇಕು. ಆದರೆ ರಾಹುಲ್ ಆ್ಯಂಡ್‌ ಟೀಮ್ ಈ ವಿಚಾರದಲ್ಲೂ ಹಿಂದೆ ಬಿದ್ದಿರುವುದು ಎದ್ದು ಕಾಣುತ್ತಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಇಲ್ಲದಿರುವುದರಿಂದ ಹಾಲಿ ಸಂಸದರ ಎದೆಯಲ್ಲಿ ಢವಢವ ಶುರುವಾಗಿದೆ. ಹೈಕಮಾಂಡ್ ಅಭ್ಯರ್ಥಿ ಬದಲಾವಣೆ ಯೋಚನೆ ನಿಜ ಇರಬಹುದಾ ಅನ್ನೋ ಟೆನ್ಷನ್ ಶುರುವಾಗಿದೆ. ಒಂದು ಕಡೆ ಮೈತ್ರಿ ಸೀಟ್ ಹಂಚಿಕೆಯಲ್ಲಿ ಗೊಂದಲ, ಮತ್ತೊಂದು ಕಡೆ ಹಾಲಿ ಸಂಸದರ ಬಗ್ಗೆ ನೆಗೆಟಿವ್ ರಿಪೋರ್ಟ್, ಮಗದೊಂದು ಕಡೆ ಸರ್ವೇ ರಿಪೋರ್ಟ್‌ಗಳು, ಜತೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿಕೆಶಿ ತಂತ್ರಗಾರಿಕೆ ನೋಡಿ ಕರ್ನಾಟಕ ನಿರ್ಧಾರ ಮಾಡೋಣ ಎಂಬ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಂತೆ ಕಣಿಸುತ್ತಿದೆ.

ಯತೀಂದ್ರಗೆ ಪರಿಷತ್ ಸ್ಥಾನ ಪಕ್ಕಾ?

ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟು ಕೊಟ್ಟ ಯತೀಂದ್ರ ಸಿದ್ದರಾಮಯ್ಯಗೆ ಬಂಫರ್ ಗಿಫ್ಟ್ ಮುಖ್ಯಮಂತ್ರಿಗಳಿಂದ ಸಿಗಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ನಿಮಗೋಸ್ಕರ ಕ್ಷೇತ್ರ ತ್ಯಾಗ ಮಾಡಿದ್ದಾರೆ, ಪರಿಷತ್ ಸ್ಥಾನ ಕೊಡಿ ಅಂತ ಸಿದ್ದರಾಮಯ್ಯಗೆ ಆಗ್ರಹ ಕೇಳಿ ಬರುತ್ತಿವೆಯಂತೆ. ಆದರೆ ಪರಿಷತ್‌ಗೆ ನೇಮಕ ಮಾಡಿದ್ರೆ ಇಷ್ಟು ದಿನ ದೇವೇಗೌಡರ ಕುಟುಂಬದ ವಿರುದ್ಧ, ಯಡಿಯೂರಪ್ಪ ಕುಟುಂಬದ ವಿರುದ್ಧ ತಾವು ಮಾಡಿದ ಆರೋಪ ತಿರುಗುಬಾಣವಾಗುತ್ತದೆ ಅನ್ನೋ ಆತಂಕದಲ್ಲಿ ಸಿದ್ದರಾಮಯ್ಯ ಇದ್ದಾರೆ. ಆದರೆ ಸಿದ್ದರಾಮಯ್ಯ ಆಪ್ತರು, ನಿಮ್ಮ ಬಳಿಕ ರಾಜಕೀಯ ರಥ ಮುನ್ನಡೆಸಲು ಯತೀಂದ್ರ ಬೇಕು. ಹಾಗಾಗಿ ಅವರನ್ನು ಎಂಎಲ್‌ಸಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಅತ್ತ ಪರಿಷತ್ ಸ್ಥಾನದ ಆಕಾಂಕ್ಷಿಯಾಗಿದ್ದ ಎಚ್.ಎಂ. ರೇವಣ್ಣಗೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನ ಕೊಟ್ಟು ಸಿದ್ದರಾಮಯ್ಯ ಕೈ ತೊಳೆದುಕೊಂಡಿರುವುದರಿಂದ, ಯತೀಂದ್ರ ಸಿದ್ದರಾಮಯ್ಯ ಬಹುತೇಕ ಎಂಎಲ್ಸಿ ಆಗುತ್ತಾರೆ ಅನ್ನೋ ಚರ್ಚೆ ವಿಧಾನಸೌಧ ಪಡಸಾಲೆಯಲ್ಲಿ ನಡೆಯುತ್ತಿದೆ.

Exit mobile version