ಮಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಬ್ಯುಸಿಯಲ್ಲಿ ರಾಜಕೀಯ ನಾಯಕರು ಇದ್ದು, ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಪ್ರಚಾರಕ್ಕೆ, ನಾಮಪತ್ರ ಸಲ್ಲಿಕೆಗೆ ಸಿನಿಮಾ ನಟರನ್ನು ಕರೆಸುವ ಪರಿಪಾಠ ಸಹ ಈ ಹಿಂದಿನಿಂದಲೂ ಬೆಳೆದು ಬಂದಿದೆ. ಈಗ ಬೆಳ್ತಂಗಡಿ ಚುನಾವಣಾ ಅಖಾಡಕ್ಕೆ ನಟ ವಿಜಯ ರಾಘವೇಂದ್ರ ಎಂಟ್ರಿ ಕೊಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಬೆಂಬಲ ಸೂಚಿಸಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವಾರಂ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರಿಗೆ ಬೆಂಬಲ ಸೂಚಿಸಿರುವ ವಿಜಯ ರಾಘವೇಂದ್ರ ಅವರು, ಏಪ್ರಿಲ್ 17ರಂದು ರಕ್ಷಿತ್ ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಲಿದ್ದಾರೆ. ರಕ್ಷಿತ್ ಶಿವರಾಂ ವಿಜಯ ರಾಘವೇಂದ್ರ ಪತ್ನಿಯ ಸಹೋದರರಾಗಿದ್ದು, ಭಾವಮೈದನಿಗೆ ಭಾವನ ಸಪೋರ್ಟ್ ಸಿಕ್ಕಂತಾಗಿದೆ.
ಈ ಹಿನ್ನೆಲೆಯಲ್ಲಿ ವಿಜಯ ರಾಘವೇಂದ್ರ ಅವರು ಕುಟುಂಬ ಸಮೇತರಾಗಿ ರಕ್ಷಿತ್ ಶಿವರಾಂ ಪರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಕೆಲವು ಸಮಯ ಮಾತನಾಡಿದ್ದಾರೆ. ಕ್ಷೇತ್ರದಲ್ಲಿ ಚುನಾವಣಾ ಅಲೆ ಸೇರಿದಂತೆ ನಾಮಪತ್ರ ಸಲ್ಲಿಕೆ ದಿನ ಹೇಗಿರಬೇಕು? ಯಾವ ರೀತಿಯಾಗಿ ಮೆರವಣಿಗೆ ಮಾಡಬೇಕು ಎಂಬಿತ್ಯಾದಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆನ್ನಲಾಗಿದೆ.
ಇದನ್ನೂ ಓದಿ: Karnataka Elections : ಮಹಿಳಾ ಸಬಲೀಕರಣ, ರೈತ ಚೈತನ್ಯ; ಪ್ರಣಾಳಿಕೆಗೆ ಮುನ್ನ ಜೆಡಿಎಸ್‌ನ 12 ಭರವಸೆ ಪ್ರಕಟಿಸಿದ ದೇವೇಗೌಡರು
ರಾಜಕೀಯ ಪ್ರಚಾರದ ಅಖಾಡಕ್ಕೆ ಧುಮುಕಿದ ಬಗ್ಗೆ ವಿಜಯ ರಾಘವೇಂದ್ರ ಪ್ರತಿಕ್ರಿಯೆ ನೀಡಿ, ರಕ್ಷಿತ್ ಶಿವರಾಂ ನನ್ನ ಬಾಮೈದ ಅವರ ಪರ ನಿಲ್ಲುವುದು ನನ್ನ ಕರ್ತವ್ಯ. ನಾನು ರಕ್ಷಿತ್ ಶಿವರಾಂಗೋಸ್ಕರ ಬಂದಿದ್ದೇನೆ. ರಕ್ಷಿತ್ ಶಿವರಾಂ ನಮ್ಮ ಮನೆಯವರು. ಅವರ ಪ್ರತಿ ಕೆಲಸದಲ್ಲಿ ಅವರ ಜತೆ ನಿಂತಿದ್ದೇನೆ. ಅವರು ನನ್ನ ಜತೆ ಬಲವಾಗಿ ನಿಂತಿದ್ದರು. ಆ ಪಕ್ಷ, ಈ ಪಕ್ಷ ಅಂತ ನಾನು ಹೋಗಲ್ಲ. ನಮಗೆ ರಕ್ಷಿತ್ ಮುಖ್ಯ ಎಂದು ಹೇಳಿದರು.
ಬಿ.ಕೆ. ಹರಿಪ್ರಸಾದ್ ಸಂಬಂಧಿ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ವಿಚಾರದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಪೈಪೋಟಿ ಇತ್ತು. ಕಳೆದ ಐದು ವರ್ಷಗಳಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಓಡಾಡಿ ಯುವಕರನ್ನು ಸಂಘಟಿಸುವ ಮೂಲಕ ಟಿಕೆಟ್ ಆಕಾಂಕ್ಷಿಯಾಗಿದ್ದು ರಕ್ಷಿತ್ ಶಿವರಾಂ ಅವರಿಗೆ ಈ ಬಾರಿಯ ಕಾಂಗ್ರೆಸ್ ಟಿಕೆಟ್ ಒಲಿದಿದೆ. ಇವರು ನಿವೃತ್ತ ಐಪಿಎಸ್ ಅಧಿಕಾರಿ ಬಿ.ಶಿವರಾಂ ಅವರ ಪುತ್ರರಾಗಿದ್ದಾರೆ. ಬಿ.ಕೆ. ಶಿವರಾಂ ಅವರು ಹಾಲಿ ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಸಹೋದರರಾಗಿದ್ದಾರೆ.
ಇದನ್ನೂ ಓದಿ: Karnataka Election 2023: ಹಾಲಾಡಿ ಶ್ರೀನಿವಾಸ ಶೆಟ್ಟಿ ಆಶೀರ್ವಾದ ಪಡೆದ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ
ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ನೀಡದಂತೆ ಸಾಕಷ್ಟು ಪ್ರಯತ್ನಗಳು ಬೆಳ್ತಂಗಡಿ ಕಾಂಗ್ರೆಸ್ ವಲಯದಲ್ಲೇ ನಡೆದಿತ್ತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ಪಕ್ಷದ ವೇದಿಕೆಯಲ್ಲಿಯೂ ರಕ್ಷಿತ್ ಶಿವರಾಂ ಅವರನ್ನು ದೂರ ಇರಿಸಲಾಗಿತ್ತು. ಆದರೆ, ರಕ್ಷಿತ್ ಶಿವರಾಂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ಸಿಕ್ಕ ಬೆನ್ನಲ್ಲೇ ಮತ್ತಷ್ಟು ಚುರುಕಾಗಿರುವ ಅವರು, ಕ್ಷೇತ್ರದಲ್ಲಿ ಚುರುಕಿನ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈಗ ಇವರ ಬೆನ್ನಿಗೆ ನಟ ವಿಜಯ ರಾಘವೇಂದ್ರ ಸಹ ನಿಂತಿದ್ದಾರೆ.