Site icon Vistara News

ಜನಸಂಕಲ್ಪ ಯಾತ್ರೆ | ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸಿನದ್ದು: ಸಿಎಂ ಬಸವರಾಜ ಬೊಮ್ಮಾಯಿ

basavaraj bommai 2

ಹೂವಿನಹಡಗಲಿ: ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸಿನದ್ದು. ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ, ಕಪ್ಪ ಕೊಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ,

ಹೂವಿನಹಡಗಲಿಯಲ್ಲಿ ಆಯೋಜಿಸಲಾಗಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಯೊಬ್ಬರು ಕಪ್ಪ ಕೊಡುವ ಬಗ್ಗೆ ಮಾತನಾಡುತ್ತಾರೆ. ಆ ಸಂಸ್ಕೃತಿ ಇರೋದು ಕಾಂಗ್ರೆಸ್ ನಲ್ಲಿ ಮಾತ್ರ. ತಾವು ಅಧಿಕಾರದಲ್ಲಿದ್ದಾಗ ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ, ಕಪ್ಪ ಕೊಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ. ಕಾಂಗ್ರೆಸ್‌ ರಾಜ್ಯಾಧ್ಯಕ್ಷರು ಕಪ್ಪ ಕೊಡಲು ಹೋಗಿಯೇ ಇಡಿ ಕೈಗೆ ಸಿಲುಕಿಕೊಂಡಿದ್ದಾರೆ ಎಂದರು.

ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಮಾತನಾಡಿದ ಬೊಮ್ಮಾಯಿ, ಜನರು ಈಗ ಜಾಗೃತರಾಗಿದ್ದಾರೆ‌‌ . ನಿಮ್ಮ ಆ ಭಾಗ್ಯ ಈ ಭಾಗ್ಯ ಅಂತ ಲೂಟಿ ಮಾಡಿದಿರಿ, ಅನ್ನಭಾಗ್ಯ ಅಂತ ಹೇಳಿ ಕನ್ನ ಭಾಗ್ಯ ಮಾಡಿದಿರಿ, ಎಸ್‌ಸಿಎಸ್‌ಟಿಗೆ ಕೊಳವೆಬಾವಿ ಕೊರೆಸಿದ್ದೇವೆ ಎಂದು ಲೂಟಿ ಮಾಡಿದಿರಿ. ನೀವು ಭಾಗ್ಯ ಕೊಟ್ಟಿದ್ದರೆ ಜನರು ನಿಮ್ಮನ್ನು ಏಕೆ ಸೋಲಿಸುತ್ತಿದ್ದರು‌? ಕರ್ನಾಟಕದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದ್ದರೆ, ಅದು ಕಾಂಗ್ರೆಸ್‌ನ ಭ್ರಷ್ಟಾಚಾರದಿಂದ ಎಂದರು.

ಸುಳ್ಳು ಆಶ್ವಾಸನೆಗಳನ್ನು ನೀಡಿದ ಕಾಂಗ್ರೆಸ್

ಕಾಂಗ್ರೆಸ್ ಪಾದಯಾತ್ರೆ ಶುಕ್ರವಾರ ಬಳ್ಳಾರಿಗೆ ಬರುತ್ತಿದೆ. ನೀವೆಲ್ಲ ಸೇರಿ ಸೋನಿಯಾ ಗಾಂಧಿಗೆ ಎಂಪಿ ಮಾಡಿ ಆರಿಸಿ ಕಳಿಸಿದ್ದೀರಿ. ಅವರು ಆರಿಸಿ ಬಂದ ಮೇಲೆ ಇಲ್ಲಿನ ಸ್ಥಾನಕ್ಕೆ ರಾಜೀನಾಮೆ ನೀಡಿ ಉತ್ತರ ಪ್ರದೇಶಕ್ಕೆ ಹಾರಿ ಹೋದರು. ಆಗ 3,000 ಕೋಟಿ ರೂ. ಪ್ಯಾಕೇಜ್ ಕೊಡುತ್ತೇನೆ ಎಂದು ಹೇಳಿದ್ದರು. 3,000 ಕೋಟಿ ಎಲ್ಲಿ ಹೋಯಿತು? ನಿಮ್ಮ ಮತವನ್ನು ಪಡೆದುಕೊಂಡು, ಈ ಕ್ಷೇತ್ರವನ್ನು ತಿರುಗಿಯೂ ನೋಡದ ಕಾಂಗ್ರೆಸ್ ನವರು ಸುಳ್ಳು ಆಶ್ವಾಸನೆಗಳನ್ನು ನೀಡಿದ್ದಾರೆ. ಈಗ ಅವರ ಮಗ ಬರುತ್ತಿದ್ದಾನೆ. ನಿಮ್ಮ ತಾಯಿಯನ್ನು ಆರಿಸಿ ಕಳಿಸಿದ್ದೆವು, ಅವರು ಏನು ಮಾಡಿದರು? ಈಗ ನೀವು ಏನು ಸುಳ್ಳು ಹೇಳಲು ಬಂದಿದ್ದೀರಿ? ಎಂದು ಜನ ಪ್ರಶ್ನಿಸಬೇಕು. ಈ ಭಾಗದಲ್ಲಿ ಸುಳ್ಳು ನಡೆಯುವುದಿಲ್ಲ ಎಂಬ ಸಂದೇಶ ನೀಡಬೇಕು ಎಂದರು.

ಇದನ್ನೂ ಓದಿ | Bharat jodo | ಯಾತ್ರೆ ವೇಳೆ Pay CM ಟಿ-ಶರ್ಟ್‌ ಧರಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಎಫ್‌ಐಆರ್‌

Exit mobile version