Site icon Vistara News

Medical Negligence: ಅಮಾಯಕ ಬಾಲಕನ ಜೀವ ತೆಗೆದ ಆಸ್ಪತ್ರೆಗೆ ಬೀಗ!

vistara news impact medical negligence

ವಿಜಯನಗರ: ವಿಸ್ತಾರ ನ್ಯೂಸ್ ವರದಿಯಿಂದ ಮತ್ತೊಂದು ಬಿಗ್ ಇಂಪ್ಯಾಕ್ಟ್ (Vistara News impact) ಆಗಿದೆ. KPME ಕಾಯಿದೆ ಉಲ್ಲಂಘಿಸಿ ಅಮಾಯಕ ರೋಗಿಗಳ ಜೀವ ತೆಗೆದ ಆರೋಪದ (medical negligence) ಹಿನ್ನೆಲೆಯಲ್ಲಿ, ಹೊಸಪೇಟೆಯ ಶರಣಂ ಆಸ್ಪತ್ರೆ ಮುಚ್ಚಲು ಆದೇಶ ನೀಡಲಾಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಮರಾವತಿಯಲ್ಲಿರುವ ಶರಣಂ ಆಸ್ಪತ್ರೆಯಲ್ಲಿ ಮೇ 9ರಂದು ಗೌತಮ್ (9) ಎನ್ನುವ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಅಂದೇ ಮೃತನ ಬಂಧುಗಳು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ಮಾಡಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಆರೋಪಿಸಿ ಶವ ಇಟ್ಟು ಪ್ರತಿಭಟನೆ ಮಾಡಿದ್ದರು.

ಈ ಹಿಂದೆಯೂ ಈ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಕೆಲವು ಸಾವುಗಳು ಸಂಭವಿಸಿರುವ ಆರೋಪಗಳು ಇವೆ. ಆಗಲೂ ಆಸ್ಪತ್ರೆ ಎದುರು ಪಾಲಕರು ಶವವಿಟ್ಟು ಪ್ರತಿಭಟನೆ ಮಾಡಿದ್ದರು. ಶವವಿಟ್ಟು ಪ್ರತಿಭಟನೆ ಮಾಡಿದಾಗ ಶಾಸಕ ಗವಿಯಪ್ಪ, DHO ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದನ್ನು ವಿಸ್ತಾರ ನ್ಯೂಸ್ ಬಿತ್ತರಿಸಿತ್ತು.

ಪದೇ ಪದೆ ನಿರ್ಲಕ್ಷ್ಯ ತೋರಿದ ಖಾಸಗಿ ಆಸ್ಪತ್ರೆ ವಿರುದ್ಧ ಇದೀಗ ಆರೋಗ್ಯ ಇಲಾಖೆ ಸಮರ ಸಾರಿದೆ. ಸಾವಿನ ವರದಿ ಆಧರಿಸಿ ವಿಜಯನಗರ ಜಿಲ್ಲಾಡಳಿತ ಡೆತ್ ಆಡಿಟ್‌ಗೆ ಆದೇಶ ನೀಡಿತ್ತು. ವಿಜಯನಗರ ಡಿಸಿ ದಿವಾಕರ್ ಎಂಎಸ್ ಆರೋಗ್ಯ ಇಲಾಖೆಗೆ ತನಿಖೆಗೆ ಸೂಚಿಸಿದ್ದರು. ತನಿಖೆಯ ಬಳಿಕ, ರೋಗಿಗಳ ಜತೆ ಚೆಲ್ಲಾಟವಾಡುವ ಖಾಸಗಿ ಆಸ್ಪತ್ರೆಗೆ ಸದ್ಯ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಸದ್ಯ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಬೇರೆಕಡೆ ಸ್ಥಳಾಂತರ ಮಾಡಲು ಸೂಚಿಸಿದೆ.

KPME (Karnataka Private Medical Establishment Act) ಕಾಯಿದೆಯು ಖಾಸಗಿ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರದ ಅಧಿಕಾರದ ವ್ಯಾಪ್ತಿಯೊಳಗೆ ತರುತ್ತಿದ್ದು, ಆರೋಗ್ಯ ಸೇವೆಯಲ್ಲಿ ಕಳಪೆ ಗುಣಮಟ್ಟ, ನಿರ್ಲಕ್ಷ್ಯ, ಸೇವಾ ನ್ಯೂನತೆಗಳು ಕಂಡುಬಂದಲ್ಲಿ ತಕ್ಕ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡುತ್ತದೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು; 35 ಲಕ್ಷ ಬಿಲ್‌ ಕಟ್ಟಿ ಮೃತದೇಹ ತೆಗೆದುಕೊಳ್ಳಿ ಎಂದ ಆಸ್ಪತ್ರೆ!

ಬೆಂಗಳೂರು: ಅವಳಿ ಮಕ್ಕಳಿಗೆ ಜನ್ಮ ನೀಡಿದ ಬೆನ್ನಲ್ಲೇ ತಾಯಿ (Mother Dies) ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಗರದ ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಅವಧಿಪೂರ್ವ ಹೆರಿಗೆಯಾದ ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಣಂತಿ ಮೃತಪಟ್ಟಿದ್ದಾರೆ. ಇದಕ್ಕೆ ಕ್ಲೌಡ್‌ನೈನ್‌ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಜನನಿ (33) ಮೃತ ಬಾಣಂತಿ. ಕ್ಲೌಡ್‌ನೈನ್‌ (CloudNine) ಆಸ್ಪತ್ರೆಯಲ್ಲಿ ಐವಿಎಫ್‌ ಮೂಲಕ ಜನನಿ ಮತ್ತು ಕೇಶವ್ ದಂಪತಿ ಮಕ್ಕಳನ್ನು ಪಡೆದಿದ್ದರು. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮೇ 2ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗಾಗಿ ದಂಪತಿ ಹೆರಿಗೆ ಪ್ಯಾಕೇಜ್ ಮಾಡಿಸಿದ್ದರು. ಜನನಿಗೆ ಅವಧಿ ಪೂರ್ವ (7.5 ತಿಂಗಳಿಗೆ) ಹೆರಿಗೆ ಆಗಿತ್ತು. ನಂತರ ಆಕೆಗೆ ಜಾಂಡೀಸ್ ಇದೆ, ಲಿವರ್ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದರು, ಪರಿಸ್ಥಿತಿ ಗಂಭೀರವಾಗಿದ್ದರಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ಬುಧವಾರ ಬೆಳಗ್ಗೆ ಜನನಿ ಸಾವನ್ನಪ್ಪಿದ್ದಾರೆ.

ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 30 ಲಕ್ಷ ಬಿಲ್‌ ಆಗಿದ್ದು, ಈ ಬಿಲ್ ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗಿ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಆದರೆ ಕ್ಲೌಡ್‌ನೈನ್‌ ಆಸ್ಪತ್ರೆಯವರ ನಿರ್ಲಕ್ಷ್ಯಕ್ಕೆ ಜನನಿ ಸಾವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಲ್ ಅನ್ನು CloudNine ಆಸ್ಪತ್ರೆಯೇ ಪಾವತಿಸಬೇಕೆಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಜೆ.ಬಿ.ನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ಜನನಿ ಪತಿ ಕೇಶವ್‌ ಪ್ರತಿಕ್ರಿಯಿಸಿ, ಕಳೆದ ತಿಂಗಳು ಪರೀಕ್ಷೆಗೆ ಬಂದಾಗ ವೈದ್ಯರು ಕೆಲವು ಮಾತ್ರೆಗಳನ್ನು ಕೊಟ್ಟಿದ್ದರು. ನಂತರ ನನ್ನ ಹೆಂಡತಿಗೆ ಕಾಲು ಊತ ಸೇರಿ ಆರೋಗ್ಯದಲ್ಲಿ ಕೆಲ ಸಮಸ್ಯೆ ಕಂಡುಬಂತು. ಮೇ 2ರಂದು ತಾರಿಖು ಬೆಳಗ್ಗೆ ಚಿಕಿತ್ಸೆಗೆ ಬಂದಿದ್ದೆವು, ಅಂದು ಎರಡು ಮಗು ಡೆಲಿವರಿ ಆಯ್ತು. ಆವತ್ತು ಬೆಳಗ್ಗೆ 11 ಗಂಟೆಗೆ ಹೆಂಡತಿಯನ್ನು ಮಾತನಾಡಿಸಿದಾಗ ಚೆನ್ನಾಗಿದ್ದಳು. ಇದ್ದಕ್ಕಿದ್ದಂತೆ ಸೀರಿಯಸ್ ಆಗಿದೆ ಎಂದರು. ನಂತರ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದರು. ಈಗ ಪೇಮೆಂಟ್ ಮಾಡಿದರೆ ಮಾತ್ರ ನನ್ನ ಹೆಂಡತಿ ಮೃತದೇಹ ಸಿಗುತ್ತೆ ಎನ್ನುತ್ತಿದ್ದಾರೆ. 11 ಲಕ್ಷದ ಮೆಡಿಸಿನ್ ತಂದಿದ್ದೆ. 30 ಲಕ್ಷ ಬಿಲ್ ಆಗಿದೆ. ಇವರು ಮಾಡಿದ ತಪ್ಪಿನಿಂದ ನಮಗೆ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ.

ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ ಹೆರಿಗೆಗೆ 1 ಲಕ್ಷ 30 ಸಾವಿರ ಪ್ಯಾಕೇಜ್ ಇತ್ತು. ಇಲ್ಲೂ 25 ಲಕ್ಷ ಬಿಲ್ ಆಗಿದೆ, ಮಣಿಪಾಲ್‌ ಆಸ್ಪತ್ರೆಯಲ್ಲೂ 30 ಲಕ್ಷ ಬಿಲ್ ಆಗಿದೆ. ಇವರ ಎಡವಟ್ಟಿನಿಂದ ಅಲ್ಲಿ ಹಣ ಕಟ್ಟಿ ಮೃತದೇಹ ತರಬೇಕಾದ ಪರಿಸ್ಥಿತಿ ಬಂದಿದೆ. ಈಗ ತಪ್ಪು ನೀವು ಮಾಡಿದ್ದು, ನೀವೇ ಪರಿಹಾರ ನೀಡಬೇಕು ಎಂದು ಕೇಳಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

Exit mobile version