ಹೊಸಪೇಟೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಮಿತಿ ಮೀರಿದ್ದು, ವಿಧಾನಸೌಧದ ಗೋಡೆಗಳೂ ಲಂಚ, ಲಂಚ, ಲಂಚ ಎಂದು ಪಿಸುಗುಟ್ಟಿತ್ತಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಘ್ದಾಳಿ ನಡೆಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ (Prajadhwani) ಸಮಾವೇಶದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಮಾತನಾಡಿದರು.
ಪ್ರಜಾಧ್ವನಿ ಯಾತ್ರೆಯ ಮೂಲಕ ನಮ್ಮ ಪಕ್ಷದ ಎಲ್ಲಾ ನಾಯಕರು 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಸಮಾವೇಶಗಳಲ್ಲಿ ಭಾಗವಹಿಸಿ, ಜನರ ಧ್ವನಿಯನ್ನು ಆಲಿಸುವ ಕೆಲಸ ಮಾಡಲಿದ್ದೇವೆ. ಈ ಯಾತ್ರೆಯ ಮೂಲಕ ಜನರ ಧ್ವನಿಯನ್ನು ಆಲಿಸಿ ಮುಂದೆ ಅಧಿಕಾರಕ್ಕೆ ಬಂದರೆ ಅದರಂತೆ ನಡೆಯುವ ಕೆಲಸ ಮಾಡುತ್ತೇವೆ. ನಮ್ಮದು ನುಡಿದಂತೆ ನಡೆಯುವ ಪಕ್ಷ. ನಾವು ಚುನಾವಣಾ ಕಾಲದಲ್ಲಿ ನೀಡುವ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸ ಮಾಡುತ್ತೇವೆ.
2013ರ ಚುನಾವಣೆಯಲ್ಲಿ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿ, 2013ರಿಂದ 2018 ರವರೆಗೆ ನಾವು ಅಧಿಕಾರದಲ್ಲಿದ್ದಾಗ 158 ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿ ಅವರು ಬೇಕಾದರೆ ನಮ್ಮ ಪ್ರಣಾಳಿಕೆ ಮತ್ತು ಅವುಗಳನ್ನು ಈಡೇರಿಸಿದ ಮಾಹಿತಿಯನ್ನು ನೋಡಬಹುದು. ಬಿಜೆಪಿ ಪಕ್ಷ 2018ರಲ್ಲಿ 600 ಭರವಸೆಗಳನ್ನು ನೀಡಿತ್ತು, ಬಸವರಾಜ ಬೊಮ್ಮಾಯಿ ಅವರು ಈ 600 ಭರವಸೆಗಳಲ್ಲಿ ಎಷ್ಟು ಈಡೇರಿಸಿದರೆ ಎಂಬುದನ್ನು ಹೇಳಬೇಕು. ಈ ಬಗ್ಗೆ ಹಲವು ಬಾರಿ ನಾನು ಚರ್ಚೆಗೆ ಆಹ್ವಾನವನ್ನು ನೀಡಿದ್ದೇನೆ, ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದ್ದರೆ ಒಂದೇ ವೇದಿಕೆ ಮೇಲೆ ಈ ವಿಚಾರವನ್ನು ಚರ್ಚೆ ಮಾಡೋಣ ಬನ್ನಿ. ನಮ್ಮ ಸರ್ಕಾರ ಪ್ರಣಾಳಿಕೆ ಹೊರತಾಗಿ 30 ಹೆಚ್ಚುವರಿ ಕಾರ್ಯಕ್ರಮವನ್ನು ಜನರಿಗೆ ಕೊಟ್ಟಿದ್ದೇವೆ. ಬಿಜೆಪಿಗೆ 600ರಲ್ಲಿ 10% ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಬೊಮ್ಮಾಯಿ ಅವರೇ ಎಷ್ಟು ಸುಳ್ಳು ಹೇಳುತ್ತೀರಿ? ಬಿಜೆಪಿ ಎಂದರೆ ಸುಳ್ಳಿನ ಫ್ಯಾಕ್ಟರಿ ಎಂದರು.
ತುಂಗಭದ್ರಾ ಈ ನಾಡಿನ ಜೀವನಾಡಿ. ತುಂಗಭದ್ರಾ ಅಣೆಕಟ್ಟಿನಲ್ಲಿ 130 ಟಿಎಂಸಿ ನೀರು ಸಂಗ್ರಹವಾಗಬೇಕು ಆದರೆ ಹೂಳು ತುಂಬಿರುವುದರಿಂದ 37 ಟಿಎಂಸಿ ನೀರಿನ ಶೇಖರಣೆ ಕಡಿಮೆಯಾಗಿದೆ. ಇಷ್ಟರ ಮಟ್ಟಿಗೆ ಜನರಿಗೆ ಅನ್ಯಾಯ ಆಗಿದೆ. ಆಂದ್ರಪ್ರದೇಶಕ್ಕೆ 200 ಟಿಎಂಸಿ ನೀರು ಹರಿದುಹೋಗುತ್ತಿದೆ, ಅದಕ್ಕೆ ಪರ್ಯಾಯ ಅಣೆಕಟ್ಟು ಕಟ್ಟುತ್ತೇವೆ ಎಂದು ಬಿಜೆಪಿ ಭರವಸೆ ನೀಡಿತ್ತು, ಅವರಿಂದ ಕಟ್ಟಲು ಸಾಧ್ಯವಾಗಿದೆಯಾ? ನಾನು ಇಂದು ಈ ಭಾಗದ ಜನರಿಗೆ ಮಾತು ಕೊಡುತ್ತೇನೆ, ನಾವು ಅಧಿಕಾರಕ್ಕೆ ಬಂದರೆ ಸಮನಾಂತರ ಅಣೆಕಟ್ಟನ್ನು ಕಟ್ಟುತ್ತೇವೆ. ಇದಕ್ಕೆ ಎಷ್ಟು ಹಣ ಬೇಕಾದರೂ ಖರ್ಚಾಗಲಿ ನಾವು ಅದನ್ನು ಒದಗಿಸುತ್ತೇವೆ.
ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿಗೆ 5 ವರ್ಷಗಳಲ್ಲಿ 1 ಲಕ್ಷದ 50 ಸಾವಿರ ಕೋಟಿ ಹಣ ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಎಷ್ಟು ಖರ್ಚು ಮಾಡಿದ್ದೀರಿ ಬೊಮ್ಮಾಯಿ? ಈ ವರ್ಷದ ಕೊನೆಗೆ ಖರ್ಚಾಗುವುದು 45 ಸಾವಿರ ಕೋಟಿ ಮಾತ್ರ. ಇನ್ನೂ 1 ಲಕ್ಷ ಕೋಟಿ ಹಣ ಖರ್ಚು ಮಾಡಲು ಸಾಧ್ಯವಾಗಿಲ್ಲ. ಪಕ್ಷದ ನಾಯಕರ ಜೊತೆ ಈ ಹಿಂದೆ ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿ, ನಾವು ಅಧಿಕಾರಕ್ಕೆ ಬಂದರೆ ಪ್ರತೀ ವರ್ಷ ನೀರಾವರಿಗೆ 10,000 ಕೋಟಿ ಖರ್ಚು ಮಾಡುತ್ತೇವೆ ಎಂದು ಘೊಷಣೆ ಮಾಡಿದ್ದೆ. ಇದರಂತೆ ನಾವು 5 ವರ್ಷಗಳಲ್ಲಿ 50,000 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.
ಈಗಾಗಲೇ ನಮ್ಮ ಪಕ್ಷ ಪ್ರತೀ ಮನೆಗೆ 200 ಯುನಿಟ್ ಉಚಿತವಾಗಿ ವಿದ್ಯುತ್ ನೀಡುವುದಾಗಿ ಘೊಷಿಸಿದರೆ, ನಿನ್ನೆ ಪ್ರಿಯಾಂಕ ಗಾಂಧಿ ಅವರು ರಾಜ್ಯದ ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನು ಕೇಳಿದ ಬಸವರಾಜ ಬೊಮ್ಮಾಯಿಗೆ ನಡುಕ ಶುರುವಾಗಿದೆ. ಇಷ್ಟುದಿನ ಮಲಗಿದ್ದ ಸರ್ಕಾರ ಈಗ ಎಚ್ಚರಗೊಂಡು ನಾವು ಮುಂದಿನ ಬಜೆಟ್ ನಲ್ಲಿ ಮಹಿಳೆಯರಿಗಾಗಿ ಕಾರ್ಯಕ್ರಮ ನೀಡುತ್ತೇವೆ ಎಂದು ಜಾಹಿರಾತು ನೀಡಲು ನಾಚಿಕೆಯಾಗಲ್ವಾ? 2018ರ ಚುನಾವಣೆ ವೇಳೆ ಮಹಿಳೆಯರಿಗಾಗಿ ಬಿಜೆಪಿ 21 ಭರವಸೆಗಳನ್ನು ನೀಡಿತ್ತು, ಇದರಲ್ಲಿ ಒಂದನ್ನೂ ಈಡೇರಿಸಿಲ್ಲ. ಬಿಜೆಪಿ ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡವರು, ನಾವು ಅಂಬೇಡ್ಕರರ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡವರು.
ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಟ್ಟುತ್ತದೆ. ಮೊದಲು ಬಾರಿಗೆ ಬೊಮ್ಮಾಯಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಹೆಸರು ಬಂದಿದೆ. ಸಂತೋಷ್ ಪಾಟೀಲ್, ಪ್ರಸಾದ್ ಎಂಬ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಶಿವಕುಮಾರ್ ಎಂಬ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದರು. ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ 90 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆಡಿಯೋ ಅನ್ನು ನಿನ್ನೆ ಮಂಜುನಾಥ್ ಎಂಬ ಗುತ್ತಿಗೆದಾರ ಬಿಡುಗಡೆ ಮಾಡಿದ್ದಾರೆ. ಕಮಿಷನ್ ಆರೋಪಗಳ ಬಗ್ಗೆ ತನಿಖೆ ಮಾಡಿಸಲು ಸಾಕ್ಷಿ ಕೊಡಿ ಎಂದು ಬೊಮ್ಮಾಯಿ ಕೇಳುತ್ತಿದ್ದರು, ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಬೊಮ್ಮಾಯಿ?
ಇಂದಿರಾ ಕ್ಯಾಂಟೀನ್ ಮುಚ್ಚುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಈಗ ಬಂದ್ ಆಗಿರುವ ಎಲ್ಲಾ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯುವ ಕೆಲಸ ಮಾಡುತ್ತೇವೆ. ಹೊಸಪೇಟೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಅದಕ್ಕೆ ಕೊಳಚೆ ನೀರು ಸೇರಿ 200 ಜನ ಅಸ್ವಸ್ಥರಾಗಿದ್ದಾರೆ, ಒಬ್ಬ ಮಹಿಳೆ ಮೃತಪಟ್ಟಿದ್ದಾಳೆ. ಇದನ್ನು ಸಚಿವ ಆನಂದ್ ಸಿಂಗ್ ಕೂಡ ಒಪ್ಪಿಕೊಂಡಿದ್ದಾರೆ. ನಿಮಗೆ ಮಾನ ಮರ್ಯಾದಿ ಇದ್ದರೆ ಪ್ರಕರಣದ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಆನಂದ್ ಸಿಂಗ್ ಅವರಿಗೆ ಹೇಳುತ್ತೇನೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಪ್ರಜಾಧ್ವನಿ ರಾಜ್ಯದ ಜನರ ಧ್ವನಿಯಾಗಲಿದೆ. ಕಟ್ಟುವುದು ಕಾಂಗ್ರೆಸ್ ಸಾಧನೆ, ಮಾರಾಟ ಮಾಡೋದು ಮೋದಿ ಸಾಧನೆ. ಯೂನಿವರ್ಸಿಟಿ, ಡ್ಯಾಮ್, ರೈಲ್ವೆ, ಬಿಎಸ್ ಎನ್ ಎಲ್ ಎಲ್ಲವನ್ನೂ ಕಾಂಗ್ರೆಸ್ ಕಟ್ಟಿದೆ. ಇದೊಂದು ನಲವತ್ತು ಪರ್ಸೆಂಟ್ ಕಮಿಷನ್ ಸರ್ಕಾರ. ಇದರ ಜತೆಗೆ ಇದೀಗ ಬೆಡ್ ರೂಂ ಬಾತ್ ರೂಂನಲ್ಲಿ ಸ್ಯಾಟ್ರೋ ಕಾರ್ ಓಡಾಡುತ್ತಿದೆ ಎಂದರು.
ಇದನ್ನೂ ಓದಿ | ನಾ ನಾಯಕಿ | ಪ್ರಣಾಳಿಕೆಯ 10% ಘೋಷಣೆಯನ್ನೂ ಬಿಜೆಪಿ ಈಡೇರಿಸಿಲ್ಲ: ಸಿದ್ದರಾಮಯ್ಯ ವಾಗ್ದಾಳಿ