ವಿಜಯನಗರ: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಪತಿ ಕೊಲೆ ಮಾಡಿದ ಘಟನೆ ಕೂಡ್ಲಿಗಿ ತಾಲೂಕಿನ ಬಣವಿಕಲ್ ಗ್ರಾಮದಲ್ಲಿ ನಡೆದಿದೆ. ಪತಿ ಹಾಗೂ ಆತನ ಕುಟುಂಬಸ್ಥರು ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಮೃತಪಟ್ಟವಳ ತಂದೆ ತಾಯಿ ಆರೋಪಿಸಿದ್ದಾರೆ.
ಹೀನಾಬಾನು (23) ಕೊಲೆಯಾದ ಗೃಹಿಣಿ. 2 ವರ್ಷಗಳ ಹಿಂದೆ ಚಿತ್ರದುರ್ಗದ ಮಲ್ಲಾಪುರದ ಹೀನಾಬಾನುಳನ್ನು ಜಾಫರ್ ಸಾಧಿಕ್ ಎಂಬಾತ ಪ್ರೀತಿಸಿ ಮದುವೆಯಾಗಿದ್ದ. ಈಕೆ 7 ತಿಂಗಳ ಹಿಂದೆಯಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಇಬ್ಬರ ನಡುವೆ ವೈಮನಸ್ಸು ತಲೆದೋರಿದ್ದು ಮಹಿಳೆಯ ಸಾವಿಗೆ ಕಾರಣವಾಗಿದೆ. ವಿಚಾರಣೆಗಾಗಿ ಹೀನಾಬಾನು ಪತಿ ಜಾಫರ್ ಸಾಧಿಕ್, ಮಾವ ರಾಜಾಸಾಬ್, ಭಾವ ದಾದಾಪೀರ್, ನಾದಿನಿ ಹೀನಾರನ್ನು ಬಂಧಿಸಲಾಗಿದ್ದು, ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡ ಫೋನ್ ರಿಸೀವ್ ಮಾಡದ್ದಕ್ಕೆ ಹಾಗೂ ಊಟದ ವಿಚಾರದಲ್ಲಿ ಗಂಡ ಹೆಂಡತಿ ಮಧ್ಯೆ ವೈಮನಸ್ಸು ತಲೆದೋರಿತ್ತು. ಗಂಡನ ಜೊತೆ ಮುನಿಸಿಕೊಂಡ ಹೀನಾಬಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜಾಫರ್ ಸಾದೀಕ್ ಕುಟುಂಬಸ್ಥರು ವಾದಿಸಿದ್ದಾರೆ. ರೊಚ್ಚಿಗೆದ್ದಿರುವ ಹೀನಾಬಾನುಳ ಸಂಬಂಧಿಕರು ಜಾಫರ್ ಸಾಧಿಕ್ ಮನೆಗೆ ನುಗ್ಗಿ ಕೈಕೈ ಮಿಲಾಯಿಸಿ ಹೊಡೆದಾಟ ನಡೆಸಿದ್ದಾರೆ. ಗಲಾಟೆಯಲ್ಲಿ ಜಾಫರ್ ಸಾಧಿಕ್ ಕಡೆಯ ಇಬ್ಬರು ಮಹಿಳೆಯರಿಗೆ ಗಾಯವಾಗಿದೆ.
ಇದನ್ನೂ ಓದಿ | Murder Case | ಅದು ಅಪಘಾತವಲ್ಲ ಕೊಲೆ; ಪ್ರಿಯಕರನ ಪ್ರೇಮಪಾಶಕ್ಕೆ ಸಿಲುಕಿ ಪ್ರಾಣಕಾಂತನ ಜೀವ ತೆಗೆದಳು