ವಿಜಯಪುರ: ಜೀವನ ಎನ್ನುವುದು ಎಷ್ಟು ನಶ್ವರ, ಸಾವು ಎನ್ನುವುದು ಯಾವ ಕ್ಷಣ, ಹೇಗೆ ಬೇಕಾದರೂ ಬಂದು ಎರಗಬಹುದು ಎನ್ನುವುದಕ್ಕೆ ನಾವು ಈಗಾಗಲೇ ಸಾಕಷ್ಟು ಜೀವಂತ ಉದಾಹರಣೆಗಳನ್ನು ನೋಡಿದ್ದೇವೆ. ಜಿಮ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವು, ವಾಹನ ಚಲಾಯಿಸುತ್ತಿರುವಾಗಲೇ ಮರಣ, ನಿಂತಲ್ಲಿ, ಕುಳಿತಲ್ಲಿ ಉಸಿರು ಚೆಲ್ಲುವ ವಿದ್ಯಮಾನಗಳನ್ನು ನೋಡಿದ್ದೇವೆ. ಈ ನೋವಿನ ಸಾವಿನ ಆಘಾತದ ಸರಣಿಗೆ ವಿಜಯಪುರ ಜಿಲ್ಲೆಯ (vijayapura News) ತಿಕೋಟ ತಾಲೂಕಿನಲ್ಲಿ ಇನ್ನೊಂದು ತಾಜಾ ಉದಾಹರಣೆ ಸಿಕ್ಕಿದೆ. ಊರ ಜಾತ್ರೆಯ ನಾಟಕದ ವೇಳೆ ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದು (Young man dies while dancing)ಮೃತಪಟ್ಟಿದ್ದಾರೆ. ಇದಕ್ಕೆ ಕಾರಣ ಹೃದಯಾಘಾತ (heart attack) ಎನ್ನಲಾಗುತ್ತಿದೆ.
ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಮೃತಪಟ್ಟ ದುರ್ದೈವಿಯನ್ನು ಶರಣು ಬಾಗಲಕೋಟೆ ಎಂದು ಗುರುತಿಸಲಾಗಿದೆ. ಊರಿನ ಪೋಸ್ಟ್ ಮ್ಯಾನ್ (Post Man) ಆಗಿ ಕೆಲಸ ಮಾಡುತ್ತಿರುವ ಇವರ ವಯಸ್ಸು ಇನ್ನೂ ಕೇವಲ 24.
ನಾಟಕವೊಂದರ ವೇಳೆ ನೃತ್ಯ ಸನ್ನಿವೇಶವಿದ್ದು ಶರಣು ಅವರು ಮಹಿಳಾ ಪಾತ್ರಧಾರಿಯ ಜತೆಗೆ ಡ್ಯಾನ್ಸ್ ಮಾಡುವ ಸನ್ನಿವೇಶದಲ್ಲಿ ಒಮ್ಮೆಗೇ ದೇಹದ ಬಲ ಕಳೆದುಕೊಂಡು ಕುಸಿದು ಬಿದ್ದು ಅಲ್ಲೇ ಮರಣವನ್ನು ಹೊಂದಿದ್ದಾರೆ. ಡ್ಯಾನ್ಸ್ ಮಾಡುವಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಳ್ಳುವ ವಿಡಿಯೊ ಈಗ ವೈರಲ್ ಆಗಿದೆ.
ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕ
ಕೋಟ್ಯಾಳದಲ್ಲಿ ಗ್ರಾಮ ದೇವರ ಜಾತ್ರೆ ನಡೆಯುತ್ತಿದ್ದು, ಇದರ ಹಿನ್ನೆಲೆಯಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನಾಟಕ ತಂಡವನ್ನು ಕರೆಸಿಕೊಳ್ಳಲಾಗಿತ್ತು. ನೂರಾರು ಜನರು ಕುಳಿತು ನಾಟಕ ನೋಡುತ್ತಿದ್ದರು. ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕ ಪ್ರದರ್ಶನ ನಡೆಯುತ್ತಿತ್ತು.
ನಾಟಕ ಪ್ರದರ್ಶನದ ವೇಳೆ ಮಹಿಳಾ ಪಾತ್ರಧಾರಿ ನೃತ್ಯ ಮಾಡುವ ಸನ್ನಿವೇಶವೊಂದು ಬಂದಾಗ ಶರಣು ಅವರು ತಾವೇ ಆಸಕ್ತಿ ವಹಿಸಿ ವೇದಿಕೆಗೆ ಹೋಗಿ ನೃತ್ಯ ಮಾಡಲು ಶುರು ಮಾಡಿದ್ದರು. ಕೆಲವು ನಿಮಿಷ ನೃತ್ಯ ಮಾಡಿದ ಬಳಿಕ ಒಮ್ಮಿಂದೊಮ್ಮೆಗೇ ಅವರು ದೇಹದ ಮೇಲೆ ನಿಯಂತ್ರಣ ಕಳೆದುಕೊಂಡು ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಪ್ರಾಣ ಉಳಿಯಲಿಲ್ಲ.
ಶರಣು ಕೋಟ್ಯಾಳ್ ಅವರು ಇತ್ತೀಚೆಗೆ ಪೋಸ್ಟ್ ಮ್ಯಾನ್ ಆಗಿ ನೇಮಕಗೊಂಡಿದ್ದರು. ಇದರಿಂದಾಗಿ ಮನೆಯಲ್ಲಿ ಸಂಭ್ರಮ ನೆಲೆಯಾಗಿತ್ತು. ಆದರೆ, ವಿಧಿ ಅದನ್ನೀಗ ಕಿತ್ತು ಕೊಂಡಿದೆ.
ಇದನ್ನೂ ಓದಿ: Heart Attack: ಬೆಳಗ್ಗೆ ಬಡ್ತಿ ಸ್ವೀಕರಿಸಿದ ಅಧಿಕಾರಿ ಸಂಜೆ ಹೃದಯಾಘಾತದಿಂದ ಸಾವು!
ಆಟೋದಿಂದ ಇಳಿಯುತ್ತಲೇ ಹಿಂಡಿತ್ತು ಹೃದಯ
ಇತ್ತೀಚೆಗೆ ಬೆಂಗಳೂರಿನಲ್ಲಿ ಬೆಳಗ್ಗೆ ಮನೆಯಿಂದ ಹೊರಟು ಯಾರಾದರೂ ಗ್ರಾಹಕರು ಸಿಗುತ್ತಾರಾ ಎಂದು ಕಾದು ಕುಳಿತು ಬೋರಾಗಿ ಟೀ ಕುಡಿಯಲೆಂದು ಆಟೋದಿಂದ ಇಳಿಯುತ್ತಿದ್ದಾಗಲೇ ಚಾಲಕರೊಬ್ಬರು ಪ್ರಾಣ ಕಳೆದುಕೊಂಡಿದ್ದರು.
ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಘಟನೆ ನಡೆದಿತ್ತು. ಆಟೋ ಚಾಲಕ ತಿಮ್ಮೇಶ್ ಮೃತ ದುರ್ದೈವಿ. ಮೂಲತಃ ಮಂಡ್ಯ ಜಿಲ್ಲೆಯ ತಿಮ್ಮೇಶ್ ಬೆಂಗಳೂರಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಮಂಗಳವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದ ತಿಮ್ಮೇಶ್ ಟೀ ಕುಡಿಯಲು ಆಟೋ ನಿಲ್ಲಿಸಿದ್ದರು. ಆಟೋದಿಂದ ಇಳಿಯುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಎದೆಯನ್ನು ಸಾವರಿಸಿಕೊಳ್ಳುತ್ತಲೇ ಆಟೋದಿಂದ ತಿಮ್ಮೇಶ್ ಇಳಿದಿದ್ದಾರೆ. ನಡುರಸ್ತೆಯಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ತಿಮ್ಮೇಶ್ ಅವರು ಆಟೋದಿಂದ ಇಳಿದು ಹೋಗುವ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.