Site icon Vistara News

MB Patil : ಎಂ.ಬಿ ಪಾಟೀಲ್‌ ಮುಂದಿನ ಮುಖ್ಯಮಂತ್ರಿ ; ಪಂಚಮಸಾಲಿ ಸ್ವಾಮೀಜಿ ಭವಿಷ್ಯ

MB Patil Next Chief minister

ವಿಜಯಪುರ: ಎಂ.ಬಿ ಪಾಟೀಲ್ (MB Patil) ಈಗ ಸಾಮಾನ್ಯ ಮಂತ್ರಿ ಆಗಿದ್ದಾರೆ. ಮುಂಬರುವ ದಿನಗಳಲ್ಲಿ ಸಚಿವ ಎಂಬಿ ಪಾಟೀಲ್ ಮುಖ್ಯಮಂತ್ರಿ ಎಂ.ಬಿ ಪಾಟೀಲ್‌ (Chief Minister MB Patil) ಆಗುತ್ತಾರೆ ಎಂದು ವೀರಶೈವ ಸಮಾಜದ ಪ್ರಮುಖ ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ (Guarantee Samavesha) ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ವೀರಶೈವ ಪಂಚಮಸಾಲಿ ಮೂರನೇ ಪೀಠದ ಪೀಠಾಧಿಪತಿ ಮಹಾದೇವ ಶಿವಾಚಾರ್ಯ ಸ್ವಾಮೀಜಿ (Mahadeva Shivacharya swameeji) ಅವರು ಈ ಭವಿಷ್ಯ ನುಡಿದಿದ್ದಾರೆ. ಅವರು ಜಮಖಂಡಿ ಆಲಗೂರಿನ ವೀರಶೈವ ಪಂಚಮಸಾಲಿ ಮೂರನೇ ಪೀಠದ ಪೀಠಾಧಿಪತಿಯಾಗಿದ್ದಾರೆ (Panchamasali Swameeji). ಇವರು ಬಬಲೇಶ್ವರ ಗುರುಪಾದೇಶ್ವರ ಮಠದ ಪೀಠಾಧಿಪತಿಯೂ ಹೌದು.

ಮುಂಬರುವ ದಿನಗಳಲ್ಲಿ ಎಂ.ಬಿ ಪಾಟೀಲ್ ರಾಜ್ಯದ ಮುಖ್ಯಮಂತ್ರಿ ಆಗಲಿ. ಅವರಿಗೆ ಗುರುಪಾದೇಶ್ವರ ಮಠದ ಆಶೀರ್ವಾದ ಅವಶ್ಯವಾಗಿ ಇದೆ ಎಂದು ಸ್ವಾಮೀಜಿ ತುಂಬಿದ ಸಭೆಯಲ್ಲಿ ಹೇಳಿದರು. ಬಿಜಾಪುರ ಒಂದು ಕಾಲದಲ್ಲಿ ಬರಗಾಲ ಬೀಡು ಅನ್ನಿಸಿಕೊಂಡಿತ್ತು. ಅದನ್ನ ಅಳಿಸಿ ಹಾಕಲು ನೀರಾವರಿ ಸಚಿವರಾಗಿ ತಮ್ಮ ಕರ್ತವ್ಯ ನಿರ್ವಹಿಸಿ ಅಭಿವೃದ್ಧಿ ಮಾಡಿದ್ದಾರೆ. ರೈತರ ಜೀವನವನ್ನು ಬಂಗಾರ ಮಾಡಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ʻʻಎಂ ಬಿ ಪಾಟೀಲ್ ರಿಗೆ ನಮ್ಮ ಆಶೀರ್ವಾದ, ಸಿದ್ದೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಆಗಿದೆ. ಜನರು, ಮಹಿಳೆಯರ ಆಶೀರ್ವಾದ ಇದೆʼʼ ಸ್ವಾಮೀಜಿ ಹೇಳುತ್ತಿದ್ದಂತೆಯೇ, ಮಹಾದೇವ ಶಿವಾಚಾರ್ಯ ಸ್ವಾಮೀಜಿ ಭವಿಷ್ಯವಾಣಿಯನ್ನು ಕೈಮುಗಿದು ಆಲಿಸಿದರು ಸಚಿವ ಎಂ.ಬಿ ಪಾಟೀಲ್‌.

ಬೃಹತ್‌ ಗ್ಯಾರಂಟಿ ಸಮಾವೇಶ, ಎರಡು ತಾಲೂಕಿನ ಫಲಾನುಭವಿಗಳು ಭಾಗಿ

ಬಬಲೇಶ್ವರ ಪಟ್ಟಣದ ಹೊರಭಾಗದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶವನ್ನು ಬಬಲೇಶ್ವರ ಕ್ಷೇತ್ರದ ಶಾಸಕ, ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದ ಸಮಾವೇಶದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಸಾವಿರಾರು ಸಂಖ್ಯೆಯ ಫಲಾನುಭವಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ : Dalit CM : ‌ ಮತ್ತೆ ದಲಿತ ಸಿಎಂ ಕೂಗು; ಮತ ನಮ್ದು, ಲೀಡರ್‌ ಯಾರ್ಯಾರೋ ಎಂದ ಮಹದೇವಪ್ಪ

MB Patil: ದಲಿತ ಸಿಎಂ ಬೇಡಿಕೆಯನ್ನು ಸಮರ್ಥಿಸಿದ ಎಂ.ಬಿ. ಪಾಟೀಲ್‌

ಈ ಕಾರ್ಯಕ್ರಮಕ್ಕೆ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಎಂ.ಬಿ. ಪಾಟೀಲ್‌, ರಾಜ್ಯದಲ್ಲಿ ಕೇಳಿಬಂದಿರುವ ದಲಿತ ಸಿಎಂ ಬೇಡಿಕೆಯನ್ನು ಸಮರ್ಥಿಸಿದರು. ದಲಿತ ಸಿಎಂ ಆಗೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ದಲಿತ ನಾಯಕರು ಸಿಎಂ ಆಗ್ಬೇಕು. ಆದರೆ ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯನವರು ಸಿಎಂ ಇದ್ದಾರೆ. ಮುಂದೊಂದು ದಿನದಲ್ಲಿ ದಲಿತರು ಸಿಎಂ ಆಗೋದರಲ್ಲಿ ತಪ್ಪೇನಿದೆ. ನಿಶ್ಚಿತವಾಗಿಯೂ ದಲಿತ ಸಿಎಂ ಆಗ್ಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

MB Patil : ವಚನಭ್ರಷ್ಟರು ವರ್ಸಸ್‌ ವಚನಪಾಲಕರು

ʻʻಇದು ವಚನ ಭ್ರಷ್ಟರದ್ದು ಮತ್ತು ವಚನ ಪಾಲಕರ ಲೋಕಸಭಾ ಚುನಾವಣೆ. ಬಿಜೆಪಿಗರಿಗೆ ಪ್ರಭು ಶ್ರೀರಾಮನ ಹೆಸರು ಹೇಳುವ ನೈತಿಕತೆ ಇಲ್ಲʼʼ ಎಂಬ ಕಾಂಗ್ರೆಸ್‌ ನಾಯಕ ವಿ.ಎಸ್.ಉಗ್ರಪ್ಪ ಹೇಳಿಕೆಯನ್ನೂ ಎಂ.ಬಿ. ಪಾಟೀಲ್‌ ಸಮರ್ಥಿಸಿದರು.

ʻʻಅವರು ಯಾಕೆ ಯಾವ ಅರ್ಥದಲ್ಲಿ ಈ ಹೇಳಿಕೆಯನ್ನ ನೀಡಿದ್ದಾರೆ ಅಂತ ನೋಡಿ. 2013ರಿಂದ 2018ರ ನಡುವೆ ಸಿಎಂ ಆಗಿದ್ದ ಸಿದ್ಧರಾಮಯ್ಯನವರು 165 ಭರವಸೆಗಳನ್ನ ಕೊಟ್ಟಿದ್ದರು. ಅವುಗಳಲ್ಲಿ 158 ಭರವಸೆಗಳನ್ನ ಈಡೇರಿಸಿದ್ದಾರೆ. ‌ ಈ 158 ಅಲ್ಲದೇ ಮತ್ತೆ 30 ಹೊಸ ಯೋಜನೆಗಳನ್ನು ಹಾಕಿಕೊಂಡರು. ಅದೇ 2018ರಲ್ಲಿ ಯಡಿಯೂರಪ್ಪನವರು 600 ಭರವಸೆಗಳನ್ನ ಕೊಟ್ಟಿದ್ದರು. ಅವುಗಳಲ್ಲಿ 50 ಭರವಸೆಗಳನ್ನು ಕೂಡಾ ಅವರು ಈಡೇರಿಸಲಿಲ್ಲ,. ಹೀಗಾಗಿ ಸ್ವಾಭಾವಿಕವಾಗಿ ವಿ.ಎಸ್. ಉಗ್ರಪ್ಪನವರು ಆ ಪದವನ್ನು ಬಳಕೆ ಮಾಡಿದ್ದಾರೆ. ವಚನ ಭ್ರಷ್ಟರು ಅಂತ ಹೇಳಿದ್ದಾರೆʼʼ ಎಂದು ವಿವರಿಸಿದರು.

ʻʻಈಗ ನಾವು ಏನು ಐದು ಗ್ಯಾರಂಟಿಗಳನ್ನು ಚುನಾವಣೆ ಪೂರ್ವದಲ್ಲಿ ಕೊಟ್ಟಿದ್ದೇವೆಯೋ ಆ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಹೀಗಾಗಿ ಕೊಟ್ಟ ವಚನವನ್ನು ನಾವು ಪಾಲನೆ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ, ನಡೆಯುತ್ತೇವೆ, ಮುಂದೆಯೂ ಸಹ ನಡೆದುಕೊಳ್ಳುತ್ತೇವೆ. ಆದರೆ, ಅವರು ಅವರು ನುಡಿದಂತೆ ನಡೆದಿಲ್ಲʼʼ ಎಂದು ಹೇಳಿದರು.

ಇದನ್ನೂ ಓದಿ : Dalit CM : ದಲಿತ ಸಿಎಂ ಕೂಗಿಗೆ ಸಿದ್ದರಾಮಯ್ಯ ನಿಷ್ಠ ಸಚಿವರ ಬೆಂಬಲ, ಪ್ಲ್ಯಾನ್‌ ಸ್ಪಷ್ಟ?

ನಾಸೀರ್ ಹುಸೇನ್ ಪರ ಸಚಿವ ಎಂ.ಬಿ ಪಾಟೀಲ ಬ್ಯಾಟಿಂಗ್

ಈ ನಡುವೆ, ವಿಧಾನ ಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಅವರನ್ನು ಸಮರ್ಥನೆ ಮಾಡಿದು ಎಂ.ಬಿ. ಪಾಟೀಲ್‌.

ʻʻಯಾರೋ ಒಬ್ಬ ಘೋಷಣೆ ಕೂಗಿದರೆ ಅವರನ್ಯಾಕೆ (ನಾಸೀರ್ ಹುಸೇನ್) ಜವಾಬ್ದಾರಿ ಮಾಡೋದು..? ಯಾರು ಕೂಗಿದ್ದಾರೋ ಅದು ಘೋರ ಅಪರಾಧ. ಅವರನ್ನು ದೇಶದಿಂದ ಗಡಿಪಾರು ಮಾಡಬೇಕುʼʼ ಎಂದು ಹೇಳಿದರು.

Exit mobile version