ವಿಜಯಪುರ: ಬಸ್ ಮೈಮೇಲೆ ಹರಿದು (Bus Accident) ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ದುರ್ಘಟನೆ (Road Accident) ವಿಜಯಪುರ (Vijayapura News) ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಮೃತಪಟ್ಟವರನ್ನು ಅಶೋಕ ಪರ್ಜೆನವರ್ (58) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ಖಾಸಗಿ ಬಸ್, ಸರ್ಕಲ್‌ನಲ್ಲಿ ರಸ್ತೆ ದಾಟುತ್ತಿದ್ದ ಅಶೋಕ ಮೇಲೆ ಹರಿದಿದೆ. ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮರಳೇಕಾಯಿ ತಿಂದು 8 ಮಕ್ಕಳು ಅಸ್ವಸ್ಥ
ಮಂಡ್ಯ: ಮರಳೇಕಾಯಿ ತಿಂದು 8 ಮಂದಿ ಮಕ್ಕಳು ಅಸ್ವಸ್ಥರಾದ ಘಟನೆ (children unwell mandya) ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಉಪ್ಪಾರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮನೆಯೊಂದರ ಹಿಂದೆ ಬೆಳೆದಿದ್ದ ಮರಳೇಕಾಯಿ ಗಿಡದಲ್ಲಿ ಬಿಟ್ಟ ಕಾಯಿಯನ್ನು ನಿನ್ನೆ ಸಂಜೆ ಆಟವಾಡುತ್ತಿರುವಾಗ ಮಕ್ಕಳು ತಿಂದಿದ್ದರು. ಕಾಯಿ ತಿಂದು ಅಸ್ವಸ್ಥಗೊಂಡ ಮಕ್ಕಳ ಪೈಕಿ ಕೆಲವರಿಗೆ ವಾಂತಿಯಾಗಿದೆ. ಕೂಡಲೇ ಮಕ್ಕಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಬಂದಿದ್ದಾರೆ.
ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯ ಚಿಕಿತ್ಸೆಗೆ ಮಕ್ಕಳು ಸ್ಪಂದಿಸುತ್ತಿದ್ದಾರೆ.ಸೃಜನ್ (11), ಜ್ಞಾನವಿ (09) , ಸಿಂಚನ (05), ಆಷಿಕಾ (06), ಭುವನೇಶ್ವರಿ (07), ಚರಣ (09), ಧ್ರುವಚರಣ್ (09), ಚಂದ್ರ (07) ಅಸ್ವಸ್ಥಗೊಂಡ ಮಕ್ಕಳು.
ಮೂರು ತಿಂಗಳ ಮಗು ಬಿಟ್ಟು ತಾಯಿ ಪರಾರಿ
ತುಮಕೂರು: ತಾಯಿಯೊಬ್ಬಳು ರಸ್ತೆ ಬದಿಯಲ್ಲಿ ಮೂರು ತಿಂಗಳ ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಪ್ರಕರಣ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೆಡಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಗುವಿನ ಅಳುವಿನ ಶಬ್ದ ಕೇಳಿ ಆಶಾ ಕಾರ್ಯಕರ್ತೆಯೊಬ್ಬರು ಮಗುವನ್ನ ರಕ್ಷಿಸಿದ್ದಾರೆ. ರಾತ್ರಿ ಊಟ ಮಾಡಿ ವಾಕಿಂಗ್ ಮಾಡುತ್ತಿದ್ದ ಆಶಾ ಕಾರ್ಯಕರ್ತೆ ಕಲಾವತಿ ಅವರಿಗೆ ರಸ್ತೆ ಬದಿಯಲ್ಲಿ ಅಳುತ್ತಿದ್ದ ಮಗುವಿನ ಶಬ್ದ ಕೇಳಿಸಿತ್ತು. ಸ್ಥಳಕ್ಕೆ ಹೋದಾಗ, ಮೂರು ತಿಂಗಳ ಮಗುವನ್ನು ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ.
ಕೂಡಲೇ ನೊಣವಿನಕೆರೆ ಪೊಲೀಸರಿಗೆ ಆಶಾ ಕಾರ್ಯಕರ್ತೆ ಕಲಾವತಿ ಮಾಹಿತಿ ನೀಡಿದ್ದಾರೆ. ಆಂಬ್ಯುಲೆನ್ಸ್ ಮೂಲಕ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಮಗು ಕರೆದೊಯ್ಯಲಾಗಿದೆ. ವೈದ್ಯರು ಮಗುವಿನ ಆರೋಗ್ಯ ತಪಾಸಣೆ ನಡೆಸಿದ್ದು, ಆರೋಗ್ಯವಾಗಿರುವ ಮಗು 4.5 ಕೆಜಿಯಷ್ಟು ತೂಕವಿದೆ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: Leopard attack : ರಾಯಚೂರಿನಲ್ಲಿ ಮೂವರ ಮೇಲೆ ದಾಳಿ ಮಾಡಿ ಕಾಲ್ಕಿತ್ತ ಚಿರತೆ!