ಉಡುಪಿ/ಚಿಕ್ಕಮಗಳೂರು: ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಅಸ್ತಂಗತರಾದ ಹಿನ್ನೆಲೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಬಾಳೆಹೊನ್ನೂರು ರಂಭಾಪುರಿ ಮಠದ ಡಾ.ವೀರಸೋಮೇಶ್ವರ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಪರಂಧಾಮ ಸೇರಿದ ವಿಷಯ ತಿಳಿದು ವಿಷಾದವಾಗಿದೆ. ಆದರೂ ವೈಕುಂಠ ಏಕಾದಶಿ ಪರ್ವದಿನ ಅವರು ತೆರಳಿರುವುದು ಅವರ ಜೀವನ ಸಾರ್ಥಕ್ಯಕ್ಕೆ ಕನ್ನಡಿಯಂತಿದೆ. ಅವರು ಸರಳತೆಗೆ ಪರ್ಯಾಯ ಎಂಬಂತಿದ್ದರು, ಆಡಂಬರದ ಸ್ಪರ್ಶವಿಲ್ಲದೇ ವಿರಕ್ತ ಜೀವನ ನಡೆಸುವವರಿಗೆ ಮಾದರಿಯಾದವರು. ತಮ್ಮ ಸೇವಾ ಕಾರ್ಯಗಳು ಹಾಗೂ ಮಾರ್ಗದರ್ಶನಗಳ ಮೂಲಕ ಅಸಂಖ್ಯ ಜನರ ದುಃಖ ದುಮ್ಮಾನಗಳಿಗೆ ಸಾಂತ್ವನ ಸಮಾಧಾನವನ್ನು ನೀಡುತ್ತಾ ದಾರಿಬೆಳಕಾದವರು. ಋಷಿ ಪರಂಪರೆಯ ಒಂದು ಅಮೂಲ್ಯ ಕೊಂಡಿ ಕಳಚಿರುವುದಕ್ಕೆ ತೀವ್ರ ವಿಷಾದವಾಗಿದೆ. ಅವರ ಆತ್ಮಕ್ಕೆ ಶ್ರೀಕೃಷ್ಣನು ಸದ್ಗತಿಯನ್ನು ಕರುಣಿಸಲಿ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.
ಅಧ್ಯಾತ್ಮ ಲೋಕದ ಅನರ್ಘ್ಯ ರತ್ನವಾಗಿದ್ದ, ತಮ್ಮ ಸಾಧನೆ ಬೋಧನೆ ಮೂಲಕ ಆಧ್ಯಾತ್ಮ ಲೋಕದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದ ಸಿದ್ದೇಶ್ವರ ಶ್ರೀಗಳು ತಮ್ಮ ಸರಳ ಸಾತ್ವಿಕತೆಗೆ ಹೆಸರಾಗಿದ್ದರು. ತಮ್ಮ ಅರ್ಥಪೂರ್ಣವಾದ ಪ್ರವಚನಗಳ ಮೂಲಕ ಜನಮನವನ್ನು ಗೆದ್ದವರಾಗಿದ್ದರು. ಯಾರೊಂದಿಗೂ ದ್ವೇಷ ಅಸೂಯೆಯ ಮಾತುಗಳನ್ನಾಡದೇ ಸಾತ್ವಿಕ ಸಮೃದ್ಧ ಸಮಾಜ ನಿರ್ಮಾಣಗೊಳ್ಳಬೇಕೆಂಬ ಅವರ ಸದಾಶಯದ ನುಡಿಗಳು ಶ್ರೋತೃಗಳ ಮನದಲ್ಲಿ ಹೊಸಬೆಳಕನ್ನು ಮೂಡಿಸುತ್ತಿದ್ದವು. ಅವರ ಅಗಲಿಕೆ ನೋವನ್ನುಂಟು ಮಾಡಿದೆ. ಒಬ್ಬ ಶ್ರೇಷ್ಠ ಸಂತರನ್ನು ಕಳೆದುಕೊಂಡ ದುಃಖ ಎಲ್ಲರಲ್ಲಿ ಆವರಿಸಿದೆ. ಆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಎಲ್ಲರಿಗೂ ಅನುಗ್ರಹಿಸಲಿ ಎಂದು ರಂಭಾಪುರಿ ಶ್ರೀ ಡಾ.ವೀರಸೋಮೇಶ್ವರ ಜಗದ್ಗುರುಗಳು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | Siddheshwar Swamiji | ಸೈನಿಕ ಶಾಲೆಯಲ್ಲಿ ಶ್ರೀಗಳ ಅಂತಿಮ ದರ್ಶನ ಆರಂಭ